ADVERTISEMENT

ಪಿಎಸ್‌ಐ ಅಮಾನತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 10:45 IST
Last Updated 21 ಅಕ್ಟೋಬರ್ 2011, 10:45 IST

ಲಿಂಗಸುಗೂರ: ಯಾದಗಿರಿ ಜಿಲ್ಲೆಯ ಮಿನಾಸಪುರ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಕಾಶಪ್ಪ ಭಜಂತ್ರಿ ಕೊಲೆ ಪ್ರಕರಣ ದಲಿತ ಸಮುದಾಯವನ್ನು ತಲೆತಗ್ಗಿಸುವಂತೆ ಮಾಡಿರುವ ಕೃತ್ಯ ಖಂಡನಾರ್ಹ. ಕೊಲೆ ಪ್ರಕರಣದಲ್ಲಿ ಆರೋಪಿತರಿಗೆ ಪರೋಕ್ಷವಾಗಿ ಬೆಂಬಲಿಸಿದ ಗುರಮಿಠಕಲ್ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಸಂಗಣ್ಣ ಯಾಳಗಿ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಆಗ್ರಹಿಸಿ ತಾಲ್ಲೂಕು ಕೊರಮ (ಭಜಂತ್ರಿ) ಸಮಾಜ ಸೇವಾ ಸಂಘ ಗುರುವಾರ ಪ್ರತಿಭಟನೆ ನಡೆಸಿತು.

ಅಕ್ಟೋಬರ 1ರಂದು ಹಾಡಹಗಲೇ ನಾಲ್ಕು ಜನ ದಲಿತ ರಾಜಕೀಯ ವಿರೋಧಿಗಳು ಕಾಶಪ್ಪನ ರಾಜಕೀಯ ಬೆಳವಣಿಗೆ ಸಹಿಸದೇ ಕೊಲೆ ಮಾಡಿದ್ದಾರೆ. ಈ ಕುರಿತು ಮೃತನ ಪತ್ನಿ ಬಾಲಮಣಿ ಪೊಲೀಸ್ ಠಾಣೆಗೆ ತೆರಳಿ ಆರೋಪಿತರ ಮೇಲೆ ದೂರು ನೀಡಿದ್ದಾರೆ.

ಅವರಿಗೆ ಬೆದರಿಕೆ ಹಾಕಿ ಕೇವಲ ಒಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡು ಇತರರನ್ನು ರಕ್ಷಣೆ ಮಾಡಿರುವ ಪೊಲೀಸ್ ಅಧಿಕಾರಿ ಸೇವೆಯಲ್ಲಿ ಮುಂದುವರೆಯಕೂಡದು ಎಂದು ಒತ್ತಾಯಿಸಿದ್ದಾರೆ.

ದೂರು ನೀಡಲು ಠಾಣೆಗೆ ತೆರಳಿದ್ದ ದಲಿತ ಮಹಿಳೆ ಮೇಲೆ ದೌರ್ಜನ್ಯ ಎಸಗಿರುವ ಹಾಗೂ ಕೊಲೆ ಪ್ರಕರಣದ ಆರೋಪಿಗಳ ರಕ್ಷಣೆಗೆ ಮುಂದಾಗಿರುವ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಯಾಳಗಿ ಅಮಾನತುಗೊಳಿಸಬೇಕು ಎಂದರು.

ಅಖಿಲ ಕರ್ನಾಟಕ ಕೊರಮ (ಭಜಂತ್ರಿ) ಸೇವಾ ಸಂಘದ ತಾಲ್ಲೂಕು ಯುವ ಅಧ್ಯಕ್ಷ ರಾಜೇಶ ಮಾಣಿಕ್, ಗುಂಡಪ್ಪ ಭಜಂತ್ರಿ, ಜೊಸೆಫ್ ಭಜಂತ್ರಿ, ಯಲ್ಲಪ್ಪ, ಮೌನೇಶ, ಮಹಾಂತೇಶ, ಉಮೇಶ, ತಿಮ್ಮಣ್ಣ, ಮಹೇಶ, ಶರಣಬಸವ, ಮಾರುತಿ, ಮಂಜುನಾಥ, ಗದ್ದೆಪ್ಪ, ಹನುಮಂತ, ಆನಂದ, ರವಿ, ಲಕ್ಷ್ಮಣ, ಶಿವರಾಜ, ಬಾಲರಾಜ, ಬಸವರಾಜ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.