ರಾಯಚೂರು: ಮಾನವನ ಜೀವನದಲ್ಲಿ ಹುಟ್ಟು ಸಾವು ಸಹಜವಾಗಿದ್ದು, ಇವೆರಡರ ನಡುವೆ ಬದುಕುವ ಜೀವನದಲ್ಲಿ ಪುಣ್ಯ ಕಾರ್ಯಗಳನ್ನು ಮಾಡಿ ಜೀವನ ಸಾರ್ಥಕತೆ ಮಾಡಿಕೊಳ್ಳಬೇಕು ಎಂದು ಸೋಮವಾರಪೇಟೆ ಹಿರೇಮಠದ ಶ್ರೀ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮಿಗಳು ನುಡಿದರು.
ಇಲ್ಲಿನ ಸೋಮವಾರಪೇಟೆ ಹಿರೇಮಠದಲ್ಲಿ ಪುಟ್ಟರಾಜ ಸಾಂಸ್ಕೃತಿಕ ವೇದಿಕೆಯವತಿಯಿಂದ ಈಚೆಗೆ ಪಂಡಿತ ಪುಟ್ಟರಾಜ ಗವಾಯಿಗಳ ಎರಡನೇ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಸಂಗೀತ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ಜೀವನ ಬಹಳ ಶ್ರೇಷ್ಠವಾದದ್ದು, ಇದನ್ನು ಸೇವೆ ಮಾಡುವುದರ ಮೂಲಕ ಸಾರ್ಥಕತೆ ಮಾಡಿಕೊಳ್ಳಬೇಕು. ಪಂಡಿತ ಪುಟ್ಟರಾಜ ಗವಾಯಿಗಳ ಸಾಮಾಜಿಕ ಕಾರ್ಯ ಮಾಡಿದವರಲ್ಲಿ ಒಬ್ಬರಾಗಿದ್ದಾರೆ. ಅವರು ಅಂಧರ ಬಾಳಿಗೆ ಬೆಳಕು ನೀಡಿದ ಮಹಾಚೇತನ. ಸಮಾಜ ಕಾರ್ಯಗಳಲ್ಲಿ ತಾವು ತೊಡಗಿಸಿಕೊಂಡ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಹಟ್ಟಿ ಚಿನ್ನದ ಗಣಿ ಮಾಜಿ ಅಧ್ಯಕ್ಷ ಗಿರಿಜಾ ಶಂಕರ ಮಾತನಾಡಿ, ಇಂದಿನ ದಿನಗಳಲ್ಲಿ ಸಂಗೀತ ಕ್ಷೇತ್ರದ ಆಸಕ್ತಿ ಕಡಿಮೆ ಆಗುತ್ತಿದೆ. ಸಂಗೀತ ಕ್ಷೇತ್ರದ ಬೆಳವಣಿಗೆಗೆ ದತ್ತಿದಾನಿಗಳಿಂದ ಸಹಾಯಹಸ್ತ ಪಡೆದು ಸಂಗೀತ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಬೇಕು ಎಂದು ತಿಳಿಸಿದರು.
ಆಕಾಶವಾಣಿ ಕಲಾವಿದ ಫಕೀರೇಶ ಕಣವಿ ಹಾಗೂ ದೊಡ್ಡಬಸಯ್ಯಸ್ವಾಮಿ, ಲಕ್ಷ್ಮಿ ಬಿಸ್ನಳ್ಳಿ, ರೇವಣಪ್ಪ ಕುಂಕುಗಾರ, ಹನುಮಂತಪ್ಪ ಕಾಮನಹಳ್ಳಿ, ಮಂಜುನಾಥ ಭಟ್, ಹುಚ್ಚಯ್ಯಸ್ವಾಮಿ ಗದಗ ಹಾಗೂ ಸ್ಥಳೀಯ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಜೆಡಿಎಸ್ ಜಿಲ್ಲಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು, ಸಾಹಿತಿ ಪಂಪಾಪತಿ ಶಾಸ್ತ್ರಿ, ನಗರಸಭೆ ಸದಸ್ಯರಾದ ಯು.ದೊಡ್ಡ ಮಲ್ಲೇಶ, ಟಿ.ಶ್ರೀನಿವಾಸರೆಡ್ಡಿ ಹಾಗೂ ವೆಂಕಟಾಪುರ ಶರಣಪ್ಪ, ವೇದಿಕೆ ಅಧ್ಯಕ್ಷ ಈರಣ್ಣ ಹೂಗಾರ, ಪ್ರಧಾನ ಕಾರ್ಯದರ್ಶಿ ಎ.ಎಸ್ ರಘುವೀರಕುಮಾರ, ಉಪಾಧ್ಯಕ್ಷ ಸಿದ್ಧಯ್ಯಸ್ವಾಮಿ, ಖಜಾಂಚಿ ಪಿ.ಚಿನ್ನಯ್ಯಸ್ವಾಮಿ, ಅಯ್ಯಪ್ಪಸ್ವಾಮಿ, ಎಚ್.ಪಿಕಳಿಹಾಳ, ಮೃತ್ಯುಂಜಯ ಸ್ವಾಮಿ, ಸುಧಾಕರ ಅಸ್ಕಿಹಾಳ, ದಿನ್ನಿಗೌಡಪ್ಪ, ವಿಜಯಕುಮಾರ ದಿನ್ನಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.