ADVERTISEMENT

ಬಳಕಗೆ ಬಾರದ ಜಿಲ್ಲಾ ಕ್ರೀಡಾಂಗಣ

ಅರ್ಧಕ್ಕೆ ನಿಂತಿರುವ ಸಮಗ್ರ ಅಭಿವೃದ್ಧಿ ಕಾಮಗಾರಿ; ಆದರೂ ಉದ್ಘಾಟನೆ

ನಾಗರಾಜ ಚಿನಗುಂಡಿ
Published 2 ಜೂನ್ 2018, 7:14 IST
Last Updated 2 ಜೂನ್ 2018, 7:14 IST
ರಾಯಚೂರಿನಲ್ಲಿ ಉದ್ಘಾಟನೆಯಾಗಿರುವ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದ ನೋಟ
ರಾಯಚೂರಿನಲ್ಲಿ ಉದ್ಘಾಟನೆಯಾಗಿರುವ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದ ನೋಟ   

ರಾಯಚೂರು: ಕಾಮಗಾರಿ ಪೂರ್ಣವಾಗದಿದ್ದರೂ ತರಾತುರಿಯಲ್ಲಿ ಉದ್ಘಾಟನೆ ಗೊಳಿಸಲಾದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣವು ಇದೀಗ ‘ಪೋಲಿ ಆಟ’ಗಳಿಗೆ ಸಿಮೀತವಾಗಿದೆ.

ಕ್ರೀಡಾಪಟುಗಳನ್ನು ಉತ್ತೇಜಿಸಲು ಪೂರಕವಾಗಿಬೇಕಿದ್ದ ಕ್ರೀಡಾಂಗಣವು ಪಡ್ಡೆ ಹುಡುಗರ ಅಡ್ಡಾ ಆಗಿದೆ. ಕ್ರೀಡಾ ಕಸರತ್ತುಗಳನ್ನು ನಡೆಸುವುದಕ್ಕೆ ಸಜ್ಜಾಗಬೇಕಿದ್ದ ಮೈದಾನವು ಇನ್ನೂ ಹಾಳು ಸುರಿಯುತ್ತಿದ್ದು, ಅದನ್ನು ಒಪ್ಪು ಒರಣಗೊಳಿಸುವ ಕೆಲಸ ಮಾತ್ರ ನಡೆಯುತ್ತಿಲ್ಲ.

ಔಪಚಾರಿಕ ಆಟಗಳಿಗೆ ತೆರೆದುಕೊಳ್ಳಬೇಕಿದ್ದ ಮೈದಾನವು ಅನೈತಿಕ ಚಟುವಟಿಕೆಗಳಿಗೆ ಮುಕ್ತವಾಗಿ ತೆರೆದು ಕೊಂಡಿರುವುದರಿಂದ, ಸಭ್ಯರು ವಾಕಿಂಗ್‌ ಮಾಡುವುದಕ್ಕೂ ಸಾಧ್ಯವಾಗದ ವಾತಾವರಣ ಕ್ರೀಡಾಂಗಣದಲ್ಲಿ ಕಾಣುತ್ತಿದೆ. ‘ಮುಕ್ತ ಆಟ’ಗಳಿಗೆ ಯಾವುದೇ ತಡೆತಡೆ ಇಲ್ಲದೆ ಇರುವುದರಿಂದ ಕ್ರೀಡಾಂಗಣವನ್ನು ನಿರ್ಮಾಣ ಮಾಡಿರುವ ಉದ್ದೇಶ ಇನ್ನೂ ಈಡೇರಲು ಸಾಧ್ಯವಾಗಿಲ್ಲ.

ADVERTISEMENT

ಮೈದಾನದಲ್ಲಿ ನಡೆಯುವ ಕ್ರೀಡೆಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಗ್ಯಾಲರಿ ನಿರ್ಮಿಸಲಾಗಿದೆ. ಗ್ಯಾಲರಿಗೆ ಪ್ರವೇಶದ್ವಾರ, ಹೊರ ಹೋಗುವ ಮಾರ್ಗಗಳು ಇನ್ನೂ ಸಮರ್ಪಕವಾಗಿಲ್ಲ. ಗ್ಯಾಲರಿಯ ಕೆಳಭಾಗದಲ್ಲಿ ಪೊಟರೆಗಳಂತೆ ಕಾಣುವ ಜಾಗಗಳಲ್ಲಿ ‘ಯುವಪ್ರೇಮಿಗಳು’ ಆಸರೆ ಪಡೆದುಕೊಳ್ಳುತ್ತಿರುವ ದೃಶ್ಯಗಳು ಕಾಣುತ್ತವೆ. ಉದ್ಯಾನಗಳಲ್ಲಿ ಇರದಷ್ಟು ತಂಪು ವಾತಾವರಣ ಗ್ಯಾಲರಿ ಕೆಳಗಿನ ಪೊಟರೆಗಳಲ್ಲಿದೆ. ಹೀಗಾಗಿ ಹರಟೆಮಲ್ಲರು ಕೂಡಾ ಈ ಪೊಟರೆಗಳಲ್ಲಿ ಕುಳಿತುಕೊಂಡಿರುತ್ತಾರೆ.

ಸದ್ಯಕ್ಕೆ ಕ್ರೀಡಾಂಗಣವು ವಿವಿಧೋದ್ದೇಶಗಳಿಗೆ ಬಳಕೆಯಾಗುತ್ತಿದೆ. ಆದರೆ, ಮುಖ್ಯವಾಗಿ ಕ್ರೀಡಾಂಗಣವನ್ನು ನಿರ್ಮಿಸಿರುವ ಉದ್ದೇಶವನ್ನು ಸಫಲಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಕ್ರಮ ಕೈಗೊಳ್ಳುತ್ತಿಲ್ಲ. ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕ್ರೀಡಾಂಗಣವು ವಿಳಂಬವಾಗುತ್ತಿರುವುದಕ್ಕೆ ಜಿಲ್ಲೆಯ ಕ್ರೀಡಾಪಟುಗಳು, ಕ್ರೀಡಾಸಕ್ತರು ತುಂಬಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

‘ಕಳೆದ ವರ್ಷ ಮಳೆಗಾಲದಲ್ಲಿ ಕೆರೆಯಾಗಿದ್ದ ಕ್ರೀಡಾಂಗಣವನ್ನು ಅಭಿವಋದ್ಧಿ ಮಾಡುತ್ತಿರುವುದನ್ನು ನೋಡಿ ತುಂಬಾ ಖುಷಿಯಾಗಿತ್ತು. ತುಂಬಾ ವೇಗದಲ್ಲಿ ಕ್ರೀಡಾ ಗ್ಯಾಲರಿ ಮಾಡಿದ್ದಾರೆ. ಆದರೆ, ಮೈದಾನ ನಿರ್ಮಾಣ ಮಾಡುವುದಕ್ಕೆ ತುಂಬಾ ವಿಳಂಬ ಮಾಡುತ್ತಿದ್ದಾರೆ. ಇದೀಗ ಮಳೆಗಾಲ ಶುರುವಾಗುತ್ತದೆ. ಮಳೆ ನೀರು ಸಂಗ್ರಹವಾಗಿ ಕೆರೆಯಂತೆ ಕಾಣುತ್ತಿದ್ದ ಕ್ರೀಡಾಂಗಣದ ಚಿತ್ರಣವು ಈ ವರ್ಷ ಕೂಡಾ ಬದಲಾಗುವ ಲಕ್ಷಣಗಳಿಲ್ಲ’ ಎಂದು ಅಥ್ಲೀಟ್‌ ಆಟಗಾರ ಸುನೀಲ ‘ಪ್ರಜಾವಾಣಿ’ ಎದುರು ಅಳಲು ವ್ಯಕ್ತಪಡಿಸಿದರು.

**
ಗ್ಯಾಲರಿ ನಿರ್ಮಾಣ ಮತ್ತು ಪೆವಿಲಿಯನ್‌ ನಿರ್ಮಾಣ ಕಾಮಗಾರಿಗಳು ಬೇರೆ ಬೇರೆ. ವಹಿಸಿದ್ದ ಕೆಲಸಗಳು ಪೂರ್ಣಗೊಂಡಿದ್ದು, ಹೊಸ ಕಾಮಗಾರಿಗೆ ಟೆಂಡರ್‌ ನಡೆದಿದೆ
ಡಾ. ಬಗಾದಿ ಗೌತಮ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.