ADVERTISEMENT

ಬ್ಯಾರೇಜ್ ಸ್ಟಾಪ್‌ಲಾಗ್ ಗೇಟ್ಸ್ ಮಾಯ?

​ಪ್ರಜಾವಾಣಿ ವಾರ್ತೆ
Published 30 ಜೂನ್ 2012, 10:10 IST
Last Updated 30 ಜೂನ್ 2012, 10:10 IST
ಬ್ಯಾರೇಜ್ ಸ್ಟಾಪ್‌ಲಾಗ್ ಗೇಟ್ಸ್ ಮಾಯ?
ಬ್ಯಾರೇಜ್ ಸ್ಟಾಪ್‌ಲಾಗ್ ಗೇಟ್ಸ್ ಮಾಯ?   

ಲಿಂಗಸುಗೂರ(ಮುದಗಲ್ಲ): ತಾಲ್ಲೂಕಿನ ಉಳಿಮೇಶ್ವರ ಬಳಿ ಹರಿದು ಹೋಗುವ ವಿಶಾಲವಾದ  ನಾಗಲಾಪುರ ನಾಲಾ ಪ್ರದೇಶದ ಜನತೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಿಸಿ ಅಂತರ್ಜಲ ಹೆಚ್ಚಿಸುವ ಜೊತೆಗೆ ಜನತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿ ಬಳಸುವ ಸದುದ್ದೇಶ ಮಣ್ಣು ಪಾಲಾಗಿದೆ.

ಬ್ಯಾರೇಜ್‌ನ ಕ್ರೆಸ್ಟ್‌ಗೇಟ್‌ಗಳು ಮಂಗಮಾಯವಾಗಿರುವುದು ಹಲವು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ ಎಂದು ರೈತ ಸಮೂಹ ಆರೋಪಿಸಿದೆ.

ಕಳೆದ ಏಳು ವರ್ಷಗಳ ಹಿಂದೆ ಉಳಿಮೇಶ್ವರ ಬಳಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ಸರ್ಕಾರ ಅಂದಾಜು ರೂ. 90ಲಕ್ಷ ಮಂಜೂರಾತಿ ನೀಡಿತ್ತು. ಅಷ್ಟೆ ಹಣದಲ್ಲಿ ವಿಶಾಲವಾದ ನಾಲಾಕ್ಕೆ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಅಸಾಧ್ಯ ಎಂಬ ತಾಂತ್ರಿಕ ವರದಿ ಆಧರಿಸಿ ರೂ. 1.90ಕ್ಕೆ ಹೆಚ್ಚಳ ಮಾಡಲಾಯಿತು. 32 ಗೇಟ್‌ಗಳನ್ನು ನಿರ್ಮಿಸಿ, ಯಂತ್ರ ಚಾಲಿತ ಕ್ರೆಸ್ಟ್‌ಗೇಟ್ ಅಳವಡಿಸಿ ಅಂದಾಜು 9ಅಡಿ ನೀರು ಸಂಗ್ರಹಿಸುವ ಉದ್ದೇಶ ಹೊಂದಲಾಗಿತ್ತು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ನಾಲಾದಲ್ಲಿ 9-10 ಅಡಿ ನೀರು ಸಂಗ್ರಹಗೊಂಡರೆ ಅಕ್ಕ ಪಕ್ಕದ ರೈತರಿಗೆ ನೀರಾವರಿ ಮಾಡಿಕೊಳ್ಳಲು ಅನುಕೂಲ ಆಗುವ ಜೊತೆಗೆ ಅಂತರ್ಜಲಮಟ್ಟ ಹೆಚ್ಚಾಗುವ ಬಗ್ಗೆ ಈ ಭಾಗದ ರೈತರು ಆಶಾಭಾವನೆ ಹೊಂದಿದ್ದೆವು. ಆದರೆ, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರು ಶ್ಯಾಮೀಲಾಗಿ ಬ್ರಿಡ್ಜ್ ಕಮ್ ಬ್ಯಾರೇಜ್ ನೀಲನಕ್ಷೆಯನ್ನೆ ಬದಲಾಯಿಸಿದ್ದಾರೆ. ಬ್ರಿಡ್ಜ್ ಕಮ್ ಬ್ಯಾರೇಜ್‌ನ್ನು ತಡೆಗೋಡೆಯಂತೆ ನಿರ್ಮಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಆಪಾದಿಸಿದರು.

ಈಗ್ಗೆ ಮೂರು ವರ್ಷಗಳ ಹಿಂದೆ ಹೆಚ್ಚಿನ ಪ್ರಮಾಣದ ನೀರು ನಾಲಾಕ್ಕೆ ಬಂದು ಬ್ರಿಡ್ಜ್ ಕಮ್ ಬ್ಯಾರೇಜ್‌ದಿಂದ ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಹೋಗಿದ್ದರಿಂದ ರೊಚ್ಚಿಗೆದ್ದ ರೈತರು ಕ್ರೆಸ್ಟ್‌ಗೇಟ್‌ಗಳನ್ನು ಕಿತ್ತಿ ಬಿಸಾಡಿದ್ದಾರೆ. ಕೆಲ ಕ್ರೆಸ್ಟ್‌ಗೇಟ್‌ಗಳು ನೀರುಪಾಲಾದರೆ, ಇನ್ನೂ ಕೆಲ ಕ್ರೆಸ್ಟ್‌ಗೇಟ್‌ಗಳು ಪ್ರತಿಷ್ಠಿತರ ಪಾಲಾಗಿ ಅಳಿದುಳಿದ ಕ್ರೆಸ್ಟ್‌ಗೇಟ್‌ಗಳು ಚರಂಡಿ ಮುಚ್ಚುವ ಸಾಧನಗಳಾಗಿರುವುದು ಸ್ಥಳಕ್ಕೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಕಾಣಸಿಗುತ್ತವೆ.

ನಾಗಲಾಪುರ ನಾಲಾಕ್ಕೆ ಬಹುತೇಕ ಕಡೆಗಳಲ್ಲಿ ಸಣ್ಣ ನೀರಾವರಿ ಇಲಾಖೆಯಡಿ ಕೋಟ್ಯಂತರ ಹಣ ಖರ್ಚು ಮಾಡಿ ಬ್ರಿಡ್ಜ್ ಕಮ್ ಬ್ಯಾರೇಜ್, ಚೆಕ್‌ಡ್ಯಾಮ್ ನಿರ್ಮಿಸಿರುವುದು ದಾಖಲೆಗಳಲ್ಲಿವೆ. ಆದರೆ, ವಾಸ್ತವವಾಗಿ ಅಂತಹ ಯಾವೊಂದು ಕುರುಹುಗಳು ಕಾಣಸಿಗದಂತೆ ಸರ್ಕಾರದ ಆಸ್ತಿಗಳನ್ನು ಸ್ಥಳಾಂತರಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವ ಕನಸಿಗೆ ಬರಿ ಎಳೆದಿದ್ದಾರೆ. ಈ ಕುರಿತು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗಳಿಗೆ ಪ್ರಜಾವಾಣಿ ಸಂಪರ್ಕಿಸಿದಾಗ ತಾವು ಹೊಸದಾಗಿ ಬಂದಿದ್ದೇವೆ. ತಮಗೆ ಹಿಂದಿನ ಫೈಲ್‌ಗಳ ಮಾಹಿತಿ ಲಭ್ಯವಿಲ್ಲ ಎಂದು ನುಣುಚಿಕೊಳ್ಳುತ್ತಿರುವುದು ಇಲಾಖೆ ಜವಾಬ್ದಾರಿತನವನ್ನು ಸಾಬೀತು ಪಡಿಸುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.