ದೇವದುರ್ಗ: ಎಲ್ಲ ಜನಾಂಗಕ್ಕಿಂತಲೂ ಭೋವಿ ಸಮಾಜ ಅತ್ಯಂತ ಹಿಂದುಳಿದಿದ್ದು, ಇದರ ಅಭಿವೃದ್ಧಿ ಪ್ರತಿಯೊಬ್ಬರೂ ಶಿಕ್ಷಣ ಹೊಂದಿದಾಗ ಮಾತ್ರ ಸಾಧ್ಯ ಎಂದು ಮುಖ್ಯಮಂತ್ರಿಗಳ ಕಾರ್ಯದರ್ಶಿ, ಶಾಸಕ ಕೆ. ಶಿವನಗೌಡ ನಾಯಕ ಅಭಿಪ್ರಾಯಪಟ್ಟರು.
ಭಾನುವಾರ ತಾಲ್ಲೂಕಿನ ಅರಕೇರಾ ಗ್ರಾಮದ ವಾಲ್ಮೀಕಿ ಭವನದಲ್ಲಿ ಏರ್ಪಡಸಿದ ಭೋವಿ ಸಮಾಜದ ಜನಜಾಗೃತಿ ಸಮಾವೇಶ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭೋವಿ ಸಮಾಜದ ಜನರು ಶಾಂತಿ ಮತ್ತು ಪ್ರೀತಿಯಿಂದ ಬದುಕುವ ಜೊತೆಗೆ ವಿಶ್ವಾಸಕ್ಕೆ ಪಾತ್ರರಾದವರು. ಸಮಾಜದ ಒಗ್ಗಟ್ಟಿಗೆ ಜನಜಾಗೃತಿ ಅವಶ್ಯಕವಾಗಿದೆ ಎಂದರು.
ಭೋವಿ ಸಮಾಜದ ಮುಖಂಡ ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ ತಂಗಡಗಿ ಮಾತನಾಡಿ, ಸಮಾಜದ ಪ್ರತಿಯೊಬ್ಬರೂ ಸದಾಶಿವ ಆಯೋಗದ ವರದಿಯನ್ನು ವಿರೋಧಿಸುವ ಮತ್ತು ತಡೆಯಿಡಿಯುವ ಮನೋಭಾವ ಬೆಳಸಿಕೊಳ್ಳಬೇಕೆಂದು ಕರೆ ನೀಡಿದರು.
ಇಮ್ಮಡಿ ಭೋವಿ ಗುರುಪೀಠದ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಸಮಾಜದ ಮುಖಂಡ ಸಿದ್ದು ಬಂಡಿ ಲಿಂಗಸೂಗೂರು, ತಾಪಂ ಅಧ್ಯಕ್ಷ ಪ್ರಭಯ್ಯಸ್ವಾಮಿ, ವೆಂಕಟೇಶ ಪೂಜಾರಿ, ಶಿವರಾಜ ಗೆಜ್ಜೆಭಾವಿ, ಮರೆಣ್ಣ ನಾಯಕ, ಸೀತಣ್ಣ ನಾಯಕ, ತಾಪಂ ಸದಸ್ಯರಾದ ಲಿಂಗಮ್ಮ ಮಸರಕಲ್, ಪಾರ್ವತಿ ಜಾಡಲದಿನ್ನಿ, ಶ್ರೀನಿವಾಸ ದೇಸಾಯಿ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ರಂಗಮ್ಮ ಆಲ್ಕೋಡ್, ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷೆ ಶಶಿಕಲಾ ಸಿಪಿಐ ಗಿರೀಶ ಬೋಜಣ್ಣನವರ್ ಹಾಗೂ ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.