ಮಾನ್ವಿ: ಪಟ್ಟಣದಲ್ಲಿರುವ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಯ ಮಕ್ಕಳು ನೀರಿನ ಸಮಸ್ಯೆಯಿಂದ ಪರದಾಡುವಂತಾಗಿದೆ. ನಿತ್ಯದ ಸ್ನಾನಕ್ಕಾಗಿ ಸಮೀಪದ ಎಪಿಎಂಸಿ ಕಚೇರಿ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಗೋದಾಮು ಕಟ್ಟಡಗಳನ್ನು ಅವಲಂಬಿಸುವ ಸ್ಥಿತಿ ಬಂದಿದೆ.
`ಏನ್ಮಾಡೋದು, ಈ ಶಾಲೆಗೆ ಸೇರಿದಾಗಿನಿಂದಲೂ ಸರಿಯಾದ ನೀರಿನ ವ್ಯವಸ್ಥೆ ಇಲ್ಲ' ಎಂದು ವಿದ್ಯಾರ್ಥಿಯೊಬ್ಬ ಹೇಳಿದನು. ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಈ ವಸತಿ ಶಾಲೆಯಲ್ಲಿ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿಲ್ಲ ಎಂಬುದು ಸಾರ್ವಜನಿಕರ ಆರೋಪ.
ರಾಜ್ಯದಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದ್ದಾಗಿ ಶಾಸಕರಾಗಿದ್ದ ಎನ್.ಎಸ್.ಬೋಸರಾಜು ಅವರು ವಿಶೇಷ ಪ್ರಯತ್ನದಿಂದಾಗಿ ತಾಲ್ಲೂಕಿನ ರಾಜಲಬಂಡಾ ಗ್ರಾಮಕ್ಕೆ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆ ಹಾಗೂ ಮಾನ್ವಿ ಪಟ್ಟಣಕ್ಕೆ ಮೊರಾರ್ಜಿ ದೇಸಾಯಿ ಹಿಂದುಳಿದ ವರ್ಗಗಳ ವಸತಿ ಶಾಲೆ ಮಂಜೂರಾಗಿದ್ದವು.
ರಾಜಲಬಂಡಾದಲ್ಲಿ ಕಟ್ಟಡದ ಸಮಸ್ಯೆಯಿಂದಾಗಿ ಶಾಲೆಯನ್ನು ಮಾನ್ವಿ ಪಟ್ಟಣದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಪ್ರಸ್ತುತ ಶಾಲೆ ಮಾನ್ವಿ ಪಟ್ಟಣದ ಖಾಸಗಿ ಕಟ್ಟಡವೊಂದರಲ್ಲಿ ನಡೆಯುತ್ತಿದ್ದರೂ ಅಲ್ಲಿ ಸಮರ್ಪಕ ಸೌಲಭ್ಯಗಳಿಲ್ಲ ಎಂಬುದು ಪಾಲಕರ ದೂರು. ಶಾಲೆ ಮಂಜೂರಾಗಿ ದಶಕ ಕಳೆದರೂ ಕೂಡ ಸ್ವಂತ ಕಟ್ಟಡ ನಿರ್ಮಾಣವಾಗಿಲ್ಲ.
ಮಾನ್ವಿ ಪಟ್ಟಣದಲ್ಲಿರುವ ಮೊರಾರ್ಜಿ ದೇಸಾಯಿ ಹಿಂದುಳಿದ ವರ್ಗಗಳ ವಸತಿ ಶಾಲೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಇದೂ ಕೂಡ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದೆ. ಕಟ್ಟಡ ಬಾಡಿಗೆಯ ಒಪ್ಪಂದ ಮುಗಿದಿದೆ. ಶೈಕ್ಷಣಿಕ ವರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ಹೊಸ ಕಟ್ಟಡ ಬಾಡಿಗೆ ಪಡೆಯಲು ಅಧಿಕಾರಿಗಳು ಹುಡುಕಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಆರಂಭಿಸಲಾಗಿರುವ ವಸತಿ ಶಾಲೆಗಳಲ್ಲಿ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು. ಈ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಮಂಜೂರು ಮಾಡಿದ ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಈಗಿನ ಸರ್ಕಾರ ಸ್ವಂತ ಕಟ್ಟಡಗಳನ್ನು ನಿರ್ಮಿಸಿ ಅಗತ್ಯ ಸೌಲಭ್ಯಗಳ ವ್ಯವಸ್ಥೆ ಮಾಡಬೇಕು ಎಂಬುದು ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ಮುಖಂಡರ ಆಗ್ರಹವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.