ಲಿಂಗಸುಗೂರು: ಮುಖ್ಯಮಂತ್ರಿಗಳ ಆಧೀನ ಕಾರ್ಯದರ್ಶಿ ನಿರ್ದೇಶನದಂತೆ ತಾಲ್ಲೂಕಿನ ವ್ಯಾಸನಂದಿಹಾಳ, ಮುದಗಲ್ಲು, ಮಾಕಾಪುರ, ಆದಾಪುರ ಗ್ರಾಮಗಳ ಗಣಿಗಾರಿಕೆ ಪ್ರದೇಶದ ಸರ್ವೆ ಕಾರ್ಯ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಅಕ್ರಮ, ವಂಚನೆ, ನಷ್ಟಕ್ಕೆ ಸಂಬಂಧಿಸಿದಂತೆ ಮಸ್ಕಿ ಮತ್ತು ಮುದಗಲ್ಲು ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ತನಿಖಾ ತಂಡದ ಮುಖ್ಯಸ್ಥ ಟಿ. ಯೋಗೇಶ ತಿಳಿಸಿದ್ದಾರೆ.
ಬುಧವಾರ ಪ್ರಜಾವಾಣಿ ಜೊತೆ ಮಾತನಾಡಿದ ಅವರು,ಗಣಿಗಾರಿಕೆ ಪರವಾನಗಿ ಪಡೆದ ಕ್ಷೇತ್ರಕ್ಕಿಂತ ಹೆಚ್ಚಿನ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ. ರಾಜಸ್ವ ಹಣ ಭರಿಸದೆ ಸರ್ಕಾರಕ್ಕೆ ವಂಚನೆ, ಸರ್ಕಾರಿ ಜಮೀನು ದುರ್ಬಳಕೆ,ಬೆಲೆ ಬಾಳುವ ಕಲ್ಲು ದಿಮ್ಮಿಗಳನ್ನು ಅಕ್ರಮವಾಗಿ ಸಾಗಣೆ ಮಾಡುವುದು ಸೇರಿದಂತೆ ಇತರೆ ಆರೋಪಗಳಡಿ ಪ್ರಕರಣ ದಾಖಲಿಸಲು ಕಂದಾಯ ನಿರೀಕ್ಷಕರಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.
ಮಸ್ಕಿ ಪೊಲೀಸ್ ಠಾಣೆಯಲ್ಲಿ ಸೈಯದ ನಜೀರಬಹದ್ದೂರುಖಾನ ಮುದಗಲ್ಲು, ಚಿನ್ನಪ್ಪ ಈರಸಂಗಪ್ಪ ಮುದಗಲ್ಲು, ಚೆನ್ನವೀರಪ್ಪಗೌಡ ವೀರನಗೌಡ ಆದಾಪುರ, ಸೈಯದ ನಜೀರಅಹ್ಮದ ದಾವಲಸಾಬ ಮುದಗಲ್ಲು, ಸಿದ್ಧರಾಮಪ್ಪ ಬಸಲಿಂಗಪ್ಪ ಸಂತೆಕೆಲ್ಲೂರು ಅವರ ವಿರುದ್ಧ ಪ್ರಕರಣ ದಾಖಲಿಸಿ ಪ್ರಥಮ ಮಾಹಿತಿ ವರದಿ ಪಡೆಯಲಾಗಿದೆ.
ಮುದಗಲ್ಲು ಪೊಲೀಸ್ ಠಾಣೆಯಲ್ಲಿ ಚಿನ್ನಪ್ಪ ಈರಸಂಗಪ್ಪ, ಚೆನ್ನವೀರಪ್ಪಗೌಡ ವೀರಪ್ಪ, ಮಹಾಂತಗೌಡ ಮಲ್ಲನಗೌಡ, ದಾವೂದ ಗೂಡುಸಾಬ, ರೇಖಪ್ಪ ಲೋಕಪ್ಪ ರಾಠೋಡ, ರಾಜಶೇಖರ ಸೋಮಶೇಖರ, ಸಿದ್ರಾಮಪ್ಪ ಬಸಲಿಂಗಪ್ಪ, ವೀರಯ್ಯ ಗಂಗಯ್ಯ, ತಿಮ್ಮನಗೌಡ ಪಾಟೀಲ, ಕೆ.ವಿ. ನಾಗಲಕ್ಷ್ಮಿ, ಮಹ್ಮದ ಇಕ್ಬಾಲ್, ಈರಪ್ಪ ಚೆನ್ನವೀರಪ್ಪ, ಶರಣಗೌಡ ಲಿಂಗನಗೌಡ, ಪಾಯಲ್ ಜ್ಯೋತಿಗಾಂಧಿ, ಡಿ.ಎಸ್. ಹೂಲಗೇರಿ, ಕಮಲಾದೇವಿ, ಬಸವರೆಡ್ಡಿ, ಸಣ್ಣದುರಗಪ್ಪ ಬಂಡಿ, ವೆಂಕಟೇಶ ಗುಡುಗುಂಟ, ಅಶೋಕಗೌಡ ಪಾಟೀಲ, ವೆಂಕಟೇಶ ವಿಠಲ, ಸತ್ಯಪ್ಪ ದಾಸಪ್ಪ ಎಂಬವರ ವಿರುದ್ಧ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲು ದೂರು ನೀಡಲಾಗಿದೆ. ಕೆಲವರ ವಿರುದ್ಧ ಈಗಾಗಲೆ ಪ್ರಕರಣ ದಾಖಲಿಸಿಕೊಂಡಿದ್ದು ಇನ್ನೂ ಕೆಲ ಹೆಸರು ಸೇರ್ಪಡೆ ಮಾಡಬೇಕಾಗಿದ್ದು, ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.