ADVERTISEMENT

ಮಸ್ಕಿ: ಕೈಗೆ ಸಂಘಟನೆ ಕೊರತೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2012, 7:35 IST
Last Updated 6 ಆಗಸ್ಟ್ 2012, 7:35 IST

ಮಸ್ಕಿ: ಮೂರು ತಾಲ್ಲೂಕುಗಳನ್ನು ಒಳಗೊಂಡ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಇದೀಗ ಒಡೆದ ಮನೆಯಂತಾಗಿದೆ.  ಈ ಕ್ಷೇತ್ರದಲ್ಲಿ  ಬೆಕ್ಕಿಗೆ (ಪಕ್ಷಕ್ಕೆ) ಗಂಟೆ ಕಟ್ಟುವವರು ಯಾರು? ಎಂಬ ಸ್ಥಿತಿ ಬಂದೊದಗಿದೆ.

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಈ ಕ್ಷೇತ್ರದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರತಾಪಗೌಡ ಪಾಟೀಲ ವಿರುದ್ಧ ಸ್ಪರ್ಧಿಸಿ ಪರಭಾವಗೊಂಡಿದ್ದ ಕಾಂಗ್ರೆಸ್‌ನ ತಿಮ್ಮಯ್ಯ ನಾಯಕ ಕಳೆದ ನಾಲ್ಕು ವರ್ಷಗಳಲ್ಲಿ ಇಲ್ಲಿ ಕಾಣಿಸಿಕೊಂಡಿದ್ದು ತೀರ ಕಡಿಮೆ ಎನ್ನಲಾಗಿದೆ.

ಪಕ್ಷದ ಸಭೆ, ಸಮಾರಂಭಗಳಿದ್ದಾಗ ಮಾತ್ರ ಇಲ್ಲಿಗೆ ಬಂದು ಹೋಗುವ ತಿಮ್ಮಯ್ಯ ನಾಯಕ ನಂತರ ಪಕ್ಷದ ಇತರೆ ವಿಷಯದಲ್ಲಿ ಅಥವಾ ಇಲ್ಲಿಯ ಸಮಸ್ಯೆಗಳ ಬಗ್ಗೆಯಾಗಲಿ ಒಮ್ಮೆಯೂ ಧ್ವನಿ ಎತ್ತಿದ ಉಧಾಹರಣೆಗಳು ಇಲ್ಲ ಎಂದು ಪಕ್ಷದ ಕೆಲವು ಕಾರ್ಯಕರ್ತರೆ ತಮ್ಮ ಅಸಮಾದಾನ ತೋಡಿಕೊಂಡಿದ್ದಾರೆ.

ಮಸ್ಕಿ ಎಸ್.ಟಿ ಮೀಸಲು ಕ್ಷೇತ್ರ ಆಗಿದ್ದರಿಂದ ಇಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳೇ ಈ ಕ್ಷೇತ್ರದಲ್ಲಿ ನಿಂತು ಪಕ್ಷದ ಸಂಘಟನೆಯ ಜವಾಬ್ದಾರಿ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸಬೇಕು ಎಂಬುದು ಇಲ್ಲಿಯ ಕಾಂಗ್ರೆಸ್‌ನ ಕೆಲವು ಮುಖಂಡರ ಅಭಿಪ್ರಾಯ. ಪಕ್ಷದಲ್ಲಿ ಅನೇಕ ನಿಷ್ಠಾವಂತ ಕಾರ್ಯಕರ್ತರಿದ್ದಾರೆ ಅವರನ್ನು ಪಕ್ಷದ ಸಂಘಟನೆಗೆ ಬಳಸಿಕೊಳ್ಳುವಲ್ಲಿ ಇಲ್ಲಿಯ ಕಾಂಗ್ರೆಸ್ ಮುಖಂಡರು ವಿಫಲರಾಗಿದ್ದಾರೆಂಬುದು ಬಹುತೇಕ ಕಾರ್ಯಕರ್ತರ ಅಭಿಪ್ರಾಯ.

ಇತ್ತೀಚಿಗೆ 371 ಕಲಮಿಗೆ ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರದ ಸಚಿವ ಸಂಪುಟದ ಉಪ ಸಮಿತಿ ಒಪ್ಪಿಗೆ ಕೊಟ್ಟಾಗ ಎಲ್ಲೆಡೆ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಆದರೆ, ಇಲ್ಲಿ ಮಾತ್ರ ಪಕ್ಷದ ವಿಜಯೋತ್ಸವ ಇರಲಿ ಕನಿಷ್ಠ ಸ್ವಾಗತಿಸಿ ಹೇಳಿಕೆ ಕೊಡುವ ಮುಖಂಡರ ಕೊರತೆಯೂ ಎದ್ದು ಕಾಣುತ್ತಿದೆ.

ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿ ಕೊಡುವ 371 ಕಲಮಿನ ಜಾರಿ ನಿರ್ಧಾರವನ್ನು ಇಲ್ಲಿಯ ಕಾಂಗ್ರೆಸ್ ಪಕ್ಷದ ಮುಖಂಡರು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಅವಕಾಶ ಇತ್ತು ಎಂದು ಪಕ್ಷದ ಮುಖಂಡರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು. ಆದರೆ, ಸಂಘಟನೆ ಹಾಗೂ ಸಮನ್ವಯದ ಕೊರತೆ ಪಕ್ಷದ್ಲ್ಲಲ್ಲಿದೆ. ಪಕ್ಷದ ವರಿಷ್ಠರು ಅದನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗಬೇಕು ಎಂಬುದು ಇಲ್ಲಿಯ ಪಕ್ಷದ ಕಾರ್ಯಕರ್ತರ ಒತ್ತಾಯವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.