ADVERTISEMENT

ವಂಚಿತ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 8:10 IST
Last Updated 17 ಅಕ್ಟೋಬರ್ 2012, 8:10 IST

ಲಿಂಗಸುಗೂರ: ಕಳೆದ 2008-09ರ ಅವಧಿಯಲ್ಲಿ ಸುರಿದ ಧಾರಾಕಾರ ಮಳೆಗೆ ಮನೆ ಕಳೆದುಕೊಂಡು ಬೀದಿ ಪಾಲಾಗಿರುವ ಸುಣಕಲ್ಲ ಗ್ರಾಮದ ಸಂತ್ರಸ್ತರ ಕೆಲ ಕುಟುಂಬಗಳಿಗೆ ತಾಲ್ಲೂಕು ಆಡಳಿತ ನಿವೇಶನ ಮತ್ತು ಆಸರೆ ಯೋಜನೆಯಡಿ ಮನೆ ನಿರ್ಮಿಸಿಕೊಡದೆ ಅನ್ಯಾಯ ಮಾಡಿದೆ.

ಕಾರಣ ಪರಿಶೀಲಿಸಿ ವಂಚಿತ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಸುಣಕಲ್ಲ ನೊಂದ ಸಂತ್ರಸ್ತ ಕುಟುಂಬದ ಸದಸ್ಯರು ಗುಲ್ಬರ್ಗದ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲನ್ ಬಿಸ್ವಾಸ್ ಅವರಿಗೆ ಮನವಿ ಸಲ್ಲಿಸಿದರು.
ಮಂಗಳವಾರ ಪ್ರವಾಹ ಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಪುನರ್ವಸತಿ ಕಲ್ಪಿಸುವ ಆಸರೆ ಯೋಜನೆಯಡಿ ಈಗಾಗಲೆ ಸುಣಕಲ್ಲ ಗ್ರಾಮದಲ್ಲಿ 200 ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಲಾಗಿದೆ.

ಆ ಪೈಕಿ ತಾಲ್ಲೂಕು ಆಡಳಿತ ಸಿದ್ಧಪಡಿಸಿದ ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಸೇರ‌್ಪಡೆ ಮಾಡದೆ ಹೋಗಿದ್ದರಿಂದ ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಈ ನಿಟ್ಟಿನಲ್ಲಿ ಪಟ್ಟಿಯನ್ನು ಪುನರ್ ಪರಿಶೀಲಿಸಿ ತಮಗೆ ನ್ಯಾಯ ಒದಗಿಸುವಂತೆ ಸಂತ್ರಸ್ತರು ಕೋರಿದರು.

ಪ್ರಾದೇಶಿಕ ಆಯುಕ್ತರು ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಈ ವರೆಗೆ ಯಾಕೆ ವಿಳಂಬವಾಗಿದೆ. ಈ ಕುರಿತಂತೆ ಕೂಲಂಕುಷವಾಗಿ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಿ ಅನ್ಯಾಯ ಆಗಿದ್ದರೆ ಖಂಡಿತ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ನ್ಯಾಯ ಒದಗಿಸುವೆ. ಯಾವುದಕ್ಕೂ ಸಂತ್ರಸ್ತ ಕುಟುಂಬಗಳು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಸಮಾಧಾನಪಡಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ ಜಿ. ಮುನಿರಾಜಪ್ಪ ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಾಮಯ್ಯ ಮುರಾರಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮಾನಪ್ಪ ಚವ್ಹಾಣ, ಬಸವರಾಜ ದೊಡ್ಡಹೊಲ. ಮುಖಂಡರಾದ ಗ್ಯಾನಪ್ಪ ಭಾವಿಮನಿ ಸಂತ್ರಸ್ತ ಕುಟುಂಬದವರಾದ ಹನುಮಪ್ಪ, ಬಸವರಾಜ, ಗದ್ದೆನಗೌಡ, ಪರಶುರಾಮ, ಅಮರಪ್ಪ, ಮಾನಪ್ಪಯ್ಯ, ಗದ್ದೆಮ್ಮ, ಬಸಪ್ಪ, ಪುತ್ರಪ್ಪ, ಮಲ್ಲಮ್ಮ, ಬಸಮ್ಮ, ಹನುಮಮ್ಮ, ಮುದಿಯಮ್ಮ, ಹನುಮವ್ವ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.