ADVERTISEMENT

ವಿವಿಧೆಡೆ ಕನ್ನಡ ರಾಜ್ಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2012, 10:10 IST
Last Updated 2 ನವೆಂಬರ್ 2012, 10:10 IST

ರಾಯಚೂರು: ನಗರ ಹಾಗೂ ಗ್ರಾಮೀಣ ಪ್ರದೇಶದ ವಿವಿಧ ಸಂಘ-ಸಂಸ್ಥೆ, ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆ ಸೇರಿದಂತೆ ಗುರುವಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.

ಎಸ್‌ಕೆಇ ಸಂಸ್ಥೆ: ನಗರದ ಸುವರ್ಣ ಕರ್ನಾಟಕ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರಾಚಾರ್ಯ ನರಸಿಂಹಮೂರ್ತಿ ಅವರು ಧ್ವಜಾರೋಹಣ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಗಡ್ಡೆಪ್ಪ, ಬಸವರಾಜ, ಅಶ್ವಿನಿ,ಶ್ವೇತ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಮಾತನಾಡಿದರು. ಎಎನ್‌ಎಂ ಕಾಲೇಜಿನ ಪ್ರಾಚಾರ್ಯ ಶ್ರವಣಕುಮಾರ, ಸಿಬ್ಬಂದಿಗಳಾದ ಸುರೇಶ ಅಂಗಡಿ, ಬೀರಪ್ಪ, ಗೋವಿಂದಸ್ವಾಮಿ ಉಪಸ್ಥಿತರಿದ್ದರು. ಸಂಗಮೇಶ ಸ್ವಾಗತಿಸಿದರು.ರವಿ ನಿರೂಪಿಸಿದರು. ಸಂತೋಷ ವಂದಿಸಿದರು.

ಮಲಿಯಾಬಾದ್ ಕ್ಯಾಂಪ್: ತಾಲ್ಲೂಕಿನ ಮಲಿಯಾಬಾದ್ ಕ್ಯಾಂಪ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯೋತ್ಸವ ಅಂಗವಾಗಿ ಎಸ್‌ಡಿಎಂಸಿ ಅಧ್ಯಕ್ಷ ಬಡೇಸಾಬ್ ಧ್ವಜಾರೋಹಣ ನೆರವೇರಿಸಿದರು.

ಮುಖ್ಯಾಧ್ಯಾಪಕ ವಿರುಪಾಕ್ಷಿ ಎ, ಶಿಕ್ಷಕಿ ಎಸ್.ವಿ ಸರಸ್ವತಿ,  ದೈಹಿಕ ಶಿಕ್ಷಣ ಶಿಕ್ಷಕಿ ಜಯಶ್ರೀ ಹಾಗೂ ಇತರಿದ್ದರು.
ನೇತಾಜಿ ನಗರ: ಇಲ್ಲಿನ ನೇತಾಜಿ ನಗರದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಚಳುವಳಿಯ ಹೋರಾಟಗಾರ  ಕೆ.ಗೋವಿಂದರಾಜ ಅವರು ಭುವನೇಶ್ವರಿ ಮಾತೆಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಪ್ರಭಾರಿ ಮುಖ್ಯಾಧ್ಯಾಪಕ ನರಸಿಂಹಲು, ಕರ್ನಾಟಕ ಯುವ ಸೇನೆ ಅಧ್ಯಕ್ಷ ಎಂ.ಜಿ ವೀರೇಶ ಹಾಗೂ ಎಚ್.ಡಿ ಭರಮಣ್ಣ, ಶಿಕ್ಷಕರಾದ ಸುಭದ್ರಬಾಯಿ, ಪರಿಮಳಾ, ಶಶಿಕಲಾ, ವಿಜಯಲಕ್ಷ್ಮಿ, ರತ್ನಾ, ಸುನೀತಾ, ನಾಗರತ್ನ ಇದ್ದರು.

ಕಲ್ಯಾಣ ಕರವೇ ಸಂಘಟನೆ: ನಗರದ ಮಾವಿನಕೆರೆ ಹತ್ತಿರದ ಉದ್ಯಾನವನದಲ್ಲಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಜಿಲ್ಲಾ ಘಟಕದವತಿಯಿಂದ ರಾಜ್ಯೋತ್ಸವ ಆಚರಣೆ ಮಾಡಲಾಯಿತು.

ಸಂಸ್ಥಾಪಕ ಅಧ್ಯಕ್ಷ ಬಿ.ನಾಗೇಶ ಧ್ವಜಾರೋಹಣ ನೆರವೇರಿಸಿದರು. ಸಂಘಟನೆಯ ಗೌರವಾಧ್ಯಕ್ಷ ಎಸ್. ರಾಮಚಂದ್ರಪ್ಪ, ಜಿಲ್ಲಾಧ್ಯಕ್ಷ ವೀರೇಶ ಹೀರಾ, ಜಿಲ್ಲಾ ಗೌರವಾಧ್ಯಕ್ಷ ಕೆ.ಕಂಡಪ್ಪ ಮಮಾಲೋರ, ಜಿಲ್ಲಾ ಕಾರ್ಯಾಧ್ಯಕ್ಷ ಸಂಗಮೇಶ ಮಂಗಾನವರ ಹಾಗೂ ಇತರರಿದ್ದರು.

ಅಭಿಮಾನಿಗಳ ಸಂಘ: ನಗರದ ಮೆಕ್ಕಾ ದರವಾಜದಲ್ಲಿ ಕರ್ನಾಟಕ ಡಾ.ರಾಜಕುಮಾರ ಅಭಿಮಾನಿಗಳ ಸಂಘದವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಧ್ವಜಾರೋಹಣವನ್ನು ಡಾ.ಕೆ ರಾಮಪ್ಪ ನೆರವೇರಿಸಿದರು. ಇದೇ ಸಂದರ್ಭದಲ್ಲಿ  ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯತು. ಸಂಘದ ಅಧ್ಯಕ್ಷ ಎನ್.ಎಂ ಮೈತ್ರಿಕರ್, ಉಪಾಧ್ಯಕ್ಷ ಎಂ.ನಂಜುಂಡ, ಬಸವರಾಜ, ಮಲ್ಲೇಶ ಗಧಾರ, ಸಿ.ಗೋವಿಂದ. ಬಾಬು ಚಿಕ್ಕಸುಗೂರು, ಜೆ.ಮಹೇಶ, ರಮೇಶ, ಸತ್ಯನಾರಾಯಣ, ಕುರ್ಡಿ ಮಹಾದೇವ, ಎಸ್. ಮಹಾದೇವಪ್ಪ ಉಪಸ್ಥಿತರಿದ್ದರು.

ಅಂಬೇಡ್ಕರ್ ಯುವಕ ಸಂಘ:  ನಗರದ ಅಂಬಾಭವಾನಿ ರಸ್ತೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ವತಿಯಿಂದ  ರಾಜ್ಯೋತ್ಸವದ ಅಂಗವಾಗಿ ನಾಡದೇವಿ ಭುವನೇಶ್ವರಿ ದೇವಿ ಭಾವಚಿತ್ರದಕ್ಕೆ ಮಾಲಾರ್ಪಣೆ ಮಾಡಲಾಯಿತು. ಸಂಘದ ಆರ್.ಅಶೋಕ ಕುಮಾರ, ಉಪಾಧ್ಯಕ್ಷ ಕೆ.ರಾಮಾಂಜನೇಯ, ಕಾರ್ಯದರ್ಶಿ ಸತ್ಯನಾರಾಯಣ, ಜಂಟಿ ಕಾರ್ಯದರ್ಶಿ ನಟರಾಜ ಎಂ, ಸದಸ್ಯರಾದ ಕೃಷ್ಣ, ನಾಗೇಶ, ತಿಲಕ್, ಭಾಸ್ಕರರಾಜ, ರಾಜಕುಮಾರ ಹಾಗೂ ಇತರರಿದ್ದರು.

ದಲಿತ ರಕ್ಷಣಾ ವೇದಿಕೆ: ನಗರದ ಎಂ.ಈರಣ್ಣ ವೃತ್ತದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ವಿಭಾಗ ಘಟಕದವತಿಯಿಂದ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಸಂಘಟನೆಯ ವಿಭಾಗೀಯ ಅಧ್ಯಕ್ಷ  ಬಿ.ಶ್ರೀನಿವಾಸಲು ನಾಡದೇವಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಎರ‌್ರಾ ಸೀನು, ವೆಂಕಟೇಶ, ಹನುಮಂತು, ಖಲೀಲ್, ಭರತ್ ಕುಮಾರ, ರಾಜು,ಕಲೀಂ, ರಮೇಶ, ಸಾಗರ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ಕರವೇ ಸಂಘಟನೆ: ನಗರದ ಮಾವಿನಕರೆ ಹತ್ತಿರ ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಜಿಲ್ಲಾ ಘಟಕದವತಿಯಿಂದ ಏರ್ಪಡಿಸಿದ್ಧ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಜಿಲ್ಲಾಧ್ಯಕ್ಷ ಅಶೋಕ ಕುಮಾರ ಸಿ.ಕೆ ಜೈನ್ ಮಾಡಿದರು. ತಾಲ್ಲೂಕು ಅಧ್ಯಕ್ಷ ಖಲೀಲ್ ಪಾಷಾ, ಗ್ರಾಮಾಂತರ ಘಟಕದ ಅಧ್ಯಕ್ಷ ಎಂ.ಭೀಮಣ್ಣ, ನಗರಾಧ್ಯಕ್ಷ ಮಾನಸಿಂಗ್ ಠಾಕೂರ್, ಮಹೆಬೂಬ್ ಪಟೇಲ್, ಜಿಲ್ಲಾ ಖಜಾಂಚಿ ಕೆ.ಕಿಶನ್‌ರಾವ್,  ಉಪಾಧ್ಯಕ್ಷ ಮಮತಾಜುದ್ದೀನ್, ಹಾಜಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎನ್.ರಘುವೀರ ನಾಯಕ ಉಪಸ್ಥಿತರಿದ್ದರು.

ನವರತ್ನ ಯುವಕ ಸಂಘ: ಹರಿಜನವಾಡದ ಸಮುದಾಯ ಭವನದಲ್ಲಿ ಹತ್ತಿರ ನವರತ್ನ ಯುವಕ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಸಂಘದ ಗೌರವಾಧ್ಯಕ್ಷ ಆರ್.ಆಂಜನೇಯ  ಅವರು ನಾಡದೇವಿ ಭುವನೇಶ್ವರಿದೇವಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಸಂಘದ ಅಧ್ಯಕ್ಷ ಎಸ್.ಹುಲಿಗೆಪ್ಪ ಅವರು ಧ್ವಜಾರೋಹಣ ನೆರವೇರಿಸಿದರು.

ಸಂಘದ ಪದಾಧಿಕಾರಿಗಳಾದ ಸಿ.ಎಂ ಗೋವಿಂದ, ಎಸ್.ವೆಂಕಟೇಶ, ಕೆ.ವೀರೇಶ, ಕೆ.ಪಿ ಅನಿಲ್‌ಕುಮಾರ, ಜನಾರ್ದನ ಹಳ್ಳಿಬೆಂಚಿ, ಚಂದ್ರು ಭಂಡಾರಿ, ಶಿವಪ್ಪ ಮಣಿಗಿರಿ, ನರೇಂದ್ರ ಭಂಡಾರಿ, ಬಿ.ವೀರೇಶ, ನಾಗರಾಜ, ಶರಣಪ್ಪ, ಸಿ.ಎಂ ಬಾಬು, ರವಿಕುಮಾರ, ಶಿಕ್ಷಕಿ ಬಾನುಬೇಗಂ ಹಾಗೂ ಇತರರಿದ್ದರು.

ಜೈಕರವೇ ಸಂಘಟನೆ: ನಗರದ ಬಸವೇಶ್ವರ ವೃತ್ತದಲ್ಲಿ ಜೈ ಕನ್ನಡ ರಕ್ಷಣಾ ವೇದಿಕೆ ಸಂಘಟನೆ ರಾಜ್ಯಾಧ್ಯಕ್ಷ ಶರಣಪ್ಪ ಎನ್. ಧ್ವಜಾರೋಹಣ ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ಅಸ್ಕಿಹಾಳ ಗ್ರಾಮ ಮುಖಂಡ ಸಂಗನಗೌಡ, ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಸಂತಕುಮಾರ, ಜಿಲ್ಲಾ ವಕ್ತಾರ, ಶರಣಬಸವ ಎಂ,ತಿಮ್ಮಪ್ಪ ನಾಯಕ, ರಾಮಪ್ಪ ಸಿಂಗನೋಡಿ, ವೆಂಕಟಸ್ವಾಮಿ, ರೇವಣ್ಣ ನಾಯಕ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

ಕವಿತಾಳ ವರದಿ
ಪಟ್ಟಣದ ವಿವಿಧೆಡೆ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಬಾಲಕರ ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಈರಣ್ಣ ಕೆಳಗೇರಿ ದ್ವಜಾರೋಹಣ ಮಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕರಿಯಪ್ಪ ಅಡ್ಡೆ ಮತ್ತು ಕರಿಯಪ್ಪ ತೋಳ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖ್ಯಗುರು ದೇವೇಂದ್ರಪ್ಪ, ಸಂಪನ್ಮೂಲ ವ್ಯಕ್ತಿ ಬಸವರಾಜ ಪಲಕನಮರಡಿ ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಶಾಂತಮ್ಮ ಅರಿಕೇರಿ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಪಿಡಿಒ ಪಂಪನಗೌಡ, ಸದಸ್ಯರು ಇದ್ದರು.

ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಾಚಾರ್ಯ ಬಸನಗೌಡ, ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಗುರು ಎಚ್.ಮಲ್ಲಪ್ಪ ಮತ್ತು ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಗುರು ಎಚ್.ನಾಗರಾಜ ಧ್ವಜಾರೋಹಣ ಮಾಡಿದರು. ಕನ್ಯಾ ಶಾಲೆ, ಡಿಎಚ್‌ಕೆ ಸ್ಮಾರಕ ಶಾಲೆ, ಸ್ನೇಹ ಶಾಲೆ, ಮಾಡಲ್ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ರಾಜ್ಯೋತ್ಸವ ನಿಮಿತ್ಯ ಧ್ವಜಾರೋಹಣ ನೆರವೇರಿಸಲಾಯಿತು. ಸಮೀಪದ ಹಾಲಾಪುರದ ಅರವಿಂದಘೋಷ್ ಶಾಲೆಯಲ್ಲಿ ಧ್ವಜಾರೋಹಣ ಮಾಡಲಾಯಿತು. ಮುಖ್ಯಗುರು ಸಿದ್ದಾರ್ಥ ಪಾಟೀಲ್ ಇತರರು ಇದ್ದರು. 

ಜಾಲಹಳ್ಳಿ ವರದಿ
ಪಟ್ಟಣದ ವಿವಿಧೆಡೆ ಮಳೆಯ ಮಧ್ಯೆಯೇ 57 ನೇ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸದೇ ಕೇವಲ ನಾಡದೇವತೆ ಭುವನೇಶ್ವರಿದೇವಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ರಾಜ್ಯೋತ್ಸವವನ್ನು ಆಚರಿಸಲಾಯಿತು.

ವಿವಿಧ ಶಾಲೆಗಳಲ್ಲಿ ಇಲಾಖೆಯ ಆದೇಶದಂತೆ ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಲಾಯಿತು. ಗ್ರಾ.ಪಂ ಕಾರ್ಯಾಲಯದಲ್ಲಿ ಅಧ್ಯಕ್ಷ ಜಿ.ಬಸವರಾಜ ನಾಯಕ ನಾಡದೇವತೆಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಗ್ರಾ.ಪಂ ಸದಸ್ಯರಾದ ತಿಪ್ಪಯ್ಯನಾಯಕ, ಅಮರೇಗೌಡ, ಮುದುರಂಗಪ್ಪ ದೊರಿ, ಆದಪ್ಪ, ವಾಸಪ್ಪ, ಮುಖಂಡರಾದ ರಾಜಾ ವಾಸುದೇವನಾಯಕ ಉಪಸ್ಥಿತರಿದ್ದರು.

ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಎಂ.ಡಿ. ಅಲೀಮ್ ನಾಡದೇವತೆ ಭುವನೇಶ್ವರಿದೇವಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.ಪೊಲೀಸ್ ಪೇದೆಗಳಾದ ಶೇಖರಪ್ಪ, ತಾಯಣ್ಣ ನಾಯಕ ಗಲಗ, ರಾಜಾಸಾಬ, ಹುಸೇನಪ್ಪ ಇದ್ದರು. ಪಟ್ಟಣದ ಎಲ್ಲಾ ಸರ್ಕಾರಿ ಮತ್ತು ಖಾಸಗೀ ಶಾಲಾ ಕಾಲೇಜುಗಳಲ್ಲಿ ಮತ್ತು ಸರ್ಕಾರಿ ಇಲಾಖೆಗಳ ಕಾರ್ಯಾಲಯಗಳಲ್ಲಿ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಗಲಗ: ಇಲ್ಲಿಗೆ ಸಮೀಪದ ಗಲಗ ಗ್ರಾಮದಲ್ಲಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮ ಘಟಕದ ಅಧ್ಯಕ್ಷ ಬಸವರಾಜ ಸುಕನಟ್ಟಿ ಬಸವೇಶ್ವರ ವೃತ್ತದಲ್ಲಿ ಕನ್ನಡ ಧ್ವಜಾರೋಹಣ ಮಾಡಿದರು. ಗ್ರಾ.ಪಂ ಕಾರ್ಯಾಲಯದಲ್ಲಿ ಅಧ್ಯಕ್ಷ ತಿರುಪತಿ ಪಾಮರತಿ ನಾಡದೇವತೆಗೆ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪಿಡಿಓ ರಾಮರೆಡ್ಡಿ ಸೇರಿದಂತೆ ಗ್ರಾ.ಪಂ ಸದಸ್ಯರು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು. ಸರ್ಕಾರಿ ಪ್ರೌಢ ಶಾಲೆಯಲ್ಲಿ ಮುಖ್ಯೋಪಧ್ಯಾಯ ನಿಂಗಪ್ಪ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಧ್ಯಾಯ ಜಂಗ್ಲಯ್ಯ ನಾಯಕ ರಾಷ್ಟ್ರ ಧ್ವಜಾರೋಹಣ ಮಾಡಿದರು.

ಕರ್ನಾಟಕ ರಕ್ಷಣಾ ವೇದಿಕೆ: ಜಾಲಹಳ್ಳಿ ಪಟ್ಟಣದಲ್ಲಿ ಗುರುವಾರ 57ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ)ಯ ವತಿಯಿಂದ ನಾಡದೇವತೆ ಭುವನೇಶ್ವರಿದೇವಿಯ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಲಾಯಿತು. ಬೆಳಿಗ್ಗೆ ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ರಕ್ಷಣಾ ವೇದಿಕೆಯ ಗ್ರಾಮ ಘಟಕದ ಅಧ್ಯಕ್ಷ ನಂದಪ್ಪ ಲಿಂಗದಹಳ್ಳಿ, ಬಸವರಾಜ ಗೋಪಾಳಪುರ, ಗುರುಸ್ವಾಮಿ, ಭೀಮನಗೌಡ, ಎಮ್ ರೆಡ್ಡಿ, ಶರಣಬಸವ, ಮೌನೇಶ ಸೇರಿಮಂತೆ ಅನೇಕರು ಉಪಸ್ಥಿತರಿದ್ದರು.

ಸಿಂಧನೂರು ವರದಿ
ಇಂಗ್ಲಿಷ್ ಭಾಷೆಯ ಹಾವಳಿ, ಪಾಶ್ಚಿಮಾತ್ಯ ಸಂಸ್ಕೃತಿಯ ವ್ಯಾಮೋಹದಿಂದಾಗಿ ಕನ್ನಡಿಗರಲ್ಲಿ ಕನ್ನಡ ಭಾಷೆಯ ಬಗೆಗಿನ ಸ್ವಾಭಿಮಾನಿ ಕಡಿಮೆಯಾಗುತ್ತಿದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಕಳವಳ ವ್ಯಕ್ತಪಡಿಸಿದರು.

ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲ್ಲೂಕು ಆಡಳಿತದಿಂದ ಕನ್ನಡ ರಾಜ್ಯೋತ್ಸವದ ನಿಮಿತ್ಯ ಹಮ್ಮಿಕೊಂಡಿದ್ದ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅನ್ಯ ಸಂಸ್ಕೃತಿಯನ್ನು ಗೌರವಿಸಬೇಕು ನಿಜ. ಆದರೆ ಅದಕ್ಕಾಗಿ ನಮ್ಮ ಸಂಸ್ಕೃತಿಯನ್ನೇ ಕಡೆಗಣಿಸುವುದು ಸರಿಯಲ್ಲ.

ನಮ್ಮ ಮೂಲ ಸಂಸ್ಕೃತಿಯ ಜೊತೆ-ಜೊತೆಗೆ ಅನ್ಯ ದೇಶಗಳ ಸಂಸ್ಕೃತಿಯಲ್ಲಿನ ಉತ್ತಮ ಅಂಶಗಳನ್ನು ಎರವಲು ಪಡೆದುಕೊಳ್ಳುವುದರಲ್ಲಿ ತಪ್ಪಿಲ್ಲ. ಹಾಗಾಗಿ ಇಂಗ್ಲಿಷ್ ಕಲಿತರೆ ಮಾತ್ರ ಜೀವನ ಎನ್ನುವ ಪ್ರಸ್ತುತ ಮನಸ್ಥಿತಿಯಿಂದ ರಾಜ್ಯದ ಜನತೆ ಹೊರಬರಬೇಕಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಿದೆ ಎಂದು ಹೇಳಿದರು.

ಚುಟುಕು ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಂಡಗಿ ಮಾತನಾಡಿ, ಗ್ರಾಮೀಣ ಕ್ರೀಡೆಗಳು ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ತನ್ನದೇಯಾದ ಭವ್ಯ ಪರಂಪರೆಯನ್ನು ಹೊಂದಿರುವ ಕನ್ನಡವು ಸಾಹಿತ್ಯ ಕ್ಷೇತ್ರದ ಶ್ರೀಮಂತ ಭಾಷೆಯಾಗಿದೆ. ದೇಶದಲ್ಲೇ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವುದೇ ಅದಕ್ಕೆ ಸಾಕ್ಷಿಯಾಗಿದೆ. ಇಷ್ಟೆಲ್ಲ ಹೊಂದಿದ್ದರೂ ಕನ್ನಡಿಗರ ಇಂಗ್ಲಿಷ್ ವ್ಯಾಮೋಹ ಮಾತ್ರ ಕಡಿಮೆಯಾಗುತ್ತಿಲ್ಲ. ಹೀಗಾಗಿ ಕನ್ನಡ ಶಾಲೆಗಳು ಇಂದು ಮುಚ್ಚುವ ಸ್ಥಿತಿಗೆ ಬಂದಿವೆ ಎಂದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್.ಶಿವನಗೌಡ ಗೊರೇಬಾಳ ಬಹುರಾಷ್ಟ್ರೀಯ ಕಂಪೆನಿಗಳಿಂದ ಕನ್ನಡ ಭಾಷೆಗೆ ತೀವ್ರ ಹೊಡೆತ ಬಿದ್ದಿದ್ದು, ಕನ್ನಡಿಗರಿಗೆ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳು ಹೆಚ್ಚಾಗಬೇಕು ಎಂದು ಹೇಳಿದರು.

ಪ್ರಭಾರಿ ತಹಸೀಲ್ದಾರ್ ರಾಮಣ್ಣ, ತಾ.ಪಂ.ಅಧ್ಯಕ್ಷೆ ಬಸಮ್ಮ ಕೊಟ್ರಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಲಂಕೆಪ್ಪ ಸಿಂಗಾಪುರ, ಡಿವೈಎಸ್‌ಪಿ ವೀರೇಶ ಬೆಳವಡಿ, ಕ್ಷೇತ್ರ ಶಿಕ್ಷಣಾಧಿಕಾರಿ ವೃಷಬೇಂದ್ರಯ್ಯಸ್ವಾಮಿ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಕೆ.ನಾಗರಾಜ, ಸಿಡಿಪಿಒ ಹನುಮಂತಪ್ಪ ಓಲೇಕಾರ, ಕಸಾಪ ತಾಲ್ಲೂಕು ಅಧ್ಯಕ್ಷೆ ರಮಾದೇವಿ ಶಂಭೋಜಿ, ಕರವೇ ಪ್ರವೀಣ ಶೆಟ್ಟಿ ಬಣದ ಅಧ್ಯಕ್ಷ ಅಜಿತ್ ಓಸ್ತವಾಲ್ ವೇದಿಕೆ ಮೇಲಿದ್ದರು. ವಿವಿಧ ಕನ್ನಡಪರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.

ದೇವದುರ್ಗ ವರದಿ
ಕರ್ನಾಟಕ ಏಕೀಕರಣ ಹೋರಾಟಕ್ಕೆ ಹಲವಾರು ಮುಖಂಡರ ಶ್ರಮವಿದ್ದು, ಇದನ್ನು ಗಮನಿಸಿದೆ ಇತ್ತೀಚಿನ ದಿನಗಳಲ್ಲಿ ಕೆಲವು ವ್ಯಕ್ತಿಗಳು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಕನ್ನಡ ನೆಲ, ಜಲದ ಕರಿತು ಕೀಳಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಇದನ್ನು ಕನ್ನಡ ನಾಡಿನ ಜನರು ಖಂಡಿಸುವಂಥ ಮನೋಭಾವನೆ ಬೆಳಸಿಕೊಳ್ಳಬೇಕು ಎಂದು ಉಪನ್ಯಾಸಕ ಮುನಿಯಪ್ಪ ನಾಗೋಲಿ ಅಭಿಪ್ರಾಯಪಟ್ಟರು.

ಪಟ್ಟಣದ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸನ್ಮಾನ: ತಾಲ್ಲೂಕಿನ ಬಂಡೆಗುಡ್ಡ ಗ್ರಾಮದ ಲಂಬಾಣಿ ನೃತ್ಯ ಕಲಾವಿದೆ ಚನ್ನಮ್ಮ ತಮ್ಮಣ್ಣ ರಾಠೋಡ್ ಅವರಿಗೆ ಕಾರ್ಯಕ್ರಮದ ವತಿಯಿಂದ ಸನ್ಮಾನಿಸಲಾಯಿತು.

ಮೆರವಣಿಗೆ: ಪಟ್ಟಣದ ತಾಲ್ಲೂಕು ಪಂಚಾಯಿತಿ ಅವರಣದಲ್ಲಿ ತಾಪಂ ಅಧ್ಯಕ್ಷ ಪ್ರಭಯ್ಯಸ್ವಾಮಿ ಅವರು ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದ ನಂತರ ಡಾ. ಅಂಬೇಡ್ಕರ್ ವೃತ್ತದಿಂದ ಮುಖ್ಯರಸ್ತೆಯ ಮೂಲಕ ಸಾರ್ವಜನಿಕ ಕ್ಲಬ್‌ವರೆಗೂ ಭಾವಚಿತ್ರವನ್ನು ಮೆರವಣಿಗೆಯಲ್ಲಿ ತರಲಾಯಿತು.

ನೀಲಂ ಎಫೆಕ್ಟ್: ನೀಲಂ ಚಂಡಮಾರುತದ ಪರಿಣಾಮ ಬುಧವಾರ ಸಂಜೆಯಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಆರಂಭವಾದ ಜಿಟಿ ಜಿಟಿ ಮಳೆ ಗುರುವಾರ ಮುಂಜಾನೆ ಪಟ್ಟಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಡೆತಡೆ ಮಾಡಿತು.

ಮೆರವಣಿಗೆಯಲ್ಲಿ ವಿವಿಧ ವೇಷಗಳನ್ನು ಧರಿಸಿ ಭಾಗವಹಿಸದ್ದ ಶಾಲಾ ಮಕ್ಕಳಿಗೆ ಜಿಟಿ,ಜಿಟಿ ಮಳೆಯಿಂದಾಗಿ ನಿರಾಸೆ ಮೊಡಿಸಿತು. ಮೆರವಣಿಗೆ ಆರಂಭವಾಗುತ್ತಿದಂತೆ ಮಳೆಯ ರಭಸ ಹೆಚ್ಚಾಗಿ ಕಂಡು ಬಂದಿರುವುದರಿಂದ ಅನಿವಾರ್ಯ ಮಕ್ಕಳು ಬಂದ ದಾರಿಗೆ ವಾಪಸ್ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಮಳೆಯ ಮಧ್ಯಯೇ ಕಾರ್ಯಕ್ರಮವನ್ನು ತರಾತುರಿಯಲ್ಲಿ ಮುಗಿಸಬೇಕಾಯಿತು.

ತಾಪಂ ಅಧ್ಯಕ್ಷ ಪ್ರಭಯ್ಯಸ್ವಾಮಿ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಶರಣಗೌಡ ಕೊಪ್ಪರ ಅವರು ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಹಬೀಬುರ್ ರಹಮಾನ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ರಂಗಣ್ಣ ಪಾಟೀಲ ಅಳ್ಳುಂಡಿ, ತಾಲ್ಲೂಕು ಕಸಾಪ ಅಧ್ಯಕ್ಷ ನರಸಿಂಗರಾವ್ ಸರಕೀಲ್, ಇಒ ನಾಮದೇವ ರಾಠೋಡ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ, ಸಮನ್ವಯ ಅಧಿಕಾರಿ ಶಿವರಾಜ ಪೂಜಾರಿ, ಸಮಾಜ ಕಲ್ಯಾಣ ಅಧಿಕಾರಿ ವೆಂಕಟೇಶ ಹೋಗಿಬಂಡಿ, ಸಿಪಿಐ ಡಾ. ಗಿರೀಶ ಬೋಜಣ್ಣನವರ್, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಶ್ರೀನಿವಾಸ, ಮಂಜುನಾಥ, ಕರವೇ ಮುಖಂಡರಾದ ಶ್ರೀನಿವಾಸ ದಾಸರ, ಸಂಜಯಕುಮರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಹಟ್ಟಿ ಚಿನ್ನದ ಗಣಿ ವರದಿ
ಕನ್ನಡ ಭಾಷೆಗೆ ಮಾನ್ಯತೆ ಇಲ್ಲದಂತಾಗಲು ಕನ್ನಡಿಗರೇ ಜವಾಬ್ದಾರಿ, ಬೇರೆ ಭಾಷಿಗರಲ್ಲ ಎಂದು ಹಟ್ಟಿ ಕಂಪೆನಿಯ ಉಪ ಪ್ರಧಾನ ವ್ಯವಸ್ಥಾಪಕ ಕರ್ನಲ್ ಬಸವರಾಜ ದೊಡ್ಡಮನಿ ಹೇಳಿದರು.

ಇಲ್ಲಿಯ  ಚಿನ್ನದ ಗಣಿ ಆಡಳಿತ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಗುರುವಾರ ಹಟ್ಟಿ ಕ್ಯಾಂಪ್ ಬಸ್ ನಿಲ್ಧಾಣ ಮತ್ತು ಕ್ರೀಡಾ ಸಂಸ್ಥೆ ಹತ್ತಿರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನಮ್ಮಲ್ಲಿ ಮಾತೃಭಾಷಾಭಿಮಾನ ಕೊರತೆ ಇದೆ. ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದರೆ ಸಾಲದು. ನಮ್ಮ ನಾಡು, ನುಡಿಯನ್ನು ಶ್ರೀಮಂತ ಗೊಳಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಯಬೇಕಾಗಿದೆ. ಇಂಗ್ಲಿಷ್ ವ್ಯಾಮೋಹದಿಂದ ನಮ್ಮ ಭಾಷೆ, ಸಂಸ್ಕೃತಿ ಹಾಳಾಗಿದೆ.  ಮಾತೃಭಾಷೆಯನ್ನು ಪ್ರೀತಿಸಿದರೆ ಮಾತ್ರ ಅದು ಬೆಳೆಯಲು ಸಾಧ್ಯ. ಕನ್ನಡ ಬೆಳಸಲು ಸಂಘರ್ಷ ಬೇಡ ಸಾಮರಸ್ಯ ಬೇಕು. ಕೋಮುಸಾಮರಸ್ಯದಿಂದ ರಾಜ್ಯ ಅಭಿವೃದ್ಧಿಹೊಂದಲು ಸಾಧ್ಯ ಎಂದರು.

ಕಾರ್ಮಿಕ ಸಂಘದ ಅಧ್ಯಕ್ಷ ಎಸ್.ಎಂ. ಶಫೀ ಮಾತನಾಡಿ, ಕರ್ನಾಟಕ ರಾಜ್ಯ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗೊಳಿಸಬೇಕಾಗಿದೆ ಎಂದರು.

ಹಿರಿಯ ವ್ಯವಸ್ಥಾಪಕ ಕಿಶೋರ ಕುಮಾರ, ರವಿ, ಡಾ. ಸಂಗೂರ ಮಠ, ಕಲ್ಯಾಣಾಧಿಕಾರಿಗಳಾದ ಕರಿಯಪ್ಪ, ರಮೇಶ, ಮಲ್ಲಿಕಾರ್ಜುನ ಸ್ವಾಮಿ, ಗೋವಿಂದರಾವ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು. ಲಿಂಗಣ್ಣ ನಿರೂಪಿಸಿದರು. ಶಾಲಾ ಮಕ್ಕಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.

ಅಸ್ತವ್ಯಸ್ತ: ಗುರುವಾರ ಮುಂಜಾನೆಯಿಂದ ಆರಂಭಗೊಂಡ ಜಡಿಮಳೆಯಿಂದಾಗಿ ವಿವಿಧ ಸಂಘಟನೆಗಳಿಂದ ಹಮ್ಮಿಕೊಂಡ ರಾಜ್ಯೋತ್ಸವ ಕಾರ್ಯಕ್ರಮಗಳು ಅಸ್ತವ್ಯಸ್ತಗೊಂಡವು.

ಕರ್ನಾಟಕ ರಕ್ಷಣ ವೇದಿಕೆ(ಪ್ರವೀಣ ಶೆಟ್ಟಿ ಬಣ): ಕನ್ನಡ ಪರ ಸಂಘಟನೆಗಳ ಒಗಟ್ಟಿನ ಹೋರಾಟದಿಂದ ಸಂವಿಧಾನದ 371ನೇ ಕಲಂ ಜಾರಿ ಹಂತದಲ್ಲಿದೆ ಎಂದು ಹಟ್ಟಿಯ ತಾಲ್ಲೂಕು ಪಂಚಾಯಿತಿ ಸದಸ್ಯೆ ಬಸಮ್ಮ ಹೇಳಿದರು.

ಇಲ್ಲಿಯ ಕರ್ನಾಟಕ ರಕ್ಷಣ ವೇದಿಕೆ(ಪ್ರವೀಣ ಶೆಟ್ಟಿ ಬಣ) ಹಾಗೂ ಜಯ ಕರ್ನಾಟಕ ಸಂಯುಕ್ತವಾಗಿ ಹಟ್ಟಿ ಗ್ರಾಮದ ಬಸ್ ನಿಲ್ಧಾಣದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಮಾತನಾಡಿದರು.

ಸ್ಥಳೀಯ ಡಿ.ಇಡಿ. ಕಾಲೇಜಿನ ಪ್ರಾಚಾರ್ಯ ಶಿವಕುಮಾನ ಬ್ರಹನ್ಮಠ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ಭಾಷೆಗೆ ಸರ್ಕಾರ ಮಾನ್ಯತೆ ಕೊಟ್ಟಿದೆ ಹೊರತು ಸಮಾಜ ಕೊಟ್ಟಿಲ್ಲ. ಕನ್ನಡಿಗರು ಇಂಗ್ಲಿಷ್ ವ್ಯಾಮೋಹಬಿಡಬೇಕು. ಶಿಕ್ಷಣ ರಂಗ ಎಲ್ಲಾ ಕನ್ನಡಮಯವಾಗಬೇಕು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಎಲ್ಲಾ ಯುವಕರಿಗೆ ನೌಕರಿ ಸಿಗುವಂತಾಗಬೇಕು. ಇಂಗ್ಲಿಷ್ ಓದಿದರೆ ನೌಕರಿಸಿಗುತ್ತದೆ ಎಂಬ ಭಾವನೆ ಕನ್ನಡಿಗರಲ್ಲಿದೆ.

ಮಾತೃ ಭಾಷೆಯ ಪರವಾಗಿ ತನ್ಮಯತೆ ಕೊರತೆಯಿಂದ ಕನ್ನಡಕ್ಕೆ ಮಾನ್ಯತೆ ಸಿಗುತ್ತಿಲ್ಲ ಎಂದು ವಿಷಾಧಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಶಂಕರಗೌಡ ಮಾತನಾಡಿದರು. ಶ್ರೀನಿವಾಸ ಮಧುಶ್ರೀ ನಿರೂಪಿಸಿದರು. ಕಾಂಗ್ರೆಸ್ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಪಂಚಾಕ್ಷರಿ ದೊಡ್ಡಮನಿ, ಪರಮೇಶ ಯಾದವ್, ಸ್ಥಳೀಯ ಕರವೇ ಅಧ್ಯಕ್ಷ ಮೌನೇಶ ಕಾಕಾನಗರ, ಶಿವಕುಮಾರ, ಸುನಿಲ್ ಕುಮಾರ ಇತರರು ಇದ್ದರು. 

ಮಾಚನೂರು:  ಹಟ್ಟಿಗೆ ಸಮೀಪದ ಮಾಚನೂರು ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ)ದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಗುರುವಾರ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವ ಆಚರಿಸಿದರು.

ಗ್ರಾಮದ ಬಸ್ ನಿಲ್ದಾಣದ ಹತ್ತಿರ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಘದ ಉಪಾಧ್ಯಕ್ಷ ಬಾಲನಗೌಡ ಮಾತನಾಡಿ, ಸರ್ಕಾರಗಳು ಗ್ರಾಮಗಳಲ್ಲಿ ಸಮರ್ಪಕವಾಗಿ ಮೂಲ ಸೌಲಭ್ಯಗಳು ಒದಗಿಸುವಲ್ಲಿ ವಿಫಲವಾಗಿವೆ. ಗ್ರಾಮದಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಿಸಲು ಹಲವು ಸಲ ಅಧಿಕಾರಿಗಳ ಗಮನಕ್ಕೆತಂದರೂ ಯಾವ ಕ್ರಮ ಜರುಗಿಸಿಲ್ಲ ಎಂದರು.  ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಿಸಲು ಸಂಚಾರಿ ವಿತರಣಾ ವ್ಯವಸ್ಥೆ ಮಾಡಬೇಕೆಂದರು ಒತ್ತಾಯಿಸಿದರು. ಮುಂದಿನ ದಿನಗಳಲ್ಲಿ ಮೂಲ ಸೌಕರ್ಯಗಳಿಗಾಗಿ ಸಂಘಟನೆವತಿಯಿಂದ ಹೋರಾಟ ರೂಪಿಸುವುದಾಗಿ ಹೇಳಿದರು.

ಕರವೇ ಅಧ್ಯಕ್ಷ ಸಿದ್ದು ನಾಯಕ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಗೌರವ ಅಧ್ಯಕ್ಷ ಚಂದ್ರಶೇಖರ, ಶರಣಗೌಡ, ಖಾಜಾಸಾಬ್, ಗ್ರಾಮ ಪಂಚಾಯಿತಿ ಸದಸ್ಯ ಕ್ಯಾತನಗೌಡ, ರಂಗಪ್ಪ ಇದ್ದರು.

ಮಾನ್ವಿ ವರದಿ
ನಾಡು ನುಡಿ, ನೆಲ, ಜಲ ಹಾಗೂ ಸಂಪತ್ತಿನ ವಿಚಾರದಲ್ಲಿ ಕನ್ನಡಿಗರಲ್ಲಿ ಐಕ್ಯ ಭಾವನೆ ಅಗತ್ಯ ಎಂದು ಶಾಸಕ ಜಿ.ಹಂಪಯ್ಯ ನಾಯಕ ಹೇಳಿದರು.

ಗುರುವಾರ ತಾಲ್ಲೂಕು ಆಡಳಿತ ಕನ್ನಡ ರಾಜ್ಯೋತ್ಸವ ಆಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉಪನ್ಯಾಸಕ ಡಾ.ಬಸವರಾಜ ಸುಂಕೇಶ್ವರ ಮಾತನಾಡಿ, ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆದವರಿಗೆ ರಾಜ್ಯದಲ್ಲಿ ಉನ್ನತ ಉದ್ಯೋಗವಕಾಶಗಳು ಲಭಿಸುವಂತಾಗಬೇಕು. ನಾಡಿನ ಬಾಷೆ, ಗಡಿ ವಿಚಾರ ಸೇರಿದಂತೆ ಯಾವುದೇ ಸಮಸ್ಯೆ ಉದ್ಭವಿಸಿದರೂ ಕೂಡ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದು ಹೇಳಿದರು.

ತಹಸೀಲ್ದಾರ್ ಎಂ.ಗಂಗಪ್ಪ ಕಲ್ಲೂರು ಹಾಗೂ ಡಾ.ಬಸವರಾಜ ಸುಂಕೇಶ್ವರ ಅವರನ್ನು ಶಾಸಕ ಜಿ.ಹಂಪಯ್ಯ ನಾಯಕ ಸನ್ಮಾನಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಗುರಪ್ಪ ಬಾಗಲವಾಡ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ಕುರ್ಡಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ತಿಮ್ಮಾರೆಡ್ಡಿ ಭೋಗಾವತಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಉಮೇಶ ಸಜ್ಜನ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸಯ್ಯ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವಿ.ಸ್ವಾಮಿ, ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಧರ್ ದೊಡ್ಡಿ ಮತ್ತಿತರರು ವೇದಿಕೆಯಲ್ಲಿದ್ದರು.

ಶಿಕ್ಷಕ ಅಂಬಯ್ಯ ನುಲಿ ಪ್ರಾರ್ಥನೆ ಗೀತೆ ಹಾಡಿದರು. ಶಿಕ್ಷಕ ರಾಮಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮುನ್ನ ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ಸಾಹಿತ್ಯ ಭವನ: ಪಟ್ಟಣದ ಸಾಹಿತ್ಯ ಭವನದಲ್ಲಿ ಗುರುವಾರ ರಾಜ್ಯೋತ್ಸವದ ಅಂಗವಾಗಿ ಕಸಾಪ ತಾಲ್ಲೂಕು ಅಧ್ಯಕ್ಷ ತಾಯಪ್ಪ ಬಿ.ಹೊಸೂರು ಧ್ವಜಾರೋಹಣ ನೆರವೇರಿಸಿದರು. ಪದಾಧಿಕಾರಿಗಳಾದ ಶ್ರೀಶೈಲಗೌಡ, ಕೆ.ಈ.ನರಸಿಂಹ, ರಮೇಶಬಾಬು ಯಾಳಗಿ, ಶ್ರೀಧರರಾವ್ ದೇಸಾಯಿ, ಜಗನ್ನಾಥ ಕುಲಕರ್ಣಿ, ಎಚ್.ಟಿ.ಪ್ರಕಾಶಬಾಬು ಮತ್ತಿತರರು ಇದ್ದರು.

ಬಸವ ವೃತ್ತ: ಪಟ್ಟಣದ ಬಸವ ವೃತ್ತದಲ್ಲಿ ಕರ್ನಾಟಕ ಜನಸೇವಾ ಯುವ ವೇದಿಕೆ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ತಾಪಂ ಉಪಾಧ್ಯಕ್ಷ ರಾಜಾ ವಸಂತ ನಾಯಕ ಧ್ವಜಾರೋಹಣ ನೆರವೇರಿಸಿದರು. ಸರ್ಕಾರಿ ನೌಕರರ ಸಂಘದ ಗುಲ್ಬರ್ಗ ವಿಭಾಗೀಯ ಉಪಾಧ್ಯಕ್ಷ ಎ.ಬಾಲಸ್ವಾಮಿ ಕೊಡ್ಲಿ, ಜನಸೇವಾ ಯುವ ವೇದಿಕೆಯ ಕನ್ನಡಪರ ಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ವೇದಿಕೆಯ ಅಧ್ಯಕ್ಷ ಎಂ.ನಾಗಭೂಷಣ ಸ್ವಾಮಿ, ಪ್ರಧಾನ ಕಾರ್ಯದರ್ಶಿ ರವಿಕುಮಾರ ಪಾಟೀಲ್, ಪದಾಧಿಕಾರಿಗಳಾದ ವಿರುಪಣ್ಣ ಪಾಟೀಲ್, ಬಿಷ್ಟಪ್ಪ ಅಬ್ಬಿಗೇರಿ, ಯಲ್ಲಪ್ಪ ಪೂಜಾರಿ, ಎಂ.ಜಗದೀಶ, ಕೆ.ಶಂಕರ್, ಬಸವರಾಜ ಪಾಟೀಲ್, ಅರುಣಕುಮಾರ, ಯಮುನಪ್ಪ, ಕುಮಾರ, ರಮೇಶ, ಮಹೇಶ, ದೇವೇಂದ್ರ, ರಾಜಶೇಖರ ಪಾಟೀಲ್, ಮಂಜುನಾಥ, ಚಿದಾನಂದ ಪಾಟೀಲ ಮತ್ತಿತರರು ಭಾಗವಹಿಸಿದ್ದರು.

ಶಿವನಗೌಡ ಅಭಿಮಾನಿಗಳ ಸಂಘ: ಪಟ್ಟಣದ ಕೆ.ಶಿವನಗೌಡ ನಾಯಕ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಗುರುವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿದರು. ಸಂಘದ ಅಧ್ಯಕ್ಷ ವೀರೇಶ ನಾಯಕ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಾಜಿದ್ ಸಾಜಿದ್ ಕಚೇರಿ: ಪಟ್ಟಣದ ಖ್ಯಾತ ಕಲಾವಿದರಾದ ವಾಜಿದ್ ಸಾಜಿದ್ ಸಹೋದರರ ಕಚೇರಿಯಲ್ಲಿ ಬಿಜೆಪಿ ಮುಖಂಡ ಬಸನಗೌಡ ದದ್ದಲ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು. ಎಪಿ ಎಂಸಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಯಾದವ್ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ವಾಜಿದ್ ಸಾಜಿದ್ ಸಹೋದರರು. ಹನುಮಂತಪ್ಪ ದೇವಿಪುರ, ಹನುಮಂತಪ್ಪ ನಿಲೋಗಲ್, ಗೋಪಾಲ ನಾಯಕ ನೀರಮಾನ್ವಿ, ಬಿ.ಶ್ಯಾಮಸುಂದರ್, ಅಮರಗುಂಡಪ್ಪ, ರಮೇಶನಾಯಕ, ಬೀರಪ್ಪ, ನರಸರೆಡ್ಡಿ, ನರಸಿಂಹ ಹೆಳವರ, ರಸೂಲ್ ಚೌದ್ರಿ ಮತ್ತಿತರರು ಇದ್ದರು.

ಲಿಂಗಸುಗೂರ ವರದಿ
ಯಾವುದೇ ಒಂದು ಭಾಷೆ ನಿರ್ಲಕ್ಷ್ಯಕ್ಕೆ ಒಳಗಾದರೆ ಅದು ನಶಿಸುತ್ತ ಹೋಗುತ್ತದೆ. ಭಾಷೆ ನಶಿಸುತ್ತಿದ್ದಂತೆ ಅಲ್ಲಿನ ಸಂಸ್ಕೃತಿಯು ಹಾಳಾಗುತ್ತದೆ. ಅಂತೆಯೆ ಭಾರತೀಯ ಸಂಸ್ಕೃತಿಗೆ ತನ್ನದೆ ಆದ ಕೊಡುಗೆ ನೀಡಿದ ಕನ್ನಡ ಭಾಷೆ ಮತ್ತು ಸಂಸ್ಕೃತಿ ಸಂರಕ್ಷಿಸಿ ಉಳಿಸಿ ಬೆಳೆಸುವಂತೆ ಸಹಾಯಕ ಆಯುಕ್ತ ಟಿ. ಯೊಗೇಶ ಕರೆ ನೀಡಿದರು.

ಗುರುವಾರ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರಾಚೀನ ಇತಿಹಾಸ ಹೊಂದಿರುವ ಕನ್ನಡ ಭಾಷೆ ತನ್ನದೆ ಆದ ಸ್ಥಾನಮಾನ ಹೊಂದಿದೆ. ಶರಣರು, ದಾಸರು, ಕವಿಗಳು, ಸಾಹಿತಿಗಳು ಸೇರಿದಂತೆ ಈ ನಾಡಿನ ಪ್ರಗತಿಪರ ಚಿಂತಕರು, ಹೋರಾಟಗಾರರ ತ್ಯಾಗ ಬಲಿದಾನದ ಪ್ರತೀಕವಾಗಿ ಕನ್ನಡ ಭಾಷೆ ಪ್ರಭುತ್ವ ಉಳಿಸಿಕೊಂಡಿದೆ ಎಂದು ಹೇಳಿದರು.

ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಡಾ. ಚೆನ್ನಬಸಪ್ಪ ಚಿಲ್ಕಾರಾಗಿ ಮಾತನಾಡಿ, ಆಂಧ್ರದ ತೆಲಗು, ತಮಿಳುನಾಡಿನ ತಮಿಳು, ಕೇರಳದ ಮಲೆಯಾಳಿ, ಮಹಾರಾಷ್ಟ್ರದ ಮರಾಠಿ, ಹೈದರಬಾದ ಪ್ರದೇಶದ ಉರ್ದು ಪ್ರಾಬಲ್ಯಗಳ ಮಧ್ಯೆ ಕನ್ನಡ ಭಾಷೆ ಇಂದಿಗೂ ತನ್ನ ಗಟ್ಟಿತನ ಉಳಿಸಿಕೊಂಡು ಬಂದಿದೆ. ಇಂತಹ ಪ್ರಬುದ್ಧ ಭಾಷೆ ಪ್ರಚಲಿತಗೊಳ್ಳಲು ಸರ್ಕಾರ ಹೆಚ್ಚು ಹೆಚ್ಚು ಕಾರ್ಯ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದರು.

ಶಾಸಕ ಮಾನಪ್ಪ ವಜ್ಜಲ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಲಿತಾಬಾಯಿ ಶಿವನಗೌಡ ಪೊಲೀಸ್ ಪಾಟೀಲ, ಪುರಸಭೆ ಅಧ್ಯಕ್ಷೆ ದುರುಗಮ್ಮ ರಾಮಸ್ವಾಮಿ, ತಹಸೀಲ್ದಾರ ಜಿ. ಮುನಿರಾಜಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀರಭದ್ರಪ್ಪ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿ ಪಾಲ್ಗೊಂಡಿದ್ದರು.

ಮೆರವಣಿಗೆ: ತಾಲ್ಲೂಕು ಆಡಳಿತ ಕನ್ನಡ ರಾಜ್ಯೋತ್ಸವದ ಅಂಗವಾಗಿ ಗುರುವಾರ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ನಡೆಸಿತು. ತುಂತುರು ಮಳೆಯನ್ನು ಲೆಕ್ಕಿಸದೆ ಅಧಿಕಾರಿಗಳು, ಶಾಲಾ ಮಕ್ಕಳು ಬೆರಳೆಣಿಕೆಯಷ್ಟು ಮುಖಂಡರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಭಾಜಾ ಭಜಂತ್ರಿ, ಡೊಳ್ಳು ಮೇಳಗಳು ಮೆರವಣಿಗೆಗೆ ಮೆರಗು ನೀಡಿದ್ದವು.

ಮಸ್ಕಿ ವರದಿ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಸ್ಕಿಯಲ್ಲಿ ಶಾಲಾ, ಕಾಲೇಜ ಸೇರಿದಂತೆ ವಿವಿದಢೆ ಕನ್ನಡ ಭುವನೇಶ್ವರಿಯ ಭಾವಚಿತ್ರಕ್ಕೆ ಹೂ ಮಾಲೆ ಹಾಕುವ ಮೂಲಕ ರಾಜ್ಯೋತ್ಸವ ಆಚರಿಸಲಾಯಿತು.

ಶಾಸಕ ಕಚೇರಿಯಲ್ಲಿ ಶಾಸಕ ಪ್ರತಾಪಗೌಡ ಪಾಟೀಲ ಹಾಗೂ ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ಪ್ರಭಾರಿ ಅಧ್ಯಕ್ಷ ಶಂಕ್ರಪ್ಪ ಮೋಚಿ ರಾಷ್ಟ್ರಧ್ವಜಾರೋಣ ನೆರವೇರಿಸುವ ಮೂಲಕ ರಾಜ್ಯೋತ್ಸವ ಆಚರಿಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಮಹಾದೇವಪ್ಪಗೌಡ ಪೊ. ಪಾಟೀಲ, ಎಚ್. ಬಿ. ಮುರಾರಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಂಕ್ರಪ್ಪ ಮೋಚಿ, ದೊಡ್ಡಪ್ಪ ಕಡಬೂರು, ಡಾ. ಶಿವಶರಣಪ್ಪ ಇತ್ಲಿ, ಡಾ. ಬಿ.ಎಚ್. ದಿವಟರ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಚನ್ನಮಲ್ಲಯ್ಯ ಸೇರಿದಂತೆ ಗ್ರಾಮ ಪಂಚಾಯ್ತಿ ಸದಸ್ಯರು ಅನೇಕ ಮುಖಂಡರು ಪಾಲ್ಗೊಂಡಿದ್ದರು.

ಜೋಗಿನ್ ರಾಮಣ್ಣ ಸ್ಮಾರಕ ಪ್ರೌಢ ಶಾಲೆ ನಡೆದ ಸಮಾರಂಭದಲ್ಲಿ ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.  ಸಮರ್ಥ ಪದವಿಪೂರ್ವ ಕಾಲೇಜು, ಎಸ್‌ಡಿಎಂ ಪ್ರಾಥಮಿಕ ಶಾಲೆ,  ನರನಸಗೌಡ ಸ್ಮಾರಕ ಪ್ರೌಢ ಶಾಲೆ ಸೇರಿದಂತೆ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಗಾಂಧಿ ನಗರದಲ್ಲಿ ಕರ್ನಾಟಕ ರಕ್ಷಣ ವೇದಿಕೆ (ಪ್ರವೀಣ ಶೆಟ್ಟಿ ಬಣ)ಯ ಅಧ್ಯಕ್ಷ ಅಶೋಕ ಮುರಾರಿ, ಕವಿತಾಳ ವೃತ್ತದಲ್ಲಿ ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಯಮನೂರ ಒಡೆಯರ್, ಹಳೆಬಸ್‌ನಿಲ್ದಾಣದ ಬಳಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಯ ಅಧ್ಯಕ್ಷ ಮಲ್ಲಯ್ಯ ಮುರಾರಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಧ್ವಜಾರೋಹಣ ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.