ADVERTISEMENT

ಶಾಸಕರ ತವರು ಗ್ರಾಮಕ್ಕೆ ಸೌಲಭ್ಯ ಮರೀಚಿಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 5:55 IST
Last Updated 11 ಫೆಬ್ರುವರಿ 2012, 5:55 IST
ಶಾಸಕರ ತವರು ಗ್ರಾಮಕ್ಕೆ ಸೌಲಭ್ಯ ಮರೀಚಿಕೆ
ಶಾಸಕರ ತವರು ಗ್ರಾಮಕ್ಕೆ ಸೌಲಭ್ಯ ಮರೀಚಿಕೆ   

ಹಟ್ಟಿ ಚಿನ್ನದ ಗಣಿ: ಇಲ್ಲಿಂದ ಕೇವಲ 6 ಕಿ.ಮೀ. ದೂರದಲ್ಲಿರುವ ಗೆಜ್ಜಲಗಟ್ಟಾ ಗ್ರಾಮದಲ್ಲಿ ಸುಮಾರು 625 ಮನೆಗಳಿವೆ. ಇಲ್ಲಿಯ ಜನಸಂಖ್ಯೆ ಅಂದಾಜು 3000 ಇದೆ. ಒಟ್ಟು 16 ಜನ ಗ್ರಾಮ ಪಂಚಾಯಿತಿ ಸದಸ್ಯರಲ್ಲಿ 6 ಜನ ಈ ಗ್ರಾಮದವರು. ಇದೇ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯವಿದೆ.
 
ಈ ಗ್ರಾಮವು ರಾಜ್ಯದ ರಾಜಕೀಯ ರಂಗಕ್ಕೆ ಚಿರಪರಿಚಿತ. ದಿವಂಗತ ಶ್ರೀಮತಿ ಬಸವರಾಜೇಶ್ವರಿ ಕೇಂದ್ರ ಸಚಿವರಾಗಿದ್ದರು. ಲಿಂಗಸಗೂರು ಕ್ಷೇತ್ರದ ಹಾಲಿ ಶಾಸಕ ಮಾನಪ್ಪ ವಜ್ಜಲ್ ಅವರು ಸಹ ಇದೇ ಗ್ರಾಮದವರು ಎಂದು ಹೇಳಿಕೊಳ್ಳುತ್ತಾರೆ. ಆದರೆ, ಈ ಗ್ರಾಮದ ಜನತೆ ಮೂಲಭೂತ ಸೌಲಭ್ಯಗಳಿಲ್ಲದೆ ಪರದಾಡುವುದು ಮಾತ್ರ ತಪ್ಪಿಲ್ಲ.

ಈ ಗ್ರಾಮದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನ ಸಮಸ್ಯೆ, ಮಹಿಳಾ ಶೌಚಾಲಯ ಇಲ್ಲ.
ಗ್ರಾಮ ಸ್ವರಾಜ ಹಾಗೂ ಸುವರ್ಣ ಗ್ರಾಮ ಯೋಜನೆಗಳ ಅಡಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಇಲ್ಲಿ ನಡೆದಿವೆ ಎನ್ನಲಾಗುತ್ತಿದೆ.
 
ಆದರೆ, ಗ್ರಾಮದ ಬಹಳಷ್ಟು ವಾರ್ಡ್‌ಗಳಲ್ಲಿ ಸಮರ್ಪಕವಾಗಿ ರಸ್ತೆ, ಚರಂಡಿ ಹಾಗೂ ವಿದ್ಯುತ್ ದೀಪಗಳಿಲ್ಲ. ಈ ಕಾಮಗಾರಿಗಳು ಅವಶ್ಯಕತೆ ಇಲ್ಲ ಕಡೆ, ನಿರ್ಜನ ಪ್ರದೇಶದಲ್ಲಿ ಮಾಡಲಾಗಿದೆ.   ಬಡವರು, ಹಿಂದುಳಿದ ಜನ ವಾಸವಿರುವ ಕಡೆ ಅಭಿವೃದ್ಧಿ ಕೆಲಸ ನಡೆದಿಲ್ಲ.
 
ಮಹಿಳಾ ಶೌಚಾಲಯ ಇಲ್ಲದ ಕಾರಣ ಮಹಿಳೆಯರು ಕತ್ತಲಾದ ಮೇಲೆ ಮುಖ್ಯ ರಸ್ತೆ ಪಕ್ಕದಲ್ಲಿ ತಮ್ಮ ನೈಸರ್ಗಿಕ ಕ್ರಿಯೆ ಮುಗಿಸುವ ದಯನೀಯ ಪರಸ್ಥಿತಿ ಎದುರಿಸುತ್ತಿದ್ದಾರೆ. ಸಾರಿಗೆ ಬಸ್ ವ್ಯವಸ್ಥೆ ಇಲ್ಲದ ಕಾರಣ ತಾಲ್ಲೂಕು ಕೇಂದ್ರದಲ್ಲಿರುವ ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿ ವರ್ಗ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗ್ರಾಪಂ ಸದಸ್ಯರಾದ ಹನುಮಂತಿ ಅಮರೇಶ, ಚಾಂದಪಾಷಾ ಹಾಗೂ ಗ್ರಾಮಸ್ಥರು ಹೇಳುತ್ತಾರೆ.

ಭಜಂತ್ರಿ ಓಣಿಯಲ್ಲಿ ಚರಂಡಿ ನಿರ್ಮಿಸಿಲ್ಲ. ಮಳೆ ಬಂದಾಗ ಹೊಲಗಳಿಂದ ನೀರು ನೇರ ಮನೆಗಳಿಗೆ ನುಗ್ಗುತ್ತದೆ. ಪಕ್ಕದಲ್ಲಿರುವ ಹಳೆ ನೀರಿನ ಟ್ಯಾಂಕ್ ಶಿಥಿಲಗೊಂಡಿದೆ. ಆತಂಕದಲ್ಲಿ ಜೀವನ ನಡೆಸುತ್ತಿದ್ದೇವೆ. ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಇಮಾಮ್ ಸಾಬ್, ದುರಗಪ್ಪ ಭಜಂತ್ರಿ ಹೇಳುತ್ತಾರೆ.


ಚಿಕಿತ್ಸೆಗೆ ತಂದ ಜಾನುವಾರುಗಳಿಗೆ ಪಶು ಚಿಕಿತ್ಸಾಲಯ ಆವರಣದಲ್ಲಿ ನಿರ್ಮಿಸಿದ ಕಿರು ನೀರಿನ ತೊಟ್ಟಿ 2 ವರ್ಷ ಕಳೆದರು ನೀರು ಕಂಡಿಲ್ಲ. ಜಿಲ್ಲಾ ಪಂಚಾಯಿತಿವತಿಯಿಂದ ಎಆರ್‌ಡಬ್ಲೂಎಸ್ ಯೋಜನೆ ಅಡಿಯಲ್ಲಿ ನಿರ್ಮಿಸಿದ ನೀರಿನ ಟ್ಯಾಂಕಿಗೆ ಎರಡು ವರ್ಷ ಕಳೆದರೂ ಇನ್ನೂ ನೀರು ಪೂರೈಸಿಲ್ಲ ಎಂದು ರೈತ ಮುಖಂಡ ಶೇಖರಯ್ಯ ಹೇಳುತ್ತಾರೆ.

ಸರ್ಕಾರ ಗುಡಿಸಲು ರಹಿತ ಗ್ರಾಮ ಮಾಡಲು ಬೇರೆ ಬೇರೆ ಯೋಜನೆಗಳು ಜಾರಿಗೆ ತಂದಿದೆ. ಇಲ್ಲಿ ಬಡವರು ಇನ್ನೂ ಗುಡಿಸಲುಗಳಲ್ಲಿ ವಾಸಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ಗ್ರಾಮದ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಬೇಕಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT