ADVERTISEMENT

ಶೌಚಾಲಯವಾದ ಶಾಲೆ!

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 7:35 IST
Last Updated 4 ಜೂನ್ 2011, 7:35 IST

ಸಿಂಧನೂರು: ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣ ಬಯಲು ಶೌಚಾಲಯವಾಗಿ ಮಾರ್ಪಾಡಾಗಿದ್ದು, ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗಿದೆ. ಆವರಣದ ತುಂಬೆಲ್ಲಾ ಎಲ್ಲೆಂದರಲ್ಲಿ ಮಲ, ಅಡ್ಡಾದಿಡ್ಡಿಯಾಗಿ ಸಂಚರಿಸುವ ಹಂದಿಗಳು ಹಾಗೂ ಹಲವು ಕಾಲೊನಿಗಳ ಚರಂಡಿ ನೀರಿನಿಂದಾಗಿ ಗಬ್ಬು ನಾರುತ್ತಿದೆ. ಹೃದಯ ಭಾಗದಲ್ಲಿರುವ ಈ ಶಾಲೆ ಕಳೆದ ನಾಲ್ಕು ದಶಕಗಳಿಂದ ಇದೇ ಪರಿಸ್ಥಿತಿಯಲ್ಲಿ ನಡೆಯುತ್ತಾ ಬಂದಿದೆ.

ಶಾಲೆಗೆ ಮೂರು ಕೊಠಡಿಗಳಿದ್ದು ಮುಖ್ಯೋಪಾಧ್ಯಾಯ, ಉಪಾಧ್ಯಾಯರು ಕುಳಿತುಕೊಳ್ಳಲೊಂದು ಕೊಠಡಿ, ಬಿಸಿಯೂಟಕ್ಕೆ ಮತ್ತು ಕಂಪ್ಯೂಟರ್‌ಗೆ ತಲಾ ಒಂದೊಂದು ಕೊಠಡಿಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಹಾಗಾದರೆ ವಿದ್ಯಾರ್ಥಿನಿಯರು ಕುಳಿತುಕೊಳ್ಳುವ ಜಾಗ ಯಾವುದು ಎಂದು ಎಲ್ಲರಿಗೂ ಆಶ್ಚರ್ಯವಾಗಬಹುದು. ಇದೇ ಮೈದಾನದ ಪೂರ್ವ ದಿಕ್ಕಿನಲ್ಲಿ ಖಾಸಗಿ ವ್ಯಕ್ತಿಯ ಜಾಗೆಯಲ್ಲಿ ಸುತ್ತಲೂ ತಟ್ಟೆ ಕಟ್ಟೆ ಮೇಲೊಂದು ತಗಡು ಹಾಕಿರುವ ಶೆಡ್‌ನಲ್ಲಿ ಬಾಲಕಿಯರ ವಿದ್ಯಾಭ್ಯಾಸ ಕಳೆದ ಐದಾರು ವರ್ಷಗಳಿಂದ ನಡೆಯುತ್ತಾ ಬಂದಿದೆ.

ಶೆಡ್‌ನ ಸುತ್ತ ಬಯಲು ಶೌಚಾಲಯವಿದ್ದು ಶೌಚ ತುಳಿಯುತ್ತಲೇ ತರಗತಿ ಕೋಣೆಗೆ ಹೋಗಬೇಕಾಗುತ್ತದೆ. ಈ ಶೆಡ್ ಕುರಿ ದನಗಳು ನಿಲ್ಲಿಸಲು ಸಹ ಯೋಗ್ಯವಾಗಿ ಕಾಣುತ್ತಿಲ್ಲ. ಬಯಲು ಶೌಚದಿಂದ ಹಲವಾರು ರೋಗಗಳು ಹರಡುತ್ತವೆ ಎನ್ನುವ ಕಾರಣಕ್ಕೆ ಸರ್ಕಾರ ನಿರ್ಮಲ ಕರ್ನಾಟಕ ಮತ್ತಿತರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೋಗಮುಕ್ತ ಕರ್ನಾಟಕ ಮಾಡುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ ನಗರದಲ್ಲಿಯೇ ಇರುವ ಶಾಲೆಯೊಂದು ಬಯಲು ಶೌಚಾಲಯದ ಮಧ್ಯದಲ್ಲಿ ನಡೆಯುತ್ತಿರುವಾಗ ತಾಲ್ಲೂಕಿನ ಅಧಿಕಾರಿಗಳು ವಿಶೇಷವಾಗಿ ಜನಪ್ರತಿನಿಧಿಗಳು ಬಾಲಕಿಯರ ವಿದ್ಯಾಭ್ಯಾಸದ ಬಗ್ಗೆ ಕಿಂಚಿತ್ತೂ ಗಮನಹರಿಸದೇ ಇರುವುದಕ್ಕೆ ಜೀವಂತ ಸಾಕ್ಷಿ.

ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಿದರೆ ಹೇಳುವುದೇ ಬೇರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸೇರಿದಂತೆ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಜಾಗೆಯ ಬಗ್ಗೆ ನ್ಯಾಯಾಲಯದಲ್ಲಿ ವಿವಾದವಿರುವುದರಿಂದ ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲದಂತಾಗಿದೆ. ಖಾಸಗಿ ವ್ಯಕ್ತಿಯೊಬ್ಬರನ್ನು ವಿನಂತಿಸಿಕೊಂಡು ಅಲ್ಲಿಯ ಮುಖ್ಯೋಪಾಧ್ಯಾಯರು ತಾತ್ಕಾಲಿಕವಾಗಿ ಕಳೆದ ನಾಲ್ಕೈದು ವರ್ಷದ ಹಿಂದೆ ನಿರ್ಮಿಸಿದ ಶೆಡ್‌ನಲ್ಲಿ ಕಲಿಸಬೇಕಾದ ದಯನೀಯ ಪರಿಸ್ಥಿತಿ ಇದೆ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.

`ಆಗಾಗ್ಗೆ ಬಾಲಕಿಯರ ಪ್ರೌಢಶಾಲೆ ವಿವಾದಕ್ಕೆ ಸಂಬಂಧಿಸಿದಂತೆ ಪತ್ರಿಕಾ ಹೇಳಿಕೆಯನ್ನು ನೀಡಿ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಟೀಕಿಸುತ್ತಿದ್ದರು. ಈಚೆಗೆ ಅವರು  ಮೌನ ತಾಳಿದ್ದಾರೆ. ಇನ್ನು ಶಾಸಕ ವೆಂಕಟರಾವ್ ನಾಡಗೌಡರು ನರಕಯಾತನೆಯನ್ನು ಅನುಭವಿಸುತ್ತಾ ಬಂದಿರುವ ಈ ಶಾಲೆಯ ವಿದ್ಯಾರ್ಥಿನಿಯರ ಸಂಕಟದ ಬಗ್ಗೆ ಕಾಳಜಿ ವಹಿಸಿದಂತೆ ಕಂಡುಬಂದಿಲ್ಲ~ ಎಂದು ಪಾಲಕರು ಆಕ್ಷೇಪಿಸುತ್ತಾರೆ.

ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಘಟಕದ ಅಧ್ಯಕ್ಷ ಪಂಪಾಪತಿ ಗುಡದೂರು, ಕಾರ್ಯದರ್ಶಿ ಗುರುರಾಜ ಮುಕ್ಕುಂದಾ, `ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಅಧೋಗತಿಯನ್ನು ಖುದ್ದಾಗಿ ವೀಕ್ಷಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವಿದ್ಯಾರ್ಥಿನಿಯರೊಂದಿಗೆ ಉಗ್ರ ಸ್ವರೂಪದ ಚಳವಳಿ ಮಾಡಬೇಕಾಗುತ್ತದೆ~ ಎಂದು ಎಚ್ಚರಿಸಿದ್ದಾರೆ.

`ಟಿ.ಯು.ಸಿ.ಐ. ರಾಜ್ಯ ಅಧ್ಯಕ್ಷ ಡಿ.ಎಚ್.ಪೂಜಾರ್ ಬಿ.ಎಸ್. ಪಾಟೀಲ್ ಸರ್ಕಾರಿ ಅಭಿಯೋಜಕರಾಗಿದ್ದ ಸಮಯದಲ್ಲಿ 768/3 ಜಾಗ ಸರ್ಕಾರದ್ದೆಂದು ನ್ಯಾಯಾಲಯದಿಂದ ಡಿಕ್ರಿಯಾಗಿತ್ತು. ಆದರೆ ಸ್ಥಳೀಯ ಅಧಿಕಾರಿಗಳು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಜಾಗೆಯನ್ನು ತಮ್ಮ ವಶಕ್ಕೆ ಪಡೆದುಕೊಳ್ಳದೇ ಮಾಜಿ ಶಾಸಕ ಬಾದರ್ಲಿ ಹಂಪನಗೌಡರ ಕುಟುಂಬಕ್ಕೆ ಪರೋಕ್ಷವಾಗಿ ಬೆಂಬಲಿಸಿದ್ದಾರೆ~ ಎಂದು ಟೀಕಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.