ADVERTISEMENT

ಸಮಾಜ ಸಂಘಟನೆಗೆ ಸಮಾವೇಶ ಅರ್ಥಪೂರ್ಣ

ಜಿಲ್ಲಾ ಬಣಜಿಗರ ಸಮಾವೇಶದಲ್ಲಿ ಸಚಿವ ಸಿ.ಎಂ.ಉದಾಸಿ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 8:40 IST
Last Updated 25 ಡಿಸೆಂಬರ್ 2012, 8:40 IST

ರಾಯಚೂರು: ಕಾಲಕ್ಕೆ ತಕ್ಕಂತೆ ಬಣಜಿಗ ಸಮಾಜ ಬಾಂಧವರು ಬದಲಾಗಬೇಕು. ಬರೀ ಚಿಕ್ಕಪುಟ್ಟ ಕಿರಾಣಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿದರೆ ಸಾಲದು. ಶಿಕ್ಷಣಕ್ಕೆ ಒತ್ತು ಕೊಡಬೇಕು. ಶಕ್ತಿಯುತರಾಗಿ ಬೆಳೆದು ಸಮಾಜ ಸಂಘಟನೆಗೆ ಮುಂದಾಗುವ ದಿಶೆಯಲ್ಲಿ ಬಣಜಿಗ ಸಮಾವೇಶ ಅರ್ಥಪೂರ್ಣವಾಗಿದೆ ಎಂದು ಲೋಕೋಪಯೋಗಿ ಖಾತೆ ಸಚಿವ ಸಿ.ಎಂ ಉದಾಸಿ ಹೇಳಿದರು.

ಇಲ್ಲಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸಂಘದ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ಧ ಜಿಲ್ಲಾ ಬಣಜಿಗರ ಸಮಾವೇಶ ಹಾಗೂ ಜಯದೇವಿ ತಾಯಿ ಲಿಗಾಡೆ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಉದ್ಯಮಿ ಅಶೋಕ ಖೇಣಿ, ಬಣಜಿಗರು ಸಮಾಜದ ನರನಾಡಿಗಳಿಂದ್ದಂತೆ. ಈ ನರನಾಡಿ ವ್ಯವಸ್ಥೆ ಇಲ್ಲದೇ ಇದ್ದರೆ ಬದುಕುವುದೇ ಕಷ್ಟ. ಅಂಥ ಸಮಾಜ ಬಣಜಿಗ ಸಮಾಜ. ಅಂಥ ಸಮಾಜ ಅವಿಭಕ್ತ ಕುಟುಂಬಗಳು ಕಡಿಮೆ ಆಗಿ ಚಿಕ್ಕದಾಗುತ್ತಿರುವುದು ಒಟ್ಟು ಸಮಾಜದ ಅಭಿವೃದ್ಧಿಗೆ ಹಿನ್ನೆಡೆ ಆಗಿದೆ ಎಂದರು.

ಬಣಜಿಗ ಸಮಾಜದಲ್ಲಿ ಜನಿಸಿ ವ್ಯಾಪಾರ ವಹಿವಾಟು ನ್ಯಾಯಯುತವಾಗಿ ಮಾಡಿಕೊಂಡು ನಡೆಯುತ್ತಿದ್ದ ತಮಗೆ ಮಾಜಿ ಪ್ರಧಾನಿ ದೇವೇಗೌಡರಂಥವರು ತೊಂದರೆ ಕೊಡುತ್ತಾರೆ. ಅಂಥವರಿಗೆ ಹೆದರಬೇಕಾಗಿಲ್ಲ. ನಾನು ಹೆದರಿಲ್ಲ. ಬಸವಣ್ಣನವರ ತತ್ವ, ತಾಯಿ ಆಶೀರ್ವಾದದೊಂದಿಗೆ ವ್ಯಾಪಾರ ಮುನ್ನಡೆದಿದೆ ಎಂದು ಹೇಳಿದರು.

ಬಣಜಿಗ ಸಮಾವೇಶದಿಂದ ವೀರಶೈವ ಸಮಾಜ ಒಗ್ಗಟ್ಟಿಗೆ ಯಾವುದೇ ರೀತಿ ಅಡ್ಡಿ ಇಲ್ಲ. ನಮ್ಮ ಮನೆ, ನಮ್ಮ ಸಮಾಜ ಬಲಗೊಳಿಸುವ ಪ್ರಕ್ರಿಯೆ ಇದಾಗಿದೆ ಎಂದು ಸನ್ಮಾನಿತರಾದ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶಂಕರ ಬಿದರಿ ಹೇಳಿದರು.

ಎಸ್ ನಿಜಲಿಂಗಪ್ಪ, ಜೆ.ಎಚ್ ಪಟೇಲ್ ಸೇರಿದಂತೆ ಅನೇಕ ಮಹಾನ್ ನಾಯಕರನ್ನು ಜಗತ್ತಿಗೆ ಕೊಟ್ಟ ಸಮಾಜ ಬಣಜಿಗ ಸಮಾಜ. ಸಾಮಾಜಿಕ, ಆರ್ಥಿಕ, ಧಾರ್ಮಿಕ ನಾಯಕತ್ವದಲ್ಲಿ ನಮ್ಮತನ ಉಳಿಸಿಕೊಂಡು ಹೋಗುವ ಚಿಂತನೆ ಮಾಡಬೇಕು. ಸ್ಪಧಾತ್ಮಕ ಜಗತ್ತಿನಲ್ಲಿ ಸಮಾಜ ಮುನ್ನಡೆ ಹೇಗೆ ಸಾಧ್ಯ ಎಂಬುದರ ಬಗ್ಗೆ ಗಂಭೀರ ಚಿಂತನೆ ನಡೆಯಬೇಕು. ನಮ್ಮ ಧರ್ಮ ಮತ್ತು ನಮ್ಮ ಹಿರಿಯರು ತೋರಿದ ಮಾರ್ಗವೇ ನಮಗೆ ಆದರ್ಶ ಆಗಬೇಕು ಶಂಕರ ಬಿದರಿ ಹೇಳಿದರು.

ರಾಜ್ಯ ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಗವಿಸಿದ್ದಪ್ಪ ಕೊಪ್ಪಳ ಮಾತನಾಡಿ, ಬಣಜಿಗರನ್ನು ಬಿಟ್ಟು ಕರ್ನಾಟಕ ಇತಿಹಾಸವಾಗಲಿ. ಕರ್ನಾಟಕ ಶೈಕ್ಷಣಿಕ ಕ್ಷೇತ್ರ ಇತಿಹಾಸ ಪೂರ್ಣ ಆಗುವುದಿಲ್ಲ. ಅಷ್ಟೊಂದು ಕೊಡುಗೆಯನ್ನುಒಟ್ಟು ಸಮುದಾಯಕ್ಕೆ ಬಣಜಿಗ ಸಮಾಜ ಕೊಟ್ಟಿದೆ. ವಿರಕ್ತ ಮಠ ಮಾನ್ಯಗಳು ಬಣಜಿಗರ ಬೆಂಬಲ ಮತ್ತು ನೇತೃತ್ವದಲ್ಲಿ ಬೆಳೆದಿವೆ. ಲಿಂಗಾಯಿತ ಸಮುದಾಯದ 8 ಮುಖ್ಯಮಂತ್ರಿಗಳು ಆಗಿ ಹೋಗಿದ್ದು, ಎಸ್.ಆರ್ ಬೊಮ್ಮಾಯಿ ಹೊರತುಪಡಿಸಿ 7 ಜನ ಬಣಜಿಗ ಸಮಾಜಕ್ಕೆ ಸೇರಿದವರು ಎಂಬುದು ಸಮಾಜ ಬಾಂಧವರು ಹೆಮ್ಮೆ ಪಡುವ ಸಂಗತಿ ಎಂದು ವಿವರಿಸಿದರು.

ಸಮಾಜದ ಎಲ್ಲ ವರ್ಗದವರನ್ನು ಸಮನ್ವಯದಿಂದ ಕರೆದೊಯ್ಯುವ ಸಾಮರ್ಥ್ಯ ಬಣಜಿಗ ಸಮಾಜಕ್ಕೆ ಇದೆ ಎಂಬುದನ್ನು ಇದು ತೋರಿಸಿಕೊಡುತ್ತದೆ ಎಂದು ಹೇಳಿದ ಅವರು, ಶರಣರ ತತ್ವ ಪರಿಪಾಲನೆ ಸಮಾಜದ ಉಸಿರಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ರಾಮನಗೌಡ ಜಾಲಿಬೆಂಚಿ ಅಧ್ಯಕ್ಷತೆವಹಿಸಿದ್ದರು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಸತ್ಕರಿಸಲಾಯಿತು.

ಬಣಜಿಗ ಸಮಾಜದ ನಗರ ಘಟಕದ ಅಧ್ಯಕ್ಷ ಶರಣಬಸಪ್ಪ ಅರಳಿ ಸ್ವಾಗತಿಸಿದರು. ಯುವ ಘಟಕದ ಅಧ್ಯಕ್ಷ ಎನ್ ಉದಯಕುಮಾರ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ ಹಳ್ಳೂರ, ಬಸವರಾಜ ಕಳಸ ಕಾರ್ಯಕ್ರಮ ನಿರೂಪಿಸಿದರು. ಸಿದ್ಧರಾಮಪ್ಪ ಕಾಡ್ಲೂರು ವಂದಿಸಿದರು.

ಬಣಜಿಗ ಸಮಾಜದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷ ತಾರಾದೇವಿ ವಾಲಿ, ಮಧುಮಾಲಾ ಲಿಗಾಡೆ, ನಗರಸಭೆ ಸದಸ್ಯೆ ರುದ್ರಪ್ಪ ಅಂಗಡಿ, ದಾನಮ್ಮ ಹಾಗೂ ಸಮಾಜದ ಅನೇಕ ಹಿರಿಯರು, ಗಣ್ಯರು, ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.