ADVERTISEMENT

ಸಾಮಾಜಿಕ ಕಳಕಳಿಯ ಕ್ಯಾಥೋಲಿಕ್ ಚರ್ಚ್‌

ಶರಣ ಪ್ಪ ಆನೆಹೊಸೂರು
Published 24 ಡಿಸೆಂಬರ್ 2017, 5:19 IST
Last Updated 24 ಡಿಸೆಂಬರ್ 2017, 5:19 IST
ಕಡದರಾಳ ತಾಂಡಾದಲ್ಲಿ ಭಕ್ತರಿಂದ ನಿರ್ಮಾಣಗೊಂಡ ಚರ್ಚ್‌
ಕಡದರಾಳ ತಾಂಡಾದಲ್ಲಿ ಭಕ್ತರಿಂದ ನಿರ್ಮಾಣಗೊಂಡ ಚರ್ಚ್‌   

ಮುದಗಲ್: ಇಲ್ಲಿನ ಕ್ಯಾಥೋಲಿಕ್ ಚರ್ಚ್ ಕ್ರಿ.ಶ. 1438 ರಲ್ಲಿ ನಿರ್ಮಾಣಗೊಂಡಿದ್ದು, ದಕ್ಷಿಣ ಭಾರತದಲ್ಲಿಯೇ ಅತ್ಯಂತ ಪ್ರಾಚೀನ ಚರ್ಚ್ ಇದಾಗಿದೆ. ಮುದಗಲ್‌ ನಲ್ಲಿ ಕ್ರೈಸ್ತಧರ್ಮ ಪ್ರಚಾರ ಮಾಡಲು ವಿಜಯನಗರದ ಅರಸರು ಹಾಗೂ ವಿಜಯಪುರ ಆದಿಲ್‌ಶಾಹಿಗಳು ಅನುಮತಿ ನೀಡಿದರು. ಕ್ರಿ.ಶ. 1557 ರಲ್ಲಿ ವಿಜಯಪುರದ ಇಬ್ರಾಹಿಂ ಆದಿಲ್‌ಶಾಹಿ ಮುದಗಲ್ ಚರ್ಚ್‌ ಅಭಿವೃದ್ಧಿಗಾಗಿ ಇನಾಂಭೂಮಿ ನೀಡಿದನು ಎಂದು ಡೆಪ್ಯೂಟಿ ಕಮೀಷನರ್‌ ಬಶೀರ್ ಅಹ್ಮದ್ ಅವರು ರಚಿಸಿ ಬಿಜಾಪುರ ಇತಿಹಾಸ ಕೃತಿಯಲ್ಲಿ ಉಲ್ಲೇಖವಾಗಿದೆ.

ವಿಜಯನಗರದ ಅರಸರು ಹಾಗೂ ವಿಜಯಪುರದ ಸುಲ್ತಾನರು ನೀಡಿದ ಪ್ರೋತ್ಸಾಹ ಪೋಷಣೆಯಿಂದಾಗಿ ಕ್ರೈಸ್ತ ಧರ್ಮ ಇಲ್ಲಿ ಬೆಳೆಯಿತು. ಮುದಗಲ್‌ನಲ್ಲಿ ಕ್ರೈಸ್ತರು ಧರ್ಮ ಬೋಧನೆ ಜತೆಗೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ವೈದ್ಯಕೀಯ ಕ್ಷೇತ್ರದಲ್ಲಿ ಪಟ್ಟಣದ ಅಭಿವೃದ್ಧಿಗೆ ಕಾರಣವಾದರು.

ಮುದಗಲ್ ಪಟ್ಟಣ ದೊಡ್ಡ ವ್ಯಾಪಾರ ಕೇಂದ್ರವಾಗಿತ್ತು. ವಿಜಯನಗರದ ಕಾಲದಲ್ಲಿ ಪೋರ್ಚುಗೀಸರು ಗೋವಾದ ಮೂಲಕ ಮುದಗಲ್‌ಗೆ ತಮ್ಮ ವ್ಯಾಪಾರಕ್ಕಾಗಿ ಬಂದರು. ಇಲ್ಲಿ ನೆಲೆ ನಿಂತರು. ವ್ಯಾಪಾರಿಗಳು ತಮ್ಮ ದೇವರ ಆರಾಧನೆಗಾಗಿ ವಿಜಯಪುರದ ಇಬ್ರಾಹಿಂ ಆದಿಲ್‌ಶಾಹಿ ಅವರಿಂದ ಚರ್ಚ್‌ಗಾಗಿ ಇನಾಂಭೂಮಿ ಪಡೆದು ಚರ್ಚ್‌ ನಿರ್ಮಿಸಿದ್ದಾರೆ.

ADVERTISEMENT

ಇಲ್ಲಿ ಕ್ರಿ.ಶ 1875 ರ ಪೂರ್ವದಲ್ಲಿ ಇಲ್ಲಿ 4 ಚರ್ಚ್‌ಗಳಿದ್ದವು. ಆ ಸಂದರ್ಭದಲ್ಲಿ ಪ್ಲೇಗ್ ಕಾಣಿಸಿಕೊಂಡಿದ್ದರಿಂದ ಜನರು ಗ್ರಾಮ ತೊರೆದರು. ಇದಾರಿಂದಾಗಿ ಚರ್ಚ್‌ಗಳು ನಿರ್ವಹಣೆ ಇಲ್ಲದೆ ಹಾಳಾದವು. ಕೆಲ ವರ್ಷಗಳ ನಂತರ ಮತ್ತೆ ಜನರು ಬಂದು ಇಲ್ಲಿಯೇ ವಾಸ ಮಾಡಲು ಪ್ರಾರಂಭಿಸಿದರು. ಕ್ರಿ.ಶ. 1903ರಲ್ಲಿ ಮೊದಲು ಚರ್ಚ್‌ ಇದ್ದ ಸ್ಥಳಗಳಲ್ಲಿ ಮತ್ತೆ ಬೃಹತ್‌ ಚರ್ಚ್‌ಗಳನ್ನು ನಿರ್ಮಿಸಿದರು. ಆಂದು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಕಲಬುರ್ಗಿ ಜಿಲ್ಲೆಯ ಚಿತಾಪುರ, ರಾಯಚೂರು ಹಾಗೂ ಮುದಗಲ್‌ನಲ್ಲಿ ಮಾತ್ರ ಚರ್ಚ್‌ಗಳಿದ್ದವು.

ಸದ್ಯ ಜಿಲ್ಲೆಯಲ್ಲಿ 19 ಚರ್ಚ್‌ಗಳಿವೆ. ಇಲ್ಲಿನ ಚರ್ಚ್ ಸುಮಾರು 3 ಎಕರೆ 17 ಗುಂಟೆ ವಿಸ್ತೀರ್ಣ ಹೊಂದಿದ್ದು, ವಿಚಾರಣೆ ಗುರುಗಳು ವಾಸಿಸುವ ಕಟ್ಟಡವನ್ನು ಫ್ರಾನ್ಸಿಸ್‌ಕನ್ ಸಭೆಯ ಸಿಲ್‌ವೆಸ್ಟರ್‌ಮೆಕಾಲ್ಡಿರಿಕ್‌ ಅವರು ನಿರ್ಮಿಸಿದ್ದಾರೆ ಎಂದು ಕೆಲ ಉಲ್ಲೇಖದಿಂದ ತಿಳಿದು ಬರುತ್ತಿದೆ.

ಚರ್ಚ್‌ ಆಧೀನದಲ್ಲಿ ಇಟಲಿ ಮೂಲದ ಸಿಸ್ಟರ್ ಅಂಚೆಲ್ಲಾ ಅವರು ಸಂತ ಅನ್ನಮ್ಮ ಎಂಬ ಹೆಸರಿನ ಆಸ್ಪತ್ರೆ ತೆರೆದಿದ್ದರು. ಆಗಿನ ವೇಳೆ ಈ ಆಸ್ಪತ್ರೆ ತಾಲ್ಲೂಕಿಗೆ ದೊಡ್ಡದಾಗಿತ್ತು. ಸದ್ಯ ಚರ್ಚ್ ಆಧೀನದಲ್ಲಿ ಕನ್ನಡ ಹಾಗೂ ಆಂಗ್ಲಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ನಡೆಯುತ್ತಿವೆ.

ಚರ್ಚ್‌ ಇಲ್ಲಿನ ಬಡ, ಶೋಷಿತ ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಚರ್ಚ್‌ಗೆ ಸಂಬಂಧಿಸಿದ 7 ಎಕರೆ ಭೂಮಿಯನ್ನು ಶಾಲೆಗೆ ದಾನ ನೀಡಲಾಗಿದೆ. ಭಕ್ತರು ಕಡದರಾಳ ತಾಂಡಾದಲ್ಲಿ ಸುಂದರವಾದ ಚರ್ಚ್‌ ನಿರ್ಮಿಸಿದ್ದಾರೆ. ಪಟ್ಟಣದ ಹೊರ ವಲಯದಲ್ಲಿ ವನ ಚಿನ್ನಪ್ಪ ಗುಡ್ಡದಲ್ಲಿ ಸಂತ ವನ ಚಿನ್ನಪ್ಪನ ಮೂರ್ತಿ ಇದ್ದು, ಗುಡ್ಡದ ಸುತ್ತ ಭಕ್ತರು ಸಸಿ ನೆಟ್ಟಿದ್ದಾರೆ. ಇಲ್ಲಿ ಪ್ರತಿ ತಿಂಗಳದ ಮೊದಲನೇ ಸೋಮವಾರ ಪ್ರಾರ್ಥನೆ ನಡೆಯುತ್ತದೆ.

*  * 

ಇಟಲಿಯ ಸಿಸ್ಟರ್ ಅಂಚೆಲ್ಲಾ ಅವರು ಸಲ್ಲಿಸಿರುವ ಆರೋಗ್ಯ ಸೇವೆಯನ್ನು ಈ ಪ್ರದೇಶದ ಜನರು ಮರೆಯುವಂತಿಲ್ಲ.
ಸಿಸ್ಟರ್ ಅನಿತಾ, ಮುದಗಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.