ADVERTISEMENT

ಸೋರಿಕೆ: ನೀರಿನ ಪ್ರಮಾಣ ಕುಸಿತ

​ಪ್ರಜಾವಾಣಿ ವಾರ್ತೆ
Published 10 ಮೇ 2014, 11:01 IST
Last Updated 10 ಮೇ 2014, 11:01 IST
ಸೋರಿಕೆ: ನೀರಿನ ಪ್ರಮಾಣ ಕುಸಿತ
ಸೋರಿಕೆ: ನೀರಿನ ಪ್ರಮಾಣ ಕುಸಿತ   

ಮಸ್ಕಿ: ಮಸ್ಕಿ ಪಟ್ಟಣದ ಶಾಶ್ವತ ಕುಡಿ­ಯುವ ನೀರಿನ ಯೋಜನೆಯ ಕೆರೆಯಲ್ಲಿ ನೀರಿನ ಸೋರಿಕೆ ಹಾಗೂ ಅನಿಯಮಿತ­ವಾಗಿ ನೀರು ಬಳಕೆ ಮಾಡುಕೊಳ್ಳುತ್ತಿ­ರುವುದಿಂದ ನೀರು ಸಂಗ್ರಹದ ಕೆರೆಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿದೆ. ಇದರಿಂದ  ಬರುವ ದಿನ­ಗಳಲ್ಲಿ ಮಸ್ಕಿಯಲ್ಲಿ  ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

₨ 5.60 ಕೋಟಿ ವೆಚ್ಚದಲ್ಲಿ ತುಂಗ­ಭದ್ರಾ ಎಡದಂಡೆ ಕಾಲುವೆಯ ನೀರು ಬಳಸಿಕೊಂಡು ಮಸ್ಕಿಯ ನಾಗರಿಕರಿಗೆ ಮುಂದಿನ 20 ವರ್ಷಗಳವರೆಗೆ ಪ್ರತಿ ವ್ಯಕ್ತಿಗೆ ದಿನಕ್ಕೆ 40 ಲೀಟರ್‌ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯ ಕೆರೆಯಲ್ಲಿ ಈಗಾಗಲೇ 7 ಅಡಿ ನೀರು ಕಡಿಮೆಯಾಗಿರುವುದು ಆತಂಕ ಸೃಷ್ಟಿಗೆ ಕಾರಣವಾಗಿದೆ.

‘20 ಅಡಿ ನೀರು ಸಂಗ್ರಹ (2 ಲಕ್ಷ 66 ಸಾವಿರ ಕ್ಯೂಬಿಕ್‌ ಮೀಟರ್‌)ದ ಕೆರೆಯ ನೀರು ಬೇಸಿಗೆಯ ಮೂರು ತಿಂಗಳು ಮಸ್ಕಿ ಪಟ್ಟಣಕ್ಕೆ ಪೂರೈಕೆಯಾ­ಗಬೇಕು. ಒಂದು ತಿಂಗಳಲ್ಲಿಯೇ 7 ಅಡಿ ನೀರು ಕಡಿಮೆಯಾಗಿದೆ.  ಕೆರೆಯಲ್ಲಿ 13 ಅಡಿ ಮಾತ್ರ ನೀರು ಇದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಅಮರೇಶ ತಿಳಿಸಿದ್ದಾರೆ.

ಕೆರೆಯಲ್ಲಿ ಸೋರುತ್ತಿರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬರುವ ಎರಡು ತಿಂಗಳು ಕೆರೆಯ ನೀರನ್ನೇ ಗ್ರಾಮ ಪಂಚಾಯಿತಿ ಅವಲಂ­ಭಿಸಿ­ದ­ರಿಂದ ನೀರಿನ ಸಮಸ್ಯೆ ಉಂಟಾ­ಗುವ ಸಾಧ್ಯತೆಗಳು ಇವೆ ಎಂದರು. ಅನಿಯಮಿತ ನೀರು ಬಳಕೆ: ಕುಡಿಯುವ ನೀರಿನ ಕೆರೆಯಿಂದ ಅನಿಯಮಿತ ಪ್ರಮಾ­ಣದಲ್ಲಿ ನೀರು ಬಳಕೆ ಮಾಡಿಕೊಳ್ಳ­ಲಾಗುತ್ತಿದೆ. ನಿಗದಿತ ಪ್ರಮಾಣಕ್ಕಿಂತ ನೀರು ಹೆಚ್ಚಿಗೆ ಹೋಗಿದ್ದರಿಂದ ಕೆರೆಯ ನೀರು ಕಡಿಮೆಯಾಗಿದೆ ಎಂದು ಪಂಚಾ­ಯಿತಿ ಎಂಜಿನಿಯರ್‌ ನಾಗೇಂದ್ರ ಪಟ್ಟಣ­ಶೆಟ್ಟಿ ತಿಳಿಸಿದರು.

ಹೊಸ ಕೆರೆ ಆಗಿದ್ದರಿಂದ ನೀರಿನ ಸೋರಿಕೆ ಸಾಮಾನ್ಯ ಎಂದು ಹೇಳಿದ ಅವರು ಗ್ರಾಮ ಪಂಚಾಯಿತಿ ನಿಯ­ಮಿತ ನೀರು ಬಳಕೆ ಮಾಡಿಕೊಂಡರೆ ಯಾವುದೇ  ಸಮಸ್ಯೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. 

ಅವೈಜ್ಞಾನಿಕ ಪೈಪ್‌ಲೈನ್‌: ಮಸ್ಕಿ ಪಟ್ಟ­ಣಕ್ಕೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ಗಳು ತೀರ ಹಳೆಯದಾಗಿವೆ. ಹೆಚ್ಚಿನ ನಳಗಳನ್ನು ಮುಖ್ಯ ಪೈಪ್‌ಗಳಿಗೆ ಅಳವಡಿಸಿ ಮನೆಗಳಿಗೆ ನೀರು ನೀಡಲಾಗುತ್ತಿದೆ. ಇಂತಹ ನಳಗಳನ್ನು ಕಿತ್ತು ಹಾಕಿ ಎಲ್ಲಾ ನಾಗರಿಕರಿಗೆ ನೀರು ಪೂರೈಕೆ ಮಾಡುವಂತೆ ನಾಗರಿಕರು ಗ್ರಾಮ ಪಂಚಾಯಿತಿಗೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT