ADVERTISEMENT

ಹೆಚ್ಚಿದ ವಾಹನ ದಟ್ಟಣೆ: ಸಂಚಾರ ಸಂಕಟ

ಹಲವೆಡೆ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳು: ಸಂಚಾರ ಪೊಲೀಸರ ಪರದಾಟ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 7:39 IST
Last Updated 11 ಜುಲೈ 2017, 7:39 IST
ಹೆಚ್ಚಿದ ವಾಹನ ದಟ್ಟಣೆ: ಸಂಚಾರ ಸಂಕಟ
ಹೆಚ್ಚಿದ ವಾಹನ ದಟ್ಟಣೆ: ಸಂಚಾರ ಸಂಕಟ   

ಸಿಂಧನೂರು: ನಗರದ ಮುಖ್ಯರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಇಲ್ಲಿಯ ರಾಣಿಚನ್ನಮ್ಮ ವೃತ್ತದಿಂದ ಸತ್ಕಾರ ಹೋಟೆಲ್, ಮಹಾತ್ಮಗಾಂಧಿ ವೃತ್ತ, ತಾಲ್ಲೂಕು ಪಂಚಾಯಿತಿ, ದಯಾನಂದ ಕಾಂಪ್ಲೆಕ್ಸ್, ಹೋಟೆಲ್ ನಂದಿನಿ ಡಿಲಕ್ಸ್ ಹಾಗೂ ಬಸ್ ನಿಲ್ದಾಣದ ಮುಂಭಾಗದಲ್ಲಿ ಬೈಕ್, ಆಟೊ, ಟೆಂಪೋ, ಕಾರು ಸೇರಿದಂತೆ ವಾಹನಗಳ ದಟ್ಟಣೆ ಹೆಚ್ಚಿದ್ದು,  ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ.

ಗಂಗಾವತಿ, ಕುಷ್ಟಗಿ ಮತ್ತು ಹಳೆಬಜಾರ್ ರಸ್ತೆಗಳಲ್ಲಿ ಕಂಡಕಂಡಲ್ಲಿ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದಾರೆ. ಇದರಿಂದಾಗಿ ದಿನನಿತ್ಯ ಐದಾರು ಕಡೆ ರಸ್ತೆ ಅಪಘಾತಗಳು ಸಂಭವಿಸುತ್ತಿವೆ.

ADVERTISEMENT

ಬಸ್ ನಿಲ್ದಾಣದ ಮುಂದೆ ಬಸ್‌ಗಳು ಒಳ ಹೋಗುವ ದಾರಿಯಲ್ಲಿಯೇ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದು ಬಸ್ ಚಾಲಕ, ನಿರ್ವಾಹಕರಿಗೆ ತಲೆನೋವಾಗಿ ಪರಿಣಮಿಸಿದೆ.

ರಾಜ್ಯ ಹೆದ್ದಾರಿ ವಿಸ್ತರಣೆ ಹಾಗೂ ಅಭಿವೃದ್ಧಿ ದೃಷ್ಠಿಯಿಂದ ಕೇಂದ್ರ ಸರ್ಕಾರದ ₹72 ಕೋಟಿ ಅನುದಾನದಲ್ಲಿ ಇಲ್ಲಿನ ಮಹಾತ್ಮಗಾಂಧಿ ವೃತ್ತದಿಂದ ಪಿಡಬ್ಲ್ಯೂಡಿ ಕ್ಯಾಂಪಿನವರೆಗೆ ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ರಸ್ತೆ ಪಕ್ಕದಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಕಾಮಗಾರಿ ನಡೆದಿದೆ.

ಇದರಿಂದ ನಗರದಿಂದ ಹೋಗಿ ಬರುವ ಬಸ್, ಲಾರಿ, ಕಾರು, ಬೈಕ್‌ಗಳು ಒಂದೇ ರಸ್ತೆಯಲ್ಲಿಯೇ ಸಂಚರಿಸುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಿದೆ. ಕೆಲ ಬೈಕ್‌ ಸವಾರರು ಟ್ರಾಫಿಕ್‌ನಲ್ಲಿ ಸಿಕ್ಕಿಕೊಳ್ಳುವ ಭಯದಿಂದ ಮುಖ್ಯರಸ್ತೆ ಬದಿಯ ಬಡಾವಣೆಗಳ ಓಣಿಗಳಲ್ಲಿ ಸರ್ಕಸ್ ಮಾಡುತ್ತಾ ಸಾಗುವಂತಾಗಿದೆ.

‘ಇಲ್ಲಿನ ಮಹಾತ್ಮಗಾಂಧಿ ವೃತ್ತದಲ್ಲಿ ಸಂಚಾರ ಠಾಣೆಯ ಪೊಲೀಸರು ಪ್ರತಿನಿತ್ಯ ಟ್ರಾಫಿಕ್ ನಿಯಂತ್ರಣಕ್ಕೆ ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ರಸ್ತೆ ಅಪಘಾತಗಳು ಸಂಭವಿಸಿದಾಗ ಮಾತ್ರ ಪೊಲೀಸ್ ಅಧಿಕಾರಿಗಳು ಬರುತ್ತಾರೆ’ ಎಂದು ಆರ್‌ವೈಎಫ್ಐ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗರಾಜ ಪೂಜಾರ ದೂರುತ್ತಾರೆ.

‘ಪಟ್ಟಣ ಬೆಳೆಯುತ್ತಿದೆ. ವಾಹನ ದಟ್ಟಣೆ ಮಿತಿ ಮೀರುತ್ತಿದೆ. ಆದರೂ ಸಂಚಾರ ಠಾಣೆಯ ಪೊಲೀಸರು ಗಮನ ಹರಿಸಿಲ್ಲ. ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು’ ಎಂದು ಮನುಜಮತ ಬಳಗದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾದರ್ಲಿ ಒತ್ತಾಯಿಸುತ್ತಾರೆ.
ಡಿ.ಎಚ್.ಕಂಬಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.