ADVERTISEMENT

ಉಟಕನೂರು ಬಸವಲಿಂಗ ತಾತ ಜಾತ್ರೆ ಇಂದು

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 5:20 IST
Last Updated 9 ಜನವರಿ 2018, 5:20 IST

ಕವಿತಾಳ: ಪರಮ ತಪಸ್ವಿ, ಮೌನಯೋಗಿ, ಈ ಭಾಗದ ನಡೆದಾಡುವ ದೇವರೆಂದೆ ಕರೆಯಿಸಿಕೊಳ್ಳುತ್ತಿದ್ದ ಲಿಂಗೈಕ್ಯ ಉಟಕನೂರು ಬಸವಲಿಂಗ ತಾತನವರ 27ನೇ ಪುಣ್ಯ ಸ್ಮರಣೆ ನಿಮಿತ್ತ ಸಮೀಪದ ಉಟಕನೂರು ಗ್ರಾಮದಲ್ಲಿ ಮಂಗಳವಾರ ಜಾತ್ರಾ ಮಹೋತ್ಸವ ನಡೆಯಲಿದೆ.

ಭವ್ಯ ಪರಂಪರೆ ಹೊಂದಿದ ಉಟಕನೂರು ಮಠವು ಶರಣರ ಸಂತತಿಯಿಂದಾಗಿ ಆಚಾರ ಮಠವಾಗಿದೆ. 20ನೇ ಶತಮಾನದಲ್ಲಿ ಬದುಕಿ ಬಾಳಿದ ಗುರುಪಾದಯ್ಯ ಸ್ವಾಮಿಗಳ ಮೂರನೇ ಪತ್ನಿಗೆ ಜನಿಸಿದ ಗಂಡು ಮಗುವು ಸಂಸಾರದ ಕಡೆಗೆ ಲಕ್ಷ್ಯ ಕೊಡದೆ ಹುಚ್ಚರಂತೆ ವರ್ತಿಸ ತೊಡಗಿದಾಗ ಚಿಂತಿತರಾದ ಗುರುಪಾದಯ್ಯ ಅವರು ಕೇದಾರದ ಜಗದ್ಗುರುಗಳ ಮಾರ್ಗದರ್ಶನದಂತೆ ಮಠಕ್ಕೆ ಸೇರಿಸಿದರು.

ಆಗ ಅವರು ತಲೆಯಲ್ಲಿ ಸುಳಿ ಇಲ್ಲದ ಕಾಲಲ್ಲಿ ಗೆರೆಗಳಿಲ್ಲದ ಬಾಲಕನ ದಿವ್ಯ ತೇಜಸ್ಸನ್ನು ಕಂಡು ಇವನು ಹುಚ್ಚನಲ್ಲ ಜಗವನ್ನು ಮೆಚ್ಚಿಸುವ ಯೋಗಿ ಆಗುತ್ತಾನೆ ಎಂದು ಆಶೀರ್ವದಿಸಿದರು ಎಂದು ಹೇಳಲಾಗುತ್ತಿದೆ.

ADVERTISEMENT

ಜಗದ್ಗುರುಗಳ ಆಶೀರ್ವಾದದಂತೆ ಬಸವಲಿಂಗ ಎನ್ನುವ ಬಾಲಕನು ದಿನ ಕಳೆದಂತೆ ಬಾಲಚಂದ್ರನಂತೆ ಕಂಗೊಳಿಸತೊಡಗಿದ್ದು ಶಿವ ಧ್ಯಾನಾಸಕ್ತರಾಗಿ ಪರರ ಕಷ್ಟ ನಷ್ಟಗಳನ್ನು ಪರಿಹರಿಸುತ್ತಾ ಶಾಪಾನುಗ್ರಹ ಸಮರ್ಥರೆನಿಸಿಕೊಂಡು ಹಸಿವು ತೃಷೆಗಳ ಕಡೆ ಗಮನ ಕೊಡದೆ ತನ್ನ ಯೋಗಾವಸ್ಥೆಯಲ್ಲಿಯೇ ಬಸವಲಿಂಗ ಶರಣರು ಕಾಲವನ್ನು ಕಳೆದು ಬಾಲಕನಂತೆ ಅವರು ಆಡಿದ ಆಟಗಳೆಲ್ಲಾ ಲೀಲೆಗಳಾದವು.

1992ರಲ್ಲಿ ಸ್ವಾಮೀಜಿ ಲೀನರಾದ ನಂತರ ನೂರಾರು ಗದ್ದುಗೆಗಳನ್ನು ಜಿಲ್ಲೆಯಾದ್ಯಂತ ಸ್ಥಾಪಿಸಲಾಯಿತು. ಇವರ ಕಾಲಾನಂತರ ಮರಿಬಸವರಾಜ ದೇಶಿಕರನ್ನು ಮಠದ ಪೀಠಾಧಿಪತಿಗಳನ್ನಾಗಿ ನೇಮಿಸಿದ್ದು ಅವರು ಮಠದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಶ್ರೀಮಠವು ಅಪಾರ ಜನರ ಭಕ್ತರ ಸಂಖ್ಯೆ ಹೊಂದಿದೆ.

ಲಿಂಗೈಕ್ಯ ಬಸವಲಿಂಗ ತಾತನವರ ಜಾತ್ರೆಗೆ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದು, ರಥೋತ್ಸವದ ವೇಳೆಯಲ್ಲಿ ಮಠದ ಮುಂದಿನ ಮರದಲ್ಲಿ ಗಿಣಿ ರೂಪದಲ್ಲಿ ಕಾಣಿಸಿಕೊಳ್ಳುವ ತಾತನವರು ದರ್ಶನ ಭಾಗ್ಯ ಕರುಣಿಸುತ್ತಾರೆ ಎನ್ನುವ ನಂಬಿಕೆ ಭಕ್ತರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.