ADVERTISEMENT

ರಾಯಚೂರು | ಶತಮಾನ ಪೂರೈಸಿದ ಶಾಲೆಗೆ ಬೇಕಿದೆ ಸೌಲಭ್ಯ

ಜಾತ್ಯತೀತ ದೃಷ್ಟಿಕೋನ ಬಿತ್ತಿದ ಹಾಷ್ಮಿಯಾ ಶಾಲೆ; ದಾನ ಪಡೆದ ಜಾಗದಲ್ಲಿ ಅಕ್ಷರ ಕಲಿಕೆ

ಬಾವಸಲಿ
Published 14 ನವೆಂಬರ್ 2023, 6:40 IST
Last Updated 14 ನವೆಂಬರ್ 2023, 6:40 IST
ರಾಯಚೂರಿನ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಹಾಷ್ಮಿಯಾ ಶಾಲೆಯ ನೋಟ
ರಾಯಚೂರಿನ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಹಾಷ್ಮಿಯಾ ಶಾಲೆಯ ನೋಟ   

ರಾಯಚೂರು: ಶೈಕ್ಷಣಿಕವಾಗಿ ಹಿಂದುಳಿದ ರಾಯಚೂರು ಜಿಲ್ಲೆಯಲ್ಲಿ ಅಕ್ಷರ ಕ್ರಾಂತಿಗೆ ಅನೇಕರು ದುಡಿದಿದ್ದಾರೆ. ಈ ಪೈಕಿ ಹಾಶಿಮ್ ಅಲಿ ಎನ್ನುವ ಜಾಗೀರದಾರ್ ಒಬ್ಬರು ಹಾಷ್ಮಿಯಾ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಗೆ ಭೂ ದಾನ ಮಾಡಿ ಸಾವಿರಾರು ಮಕ್ಕಳ ಭವಿಷ್ಯ ರೂಪಿಸಲು ನೆರವಾಗಿದ್ದಾರೆ.

ಈಗಿನ ಶಾಸಕರ ಮಾದರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಹಾಷ್ಮಿಯಾ ಶಾಲೆ ವಿದ್ಯಾರ್ಥಿಗಳಲ್ಲಿ ಜಾತ್ಯತೀತ ಮನೋಭಾವ, ಭ್ರಾತೃತ್ವ, ಭವಿಷ್ಯ ರೂಪಿಸುವ ಉತ್ತಮ ಗುಣಗಳನ್ನು ಬೆಳೆಸುತ್ತ ಬಂದಿದೆ. ಹೀಗಾಗಿ ಇಲ್ಲಿ ಅಭ್ಯಾಸ ಮಾಡಿದ ಅನೇಕರು ತಹಶೀಲ್ದಾರ್, ಎಂಜಿನಿಯರ್, ಸಂಗೀತ ಕಲಾವಿದರು, ರಾಜಕಾರಣಿಗಳು, ದೊಡ್ಡ ವ್ಯಾಪಾರಿಗಳಾಗಿ ಹೊರ ಹೊಮ್ಮಿದ್ದಾರೆ. ಕೆಲವರು ವಿದೇಶಗಳಲ್ಲಿ ನೌಕರಿ ಮಾಡಿದ್ದಾರೆ.

ಆರಂಭದಿಂದ ಉರ್ದು ಹಾಗೂ ಕನ್ನಡ ಮಾಧ್ಯಮ ಎರಡೂ ಸೇರಿ ನಡೆಯುತ್ತಿತ್ತು. 2002ರಲ್ಲಿ ಉರ್ದು ಶಾಲೆಯ ಆಡಳಿತ ಪ್ರತ್ಯೇಕವಾಯಿತು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ‘ಎ’ ಮತ್ತು ‘ಬಿ’ ವಿಭಾಗ ಮಾಡಿ ಬೋಧಿಸಲಾಗುತ್ತಿತ್ತು. ನಿಜಾಮರ ಆಡಳಿತದ ಸಂದರ್ಭದಲ್ಲಿ ಉರ್ದು ಭಾಷೆಯ ಪ್ರಾಬಲ್ಯವಿದ್ದರೂ ಕನ್ನಡ ಮಾಧ್ಯಮ ಶಾಲೆಯ ಬೆಳವಣಿಗೆಗೆ ಅಡ್ಡಿಯಾಗಿಲ್ಲ. ಹಾಷ್ಮಿಯಾ ಶಾಲೆ ಶತಮಾನ ಪೂರೈಸಿ 105ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದು ಇದಕ್ಕೆ ನಿದರ್ಶನ.

ADVERTISEMENT

ರಾಯಚೂರು ನಗರದಲ್ಲಿ ಅಲ್ಪಸಂಖ್ಯಾತರು, ಅದರಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದ್ದರೂ ಎಸ್ಸಿ, ಎಸ್ಟಿ ಹಾಗೂ ಒಬಿಸಿ ಜನಸಂಖ್ಯೆಯೂ ಸಾಕಷ್ಟಿದೆ. ಈ ಕಾರಣಕ್ಕೆ ಹಾಷ್ಮಿಯಾ ಶಾಲೆಯಲ್ಲಿ ಎಲ್ಲ ಸಮುದಾಯದ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ಆಂಗ್ಲ ಮಾಧ್ಯಮದಲ್ಲೂ ಬೋಧಿಸಲಾಗುತ್ತಿದೆ.


ಹಿನ್ನೆಲೆ:

ನಗರದಲ್ಲಿ ವಾಸವಾಗಿದ್ದ ಜಾಗೀರದಾರ್ ವಂಶದ ಹಾಶಿಮ್ ಅಲಿ ಅವರ ಪುತ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ತಮ್ಮ ಮಗನಿಗೆ ಹಲವೆಡೆ ಚಿಕಿತ್ಸೆ ಕೊಡಿಸಿದರೂ ಗುಣಮುಖವಾಗದೆ ಅಸುನೀಗಿದರು.. ಅವರು ತಮ್ಮ ಮಗನ ನೆನಪಿಗಾಗಿ ಶಾಲೆ ನಿರ್ಮಾಣಕ್ಕೆ ಜಾಗ ನೀಡಿದ್ದರು. ನಂತರ ಇದು ಹಾಷ್ಮಿಯಾ ಶಾಲೆಯ ಹೆಸರಿನಲ್ಲಿ ಗುರುತಿಸಿಕೊಂಡಿತು. ಶಾಲೆಯ ಸ್ಥಳದಲ್ಲಿಯೇ ಪ್ರಸ್ತುತ ವಕ್ಫ್ ಆಸ್ಪತ್ರೆ, ಜಿಲ್ಲಾ ಮಹಾತ್ಮಗಾಂಧಿ ಕ್ರೀಡಾಂಗಣ ಹಾಗೂ ಸಂಚಾರ ಪೊಲೀಸ್ ಠಾಣೆ ನಿರ್ಮಾಣಗೊಂಡಿದೆ. ಶಾಲೆಗೆ ನೀಡಿದ ಜಾಗವನ್ನು ಚೆಕ್ ಬಂದಿ, ಹದ್ದುಬಸ್ತು ಮಾಡದ ಕಾರಣ ಹರಿದು ಹಂಚಿಹೋಗಿದೆ.

‘ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಾಗವನ್ನು ಶೈಕ್ಷಣಿಕ ಉದ್ದೇಶಕ್ಕೆ ದಾನ ಮಾಡಿ ಹೃದಯ ವೈಶಾಲ್ಯತೆ ಮೆರೆದ ಹಾಶಿಮ್ ಅಲಿ ಅವರ ಕಾರ್ಯ ಮಾದರಿಯಾಗಿದೆ. ಅಂದು ನೀಡಿದ ಜಾಗದಿಂದಾಗಿ ಸಾವಿರಾರು ಮಕ್ಕಳ ಕ್ರೀಡಾ ಚಟುವಟಿಕೆ ಹಾಗೂ ಶಿಕ್ಷಣ ಪಡೆಯಲು ನೆರವಾಗಿದೆ’ ಎಂದು 60ರ ದಶಕದಲ್ಲಿ ಅಭ್ಯಾಸ ಮಾಡಿದ ಮೊಹಮ್ಮದ್ ಹಸನ್ ಮೋಸಿನ್ ಹೇಳುತ್ತಾರೆ.

ಈಗಿನ ಸ್ಥಿತಿಗತಿ:

ಶತಮಾನ ಪೂರೈಸಿರುವ ಹಾಷ್ಮಿಯಾ ಶಾಲೆ ಶಿಕ್ಷಕರ ಕೊರತೆ ಎದುರಿಸುತ್ತಿದೆ. ಶಾಲೆಯಲ್ಲಿ ಉರ್ದು ಹಾಗೂ ಕನ್ನಡ ಮಾಧ್ಯಮ ಸೇರಿ ಒಟ್ಟು 257 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಪ್ರಭಾರಿ ಮುಖ್ಯ ಶಿಕ್ಷಕ ಸೇರಿ 6 ಮಂದಿ ಕಾಯಂ ಶಿಕ್ಷಕರು, ಐವರು ಅತಿಥಿ ಶಿಕ್ಷಕರು ಇದ್ದಾರೆ. ಇನ್ನೂ ನಾಲ್ವರು ಶಿಕ್ಷಕರ ಕೊರತೆ ಇದೆ. 

ಶಿಕ್ಷಕರ ಕೊರತೆಯಿಂದ ದಾಖಲಾತಿ ಕಡಿಮೆಯಾಗುತ್ತಿದೆ. 2019ರಲ್ಲಿ 1ರಿಂದ 5ನೇ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮ ಆರಂಭವಾಗಿದ್ದು, ಮೊದಲು 30 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಈಗ 11ಕ್ಕೆ ಇಳಿದಿದೆ. 5ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ 30 ವಿದ್ಯಾರ್ಥಿಗಳ ಪೈಕಿ ಈಗ 14 ವಿದ್ಯಾರ್ಥಿಗಳು ಮಾತ್ರ ಉಳಿದಿದ್ದಾರೆ. ಹೆಸರಿಗೆ ಮಾತ್ರ ಇಂಗ್ಲಿಷ್ ಮಾಧ್ಯಮವಾಗಿದೆ ಎನ್ನುವುದು ಶಿಕ್ಷಕರ ಅಳಲು.

‘ವಿದ್ಯಾರ್ಥಿಗಳಿಗೆ ಆಟದ ಮೈದಾನ, ಕಲಿಕೆಗೆ ಉತ್ತಮ ಪರಿಸರ, ಕಾಂಪೌಂಡ್, ಶೌಚಾಲಯ, ನೀರಿನ ವ್ಯವಸ್ಥೆ ಇದೆ. 14 ಕೊಠಡಿಗಳು ಇವೆ. ಕೆಕೆಆರ್‌ಡಿಬಿ ಅನುದಾನದಲ್ಲಿ 4, ವಿವೇಕ ಯೋಜನೆಯಡಿ 1 ಸೇರಿ 5 ಹೊಸ ಕಟ್ಟಡ ನಿರ್ಮಾಣವಾಗಿದೆ. ಶೀಘ್ರವೇ ಉದ್ಘಾಟನೆ ಆಗಬೇಕಿದೆ. 104 ವರ್ಷ ಪೂರ್ಣಗೊಂಡರೂ ಕೋವಿಡ್ ಹಿನ್ನೆಲೆಯಲ್ಲಿ ಶತಮಾನೋತ್ಸವ ಆಚರಣೆ ಮಾಡಿಲ್ಲ. ಈ ಬಗ್ಗೆ ತಯಾರಿ ಮಾಡಲಾಗುವುದು’ ಎಂದು ಪ್ರಭಾರ ಮುಖ್ಯ ಶಿಕ್ಷಕ ಶಂಕರ ತಿಳಿಸಿದರು.

ರಾಯಚೂರಿನ ಹಾಷ್ಮಿಯಾ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಅಭ್ಯಾಸ ಮಾಡುತ್ತಿರುವುದು
ರಾಯಚೂರಿನ ಹಾಷ್ಮಿಯಾ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಅಭ್ಯಾಸ ಮಾಡುತ್ತಿರುವುದು

ಸಾವಿರಾರು ಮಕ್ಕಳಲ್ಲಿ ಅಕ್ಷರ ಬಿತ್ತಿದ ಶಾಲೆ ಹಿಂದುಳಿದ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಬುನಾದಿ ಶತಮಾನೋತ್ಸವ ಶಾಲೆಗೆ ದಾಖಲಾತಿಯ ಕೊರತೆ

33 ಶಿಕ್ಷಕರು 1300 ಮಕ್ಕಳು... ‘ಹಾಷ್ಮಿಯಾ ಶಾಲೆಯಲ್ಲಿ ನಾನು 1998ರಿಂದ 2008ರ ವರೆಗೆ ಮುಖ್ಯ ಶಿಕ್ಷಕಿಯಾಗಿ ಕೆಲಸ ಮಾಡಿದ್ದೇನೆ. ಅಂದು 1300 ವಿದ್ಯಾರ್ಥಿಗಳು ಹಾಗೂ 33 ಶಿಕ್ಷಕರು ಇದ್ದರು. ಮಕ್ಕಳಿಗೆ ಪಠ್ಯದ ಜತೆಗೆ ಕ್ರೀಡಾ ಚಟುವಟಿಕೆ ಪ್ರೇರಣೆ ಮಾಡಲಾಗುತ್ತಿತ್ತು. ವಿಜ್ಞಾನ ಪ್ರದರ್ಶನ ಪ್ರತಿಭಾ ಕಾರಂಜಿ ಕ್ರೀಡೆಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದರು. ಪ್ರತಿ ವರ್ಷ ಬೇಸಿಗೆಯಲ್ಲಿ ‘ಚೈತ್ರ ಚಿಗುರು’ ಎಂಬ ವಿನೂತನ  ಕಾರ್ಯಕ್ರಮ ಮಾಡಿ ಕಥೆ ಹೇಳುವುದು ಸಂಗೀತ ನೃತ್ಯ ದುಂಡು ಬರವಣಿಗೆ ಸಾಮಾನ್ಯ ಜ್ಞಾನ ಬೆಳೆಸುವ ಯೋಜನೆ ರೂಪಿಸಿ  ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕ ಚಟುವಟಿಕೆ ಮಾಡಲಾಗುತ್ತಿತ್ತು. ಮಕ್ಕಳೂ ಅಷ್ಟೇ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ನನ್ನ ಶೈಕ್ಷಣಿಕ ಸೇವೆಯನ್ನು ಗುರುತಿಸಿ 2003ರಲ್ಲಿ ಆಗಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾ ಅವರಿಂದ ರಾಷ್ಟ್ರ ಪ್ರಶಸ್ತಿ ಪಡೆದಿದ್ದೇನೆ. ಆದರೆ ಅಂಥ ಶಾಲೆಯಲ್ಲಿ ಈಗ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿರುವ ಸಂಗತಿ ಕೇಳಿ ಬೇಸರವಾಗುತ್ತಿದೆ’ ಎಂದು ದಾನಮ್ಮ ಸುಭಾಷಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು. ‘1963ರಿಂದ 1969ರವರೆಗೆ ಅಭ್ಯಾಸ ಮಾಡಿದ ನನಗೆ ಹಾಷ್ಮಿಯಾ ಶಾಲೆ ಹಲವು ಬಗೆಯ ಅನುಭವ ನೀಡಿದೆ. ನಮ್ಮ ಅವಧಿಯಲ್ಲಿ ‘ಪ್ರಾಣೇಶ ಆಚಾರಿ’ ಎಂಬ ಶಿಕ್ಷಕರು ಉರ್ದು ಪಂಡಿತರಾಗಿದ್ದರು. ಪ್ರತಿನಿತ್ಯ ಅವರು ವಿದ್ಯಾರ್ಥಿಗಳಿಂದ ಬೋಧಿಸುತ್ತಿದ್ದ ‘ಅಮೃತವಾಣಿ’ ಇಂದಿಗೂ ಕಿವಿಯಲ್ಲಿ ಉಳಿದಿದೆ. ಮುಸ್ಲಿಮರು ಯಾವುದೇ ಶುಭ ಕಾರ್ಯ ಮಾಡುವಾಗ ಹೇಳುವ ‘ಬಿಸ್ಮಿಲ್ಲಾ ಹಿರ‍್ರಾಹಮಾ ನಿರ‍್ರಾಹೀಮ್‌’ ಕುರ್‌ಆನ್ ವಾಕ್ಯವನ್ನು ಬೋರ್ಡ್‌ನಲ್ಲಿ ಬರೆದ ನಂತರವೇ ಪಾಠ ಮಾಡುತ್ತಿದ್ದರು. ಇದು ಇಂದಿನ ಕಲುಷಿತ ವಾತಾವರಣದಲ್ಲಿ ಕಂಡು ಬರುವುದಿಲ್ಲ’ ಎಂದು ಹಳೆಯ ವಿದ್ಯಾರ್ಥಿ ಮಹಮ್ಮದ್ ಹಸನ್ ಮೋಸಿನ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.