ರಾಯಚೂರು: ಪ್ರಸಕ್ತ ವರ್ಷ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ ಕೊನೆಯ ವಾರದಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯೂ ಆಗಿದೆ. ರೈತರು ಹೊಲಗಳಲ್ಲಿ ಕುಂಟೆ ಹೊಡೆದು ಕಸ ಸ್ವಚ್ಛ ಮಾಡಿ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ.
ಸಣ್ಣ, ಅತಿಸಣ್ಣ ರೈತರು ಎತ್ತುಗಳನ್ನು ಬಳಸಿ ಉಳುಮೆ ಮಾಡುತ್ತಿದ್ದರೆ, ದೊಡ್ಡ ರೈತರು ಟ್ರ್ಯಾಕ್ಟರ್‌ಗಳ ಮೂಲಕ ಉಳುಮೆ ಮಾಡುತ್ತಿದ್ದಾರೆ. ಭತ್ತ ಬೆಳೆಯುವ ರೈತರು ಹೆಚ್ಚು ಇಳುವರಿ ಕೊಡುವ ಭತ್ತದ ಬೀಜಗಳನ್ನು ಆಗಲೇ ಅಧಿಕೃತ ಮಾರಾಟಗಾರರಿಂದ ಖರೀದಿಸಿದ್ದಾರೆ.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಕೇಂದ್ರಗಳಿಂದಲೂ ಅನೇಕ ರೈತರು ಮುಂಗಾರಿಗೂ ಮೊದಲೇ ಬೀಜ ಖರೀದಿಸಿಕೊಂಡು ಭತ್ತ ನಾಟಿಗೆ ಭೂಮಿ ಅಣಿಗೊಳಿಸಿದ್ದಾರೆ. ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸಿರಿಧಾನ್ಯ ಹಾಗೂ ಬಹು ಬೆಳೆ ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಆದರೂ ರೈತರು ಏಕ ಬೆಳೆಗೆ ಹೆಚ್ಚಿನ ಕೊಟ್ಟಿರುವುದು ಕಂಡು ಬರುತ್ತಿದೆ.
ತುಂಗಭದ್ರಾ ಹಾಗೂ ಕೃಷ್ಣಾ ನದಿ ದಡದಲ್ಲಿ ಹೊಲಗಳನ್ನು ಹೊಂದಿರುವ ರೈತರು ಬಿತ್ತನೆಗೆ ಭತ್ತವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಒಣಭೂಮಿ ಹೊಂದಿರುವವರು ಮಾತ್ರ ತೊಗರಿ, ಹತ್ತಿ, ಸೂರ್ಯಕಾಂತಿ, ಜೋಳ, ನವಣೆ, ಹೆಸರು ಬಿತ್ತನೆಗೆ ಒಲವು ತೋರಿದ್ದಾರೆ.
ದೊಡ್ಡ ರೈತರು ಬೆಳಿಗ್ಗೆ ನಗರ ಪ್ರದೇಶದಿಂದ ಕೃಷಿಕೂಲಿ ಕಾರ್ಮಿಕರನ್ನು ವಾಹನಗಳಲ್ಲಿ ಕರೆದೊಯ್ದು ಸಂಜೆ ಮರಳಿ ಮನೆಗೆ ಬಿಡುತ್ತಿದ್ದಾರೆ.
ರಾಯಚೂರು, ದೇವದುರ್ಗ, ಸಿಂಧನೂರು ಹಾಗೂ ಮಾನ್ವಿ ತಾಲ್ಲೂಕಿನಲ್ಲಿ ಬುಲೆರೊ ವಾಹನಗಳಲ್ಲಿ ಕೃಷಿಕರನ್ನು ಕರೆದೊಯ್ಯುತ್ತಿರುವುದು ಸಾಮಾನ್ಯವಾಗಿದೆ.
ಮುಂಗಾರು ಹಂಗಾಮಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಕೃಷಿ ಇಲಾಖೆಯು 5.53 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ. 2,500 ಹೆಕ್ಟೇರ್ ಪ್ರದೇಶದಲ್ಲಿ ನವಣೆ, 1.86 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 1.45 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ, 1.72 ಲಕ್ಷ ಹೆಕ್ಟೇರ್‌ನಲ್ಲಿ ಹತ್ತಿ, 7161 ಹೆಕ್ಟೇರ್ ಪ್ರದೇಶದಲ್ಲಿ ಜೋಳ, 1,400 ಸಾವಿರ ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, 150 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಹಾಗೂ ಇತರ ಬೆಳೆಗಳನ್ನು ಬಿತ್ತನೆ ಮಾಡಲು ಸಿದ್ಧತೆಗಳು ನಡೆದಿವೆ.
ಅಗತ್ಯ ಬಿತ್ತನೆ ಬೀಜ ದಾಸ್ತಾನು
ಜಿಲ್ಲೆಗೆ 8110 ಕ್ವಿಂಟಲ್ ಬಿತ್ತನೆ ಬೀಜಗಳು ಬೇಕಾಗುತ್ತವೆ. ಪ್ರಸ್ತುತ 5451 ಕ್ವಿಂಟಲ್ ಬಿತ್ತನೆ ಬೀಜಗಳು ಲಭ್ಯವಿದೆ. ಇದರಲ್ಲಿ ಭತ್ತ 2997 ಕ್ವಿಂಟಲ್ ತೊಗರಿ 2180 ಕ್ವಿಂಟಲ್ ದಾಸ್ತಾನು ಇದೆ. ‘ರೈತರಿಗೆ ಬೇಡಿಕೆಯ ಮೇರೆಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆ ಮಾಡಿಕೊಳ್ಳಲಾಗಿದೆ. ಜಿಲ್ಲೆಗೆ 2.29 ಲಕ್ಷ ಟನ್ ರಸಗೊಬ್ಬರ ಮಂಜೂರಾಗಿದೆ. ಪ್ರಸ್ತುತ 56759 ಟನ್ ರಸಗೊಬ್ಬರ ಹಾಗೂ 17.67 ಲಕ್ಷ ಹತ್ತಿ ಬಿತ್ತನೆ ಬೀಜಗಳ ಪ್ಯಾಕೆಟ್‌ಗಳು ಲಭ್ಯವಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಸಿ. ಜಯಪ್ರಕಾಶ ಹೇಳುತ್ತಾರೆ. ಟಿಎಸ್–3ಆರ್ ತೊಗರಿಗೆ ಅಧಿಕ ಬೇಡಿಕೆ ಇದೆ. ಮೊದಲು ಬಂದವರಿಗೆ ಆದ್ಯತೆ ಮೇಲೆ ಬೀಜ ವಿತರಣೆ ಮಾಡಲಾಗಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಭತ್ತ ಹತ್ತಿ ಜೋಳ ನವಣೆ ಬೀಜವನ್ನು ಕೊಡಲಾಗುತ್ತಿದೆ‘ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕದ ವಿಶೇಷ ಅಧಿಕಾರಿ ಅರುಣಕುಮಾರ ಹೊಸಮನಿ ಮಾಹಿತಿ ನೀಡಿದರು.
ವರ್ಷದ ಆರಂಭದಿಂದಲೂ ಉತ್ತಮ ಮಳೆ
ಜನವರಿ 19 2025 ರವರೆಗೆ 111.1 ಮಿ.ಮೀ. ಮಿ.ಮೀ ದಾಖಲಾಗಿದೆ. 49.1 ಮಿ.ಮೀ ವಾಡಿಕೆ ಮಳೆಯಾಗುತ್ತದೆ. ಆದರೆ 126ರಷ್ಟು ಹೆಚ್ಚು ಮಳೆಯಾಗಿದೆ. ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಪೂರ್ವ-ಮುಂಗಾರು ಮಳೆಯಾಗಿದೆ. ರೈತರು ಭೂಮಿ ಸಿದ್ಧತೆ ಸೇರಿದಂತೆ ಕೃಷಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಪ್ರೇರೇಪಿಸಿದೆ. ಹವಾಮಾನ ಇಲಾಖೆಯ ಪ್ರಕಾರ ಮುಂಗಾರು ಚೆನ್ನಾಗಿ ಬರಲಿದೆ. ಹವಾಮಾನ ಘಟಕವು ರೈತರಿಗೆ ನಿತ್ಯ ಗುಡಗು ಮಿಂಚು ಹಾಗೂ ಮಳೆ ಸುರಿಯುವ ಮಸೇಜ್‌ಗಳನ್ನು ಕಳಿಸುತ್ತಿದೆ. ಇದರಿಂದ ರೈತರಿಗೆ ಅನೂಕೂಲವಾಗಲಿದೆ‘ ಎನ್ನುತ್ತಾರೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಗ್ರಾಮೀಣ ಹವಾಮಾನ ಘಟಕದ ತಾಂತ್ರಿಕ ಅಧಿಕಾರಿ ಶಾಂತಪ್ಪ ಧುತ್ತರಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.