ADVERTISEMENT

ಸಮಾಜಕ್ಕೆ ಗುಣಮಟ್ಟದ ಶಿಕ್ಷಣ ಅಗತ್ಯ: ಬಿ.ಜಿ.ಹುಲ್ಲಿ

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಯಚೂರು ಪ್ರಥಮ ಜಿಲ್ಲಾ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 13:43 IST
Last Updated 11 ಅಕ್ಟೋಬರ್ 2021, 13:43 IST
ರಾಯಚೂರಿನ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‌ಇಸಿ) ಕಾರ್ಯಾಲಯದಲ್ಲಿ ಭಾನುವಾರ ಪ್ರಥಮ ಜಿಲ್ಲಾ ಸಮ್ಮೇಳನವನ್ನು ಚಿಂತಕ ಬಿ.ಜಿ.ಹುಲ್ಲಿ ಅವರು ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿದರು
ರಾಯಚೂರಿನ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‌ಇಸಿ) ಕಾರ್ಯಾಲಯದಲ್ಲಿ ಭಾನುವಾರ ಪ್ರಥಮ ಜಿಲ್ಲಾ ಸಮ್ಮೇಳನವನ್ನು ಚಿಂತಕ ಬಿ.ಜಿ.ಹುಲ್ಲಿ ಅವರು ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿದರು   

ರಾಯಚೂರು: ಆರೋಗ್ಯಕರ ಸಮಾಜಕ್ಕೆ ಗುಣಮಟ್ಟದ ಶಿಕ್ಷಣ ಅವಶ್ಯಕತೆ ಇದೆ. ಇದು ಪ್ರಸ್ತುತ ಸಮಾಜದಲ್ಲಿ ಕಾಣುತ್ತಿಲ್ಲ ಎಂದು ಚಿಂತಕ ಬಿ.ಜಿ.ಹುಲ್ಲಿ ಹೇಳಿದರು.

ನಗರದಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‌ಇಸಿ) ಕಾರ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ರಾಯಚೂರು ಪ್ರಥಮ ಜಿಲ್ಲಾ ಸಮ್ಮೇಳನವನ್ನು ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಹೋರಾಟಗಾರ ಎಚ್.‌‌ಟಿ ಭರತಕುಮಾರ ಮಾತನಾಡಿ, ಉದಾತ್ತ ಮೌಲ್ಯಗಳನ್ನು, ವ್ಯಕ್ತಿತ್ವಗಳನ್ನು ನಿರ್ಮಿಸುವ ಶಿಕ್ಷಣವನ್ನು ಆಡಳಿತ ನಡೆಸುವ ಸರ್ಕಾರಗಳು ಮಾರುಕಟ್ಟೆಯ ಉತ್ಪನ್ನವೆಂದು ಪರಿಗಣಿಸಿವೆ ಎಂದರು.

ADVERTISEMENT

ಶಿಕ್ಷಣವು ಎಲ್ಲರಿಗೂ ಸಿಗಬೇಕು ಎನ್ನುವ ಆಶಯವನ್ನಿಟ್ಟುಕೊಂಡು ದೇಶದ ಸ್ವಾತಂತ್ರ್ಯ ಸಂಗ್ರಾಮದ ನಾಯಕರು ಹಾಗೂ ನವೋದಯದ ಚಿಂತಕರು ಹೋರಾಟ ಮಾಡಿದ್ದರು. ಶಿಕ್ಷಣವು ಮಾನವನ ಚಾರಿತ್ರ್ಯವನ್ನು ರೂಪಿಸುವ, ಚಿಂತನೆಯನ್ನು, ಸಮಾನತೆಯನ್ನು ಬೆಳೆಸುವ ಪ್ರಭಾವಶಾಲಿ ಉಪಕರಣ ಎಂದು ಮನಗಂಡಿದ್ದರು. ಆದರೆ ಸ್ವಾತಂತ್ರ್ಯದ ತರುವಾಯ ಅದರಲ್ಲೂ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣ ನೀತಿಗಳ ಜಾರಿಯ ನಂತರ ಶಿಕ್ಷಣವು ದಿನೇದಿನೇ ಉಳ್ಳವರ ಸ್ವತ್ತಾಗುತ್ತಾ, ಬಡವರ ಪಾಲಿಗೆ ಗಗನಕುಸುಮವಾಗುತ್ತಿದೆ. ಯಾಂತ್ರಿಕ ಶಿಕ್ಷಣ ಹಾಗೂ ಸರ್ಟಿಫಿಕೇಟ್ ಪಡೆಯುವುದಕ್ಕಾಗಿ ಸೀಮಿತವಾಗುತ್ತಿರುವುದು ದುರಂತ ಎಂದು ಹೇಳಿದರು.

ಉ‍ಪನ್ಯಾಸ ನೀಡಿದ ಆರ್‌.ಕೆ. ವೀರಭದ್ರಪ್ಪ ಅವರು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯು ಶಿಕ್ಷಣ ಹಾಗೂ ಶಿಕ್ಷಕರರಿಗೆ ಸಂಬಂಧಿಸಿದ ವಿಷಯಗಳನ್ನಿಟ್ಟುಕೊಂಡು ದೇಶದಾದ್ಯಂತ ಕ್ರಿಯಾಶೀಲವಾಗಿದೆ. ಕರ್ನಾಟಕದಲ್ಲಿ ಕೋವಿಡ್-19 ಹಿನ್ನಲೆಯಲ್ಲಿ ಅಥಿತಿ ಶಿಕ್ಷಕರು, ಉಪನ್ಯಾಸಕರಿಗೆ ಹಾಗೂ ಖಾಸಗಿ ಶಾಲೆಯ ಶಿಕ್ಷಕರಿಗೆ ಪರಿಹಾರ ನೀಡುವಂತೆ ಯಶಸ್ವಿ ಹೋರಾಟ ಕಟ್ಟಿದೆ ಎಂದರು.

ಎನ್.ಇ.ಪಿ-2020 ಹಾಗೂ ನಾಲ್ಕು ವರ್ಷದ ಪದವಿ ಕೋರ್ಸ್ ವಿರುದ್ದ ಹಲವಾರು ಕಾರ್ಯಕ್ರಮಗಳು, ಚಳವಳಿಗಳನ್ನು ಕಟ್ಟಿದ್ದೇವೆ. ಈಗ ಆಳ್ವಿಕೆರಿಂದ ಶಿಕ್ಷಣದ ಮೇಲಾಗುತ್ತಿರುವ ದಾಳಿಗಳನ್ನು ಶೈಕ್ಷಣಿವಾಗಿ, ವೈಚಾರಿಕವಾಗಿ ಹಾಗೂ ಸಂಘಟನಾತ್ಮಕವಾಗಿ ಎದುರಿಸಲು ಹೆಚ್ಚು ಸದೃಢವಾಗಬೇಕಾಗಿದೆ ಎಂದು ಹೇಳಿದರು.

ಸಮ್ಮೇಳನದಲ್ಲಿ ನೂತನ ಸಮಿತಿ ರಚಿಸಲಾಯಿತು. ಜಿಲ್ಲಾ ಅದ್ಯಕ್ಷರಾಗಿ ಖಲೀದ್‌ ಮೊಹಿಯುದ್ದಿನ್‌, ಉಪದ್ಯಾಕ್ಷರಾಗಿ ಎಂ.ಜಿ. ಸತೀಶ್‌, ಮುರುಳಿದರ್‌ ರೆಡ್ಡಿ, ಡಾ.ಚಂದ್ರಮೌಳಿ, ಕಾರ್ಯಕಾರಿಣಿ ಸದಸ್ಯರಾಗಿ ಪ್ರಮೋದಕುಮಾರ, ಜಂಟಿ ಕಾರ್ಯದರ್ಶಿ ಅರುಣಾ ಕೆ. ಲಕ್ಷ್ಮಣ, ಆಂಜಿನಯ್ಯ, ಲಿಂಗಪ್ಪ, ಹಾಗೂ ಸದ್ಯಸರಾದ ರೆವಮ್ಮ, ದೇವರಾಜ, ಮಾರುತಿ, ವೀರೇಶ ಹೋಳಗೋಡ ಅವರನ್ನು ನೇಮಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.