ರಾಯಚೂರು: ‘ಬಸವಣ್ಣನವರು 12ನೇ ಶತಮಾನದ ಸಮಾಜದಲ್ಲಿ ಬೇರು ಬಿಟ್ಟಿದ್ದ ಮೌಢ್ಯ ತೊಲಗಿಸಲು ಶ್ರಮಿಸಿದರು. ಅವರು ಸಮಾನತೆಯ ಹರಿಕಾರರಾಗಿದ್ದಾರೆ’ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಬಣ್ಣಿಸಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವೀರಶೈವ ಲಿಂಗಾಯತ ಸಮಾಜದ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾನತೆಯ ಹರಿಕಾರ ಬಸವಣ್ಣನವರ ವಿಚಾರಗಳು ಸಾರ್ವಕಾಲಿಕವಾಗಿವೆ. ಬಸವಣ್ಣನವರು. ಸಮಾಜದಲ್ಲಿ ಅನ್ಯಾಯ ವಿರುದ್ಧ ಹೋರಾಟ ಮಾಡಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ ಇದೆಯೆಂದು ಪ್ರತಿಪಾದಿಸಿದ್ದರು. ಆದರೆ, ಸಮಾಜದಲ್ಲಿ ಅಸಮಾನತೆ ಮುಂದುವರಿದಿದೆ. ಎಲ್ಲರೂ ಒಂದಾಗಿ ಅಸಮಾನತೆಯನ್ನು ಹೋಗಲಾಡಿಸಬೇಕಿದೆ’ ಎಂದು ತಿಳಿಸಿದರು.
‘ನಾವು ಬಸವಣ್ಣನವರ ತತ್ವ ಹಾಗೂ ಆದರ್ಶಗಳನ್ನು ಮೊದಲು ಅಚ್ಚುಕಟ್ಟಾಗಿ ಪಾಲಿಸಬೇಕಿದೆ. ಅಂದಾಗ ಮಾತ್ರ ನಮ್ಮ ಬದುಕಿಗೆ ಅರ್ಥ ಸಿಗುತ್ತದೆ’ ಎಂದು ಹೇಳಿದರು.
ಸಂಸದ ಜಿ. ಕುಮಾರ ನಾಯಕ ಮಾತನಾಡಿ, ‘ಬಸವಣ್ಣನವರು 12ನೇ ಶತಮಾನದಲ್ಲಿ ವಚನಗಳ ಮೂಲಕ ಅಸ್ಪೃಶ್ಯತೆಯನ್ನು ಹೋಗಲಾಡಿಸಲಿಕ್ಕೆ ಹೋರಾಟ ಮಾಡಿದರು’ ಎಂದು ಹೇಳಿದರು.
‘ಪ್ರಸ್ತುತ ಸಮಾಜದಲ್ಲಿ ಧರ್ಮಗಳ ನಡುವೆ ಅಶಾಂತಿ ಸೃಷ್ಟಿಯಾಗುತ್ತಿದೆ. ದಯವೇ ಧರ್ಮದ ಮೂಲವಯ್ಯ ಎಂಬ ಬಸವಣ್ಣನವರ ತತ್ವ ಪಾಲಿಸಿದರೆ ಸಾಮರಸ್ಯ ಮೂಡುತ್ತದೆ’ ಎಂದು ತಿಳಿಸಿದರು.
‘ಬಸವಣ್ಣನವರ ಸಂದೇಶ ವನ್ನು ನೆನಪು ಮಾಡಿಕೊಳ್ಳಬೇಕು. ಯುವ ಪೀಳಿಗೆಗೆ ತಿಳಿಸುವಂತಹ ಕೆಲಸ ಮಾಡಬೇಕು. ಸಂವಿಧಾನದ ಮುನ್ನಡೆ ನೋಡಿದಾಗ ಬಸವಣ್ಣನವರು ನೆನಪಿಗೆ ಬರುತ್ತಾರೆ ಎಂದು ತಿಳಿಸಿದರು.
ಚೌಕಿಮಠದ ಸಿದ್ಧಲಿಂಗ ಸ್ವಾಮಿ, ಶಾಸಕ ಶಿವರಾಜ ಪಾಟೀಲ, ಮೇಯರ್ ನರಸಮ್ಮ ಮಾಡಗಿರಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ವೀರಶೈವ ಲಿಂಗಾಯತ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಶರಣಭೂಪಾಲ ನಾಡಗೌಡ, ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮಿರ್ಜಾಪೂರು, ಜಾಗೃತಿ ಲಿಂಗಾಯತ ಮಹಾಸಭಾದ ಅಧ್ಯಕ್ಷ ವಕೀಲ ಜೆ. ಬಸವರಾಜ, ಶಿವಶರಣ ರೆಡ್ಡಿ, ಶಿವಶಂಕರ ಕಲ್ಲೂರು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಸಾಹಿತಿ ಮಹಾಂತೇಶ ಎಸ್. ಕುಂಬಾರ ಹೂವಿನಹಳ್ಳಿ ಉಪನ್ಯಾಸ ನೀಡಿದರು. ಪ್ರತಿಭಾ ಗೋನಾಳ ಪ್ರಾರ್ಥನಾ ಗೀತೆ ಹಾಡಿದರು. ವಿರೂಪನಗೌಡ ಸ್ವಾಗತಿಸಿದರು. ವೀರನಗೌಡ ಪಾಟೀಲ ನಿರೂಪಿಸಿದರು.
ಗಣ್ಯರಿಂದ ಮಾಲಾರ್ಪಣೆ: ಬಸವ ಜಯಂತಿ ಅಂಗವಾಗಿ ರಾಯಚೂರು ನಗರದಲ್ಲಿ ಬಸವೇಶ್ವರ ಪ್ರತಿಮೆಗೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಸಂಸದ ಕುಮಾರ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ, ಅಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಗಣ್ಯರು ಮಾಲಾರ್ಪಣೆ ಮಾಡಿದರು.
ನಂತರ ಬಸವೇಶ್ವರ ವೃತ್ತದಿಂದ ನಗರದ ವೀರಶೈವ ಕಲ್ಯಾಣ ಮಂಟಪದ ವರೆಗೂ ಬಸಣ್ಣನವರ ಭಾವಚಿತ್ರದ ಮೆರವಣಿಗೆ ನಡೆಯಿತು. ಲಿಂಗಾಯತ, ವೀರಶೈವ ಸೇರಿದಂತೆ ಎಲ್ಲ ಜನ ಸಮುದಾಯದ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಜೆಡಿಎಸ್: ಬಸವೇಶ್ವರ ಜಯಂತ್ಯುತ್ಸವ ಅಂಗವಾಗಿ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ರಾಯಚೂರಿನಲ್ಲಿ ಬಸವೇಶ್ವರ ಪುತ್ಥಳಿಗೆ ಮಾರ್ಲಾಪಣೆ ಮಾಡಲಾಯಿತು
ಜೆಡಿಎಸ್ ಜಿಲ್ಲಾಘಟಕದ ಅಧ್ಯಕ್ಷ ಎಂ ವಿರೂಪಾಕ್ಷಿ ಜಿಲ್ಲಾ ಕಾರ್ಯಾಧ್ಯಕ್ಷ ಎನ್ ಶಿವಶಂಕರ, ನಗರ ಘಟಕದ ಅಧ್ಯಕ್ಷ ಬಿ ತಿಮ್ಮಾರೆಡ್ಡಿ, ರಾಜ್ಯ ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ , ಜಿಲ್ಲಾ ಪರಿಶಿಷ್ಟ ಅಧ್ಯಕ್ಷ ನರಸಪ್ಪಆಶಾಪೂರ, ರವಿಕುಮಾರ ಮಡಿವಾಳ, ಎಸ್. ರಾಜು ಹರಿಜನವಾಡ, ,ಅಲಂಬಾಬು , ರಾಮು, ಉದಯಕುಮಾರ, ಆದಿರಾಜ, ರವಿಕುಮಾರ ವೆಂಕಟಸ್ವಾಮಿ ಉಪಸ್ಥಿತರಿದ್ದರು.
ಸಿ.ಎಂ.ಎನ್. ಪದವಿ ಪೂರ್ವ ಕಾಲೇಜು: ನಗರದ ತಾರನಾಥ ಶಿಕ್ಷಣ ಸಂಸ್ಥೆ ಸಂಚಾಲಿತ ಚನ್ನಬಸಮ್ಮ ಎಂ.ನಾಗಪ್ಪ ಬಾಲಕಿಯರ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಬಸವೇಶ್ವರ ಜಯಂತಿ ಆಚರಿಸಲಾಯಿತು.
ಸಿ.ಎಂ.ಎನ್. ಕಾಲೇಜಿನ ಪ್ರಾಚಾರ್ಯ ವೆಂಕಟೇಶ ದೊಡ್ಡಮನಿ ಅವರು ಬಸವೇಶ್ವರರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿದರು. ಉಪನ್ಯಾಸಕರಾದ ಸಲ್ಮಾ ಭಾನು, ಶಿವಲೀಲಾ, ರಾಘಮ್ಮ, ಗೋವಿಂದರಾಜ್, ಚಿನ್ನಪ್ಪ, ಭೀಮಣ್ಣ ಭಂಡಾರಿ, ಬೋಧಕೇತರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.