ADVERTISEMENT

ಬೋಸರಾಜು ಕಾಂಗ್ರೆಸ್ ಸಂಘಟನಾ ಶಕ್ತಿ: ಎಚ್‌.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 14:17 IST
Last Updated 21 ಜೂನ್ 2025, 14:17 IST

ರಾಯಚೂರು: ‘ಎನ್‌.ಎಸ್‌.ಬೋಸರಾಜು ಕಾಂಗ್ರೆಸ್‌ ಪಕ್ಷದ ಸಂಘಟನಾ ಶಕ್ತಿಯಾಗಿದ್ದಾರೆ. ಸುಧೀರ್ಘ ರಾಜಕೀಯ ಜೀವನದಲ್ಲಿ ಎಲ್ಲ ಮುಖಂಡರೊಂದಿಗೆ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿದ್ದಾರೆ’ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಬಣ್ಣಿಸಿದರು.

ಇಲ್ಲಿಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಸಣ್ಣ ನೀರಾವರಿ ಸಚಿವ ಎನ್. ಎಸ್.ಬೋಸರಾಜು ಅವರ 79ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ‘ಚೈತನ್ಯ ಸಾಗರ’ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬೋಸರಾಜು ನನ್ನ ತಂದೆ ಕೆ.ಎಚ್‌.ಪಾಟೀಲ ಅವರೊಂದಿಗೆ ಆತ್ಮೀಯರಾಗಿದ್ದರು. 1972ರಿಂದ ಬೋಸರಾಜ ಅವರೊಂದಿಗೆ ಒಡನಾಟ ಇದೆ. ನೀರಾವರಿಗೆ ಸಂಬಂಧಪಟ್ಟ ವಿಷಯಗಳನ್ನು ಅವರಿಂದ ಅರಿತುಕೊಂಡೆ. ಅವರು ಗುರುವಾಗಿ ನನಗೆ ತಿಳಿವಳಿಕೆ ನೀಡಿದ್ದಾರೆ’ ಎಂದರು.

ADVERTISEMENT

‘ತೆಲಂಗಾಣದ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದರು. ಅವರ ತ್ಯಾಗ, ಸಾಧನೆ ಗುರುತಿಸಿ ಪಕ್ಷ ಅವರಿಗೆ ಮಹತ್ವದ ಸ್ಥಾನ ನೀಡಿದೆ. ಚೈತನ್ಯ ಸಾಗರ ಗ್ರಂಥದಲ್ಲಿ ಯುವಜನರಿಗೆ ನಾಯಕತ್ವದ ಸ್ಪೂರ್ತಿ ತುಂಬವ ಅಂಶಗಳು ಇವೆ’ ಎಂದು ತಿಳಿಸಿದರು.

‘ಕಾಂಗ್ರೆಸ್‌ ಸರ್ಕಾರ ರಚನೆಗೆ ಪ್ರೇರಣೆ’

‘ಕಾಂಗ್ರೆಸ್‌ಗೆ ನಿಷ್ಠರಾಗಿರುವ ಎನ್‌.ಎಸ್‌.ಬೋಸರಾಜು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೆ ಪ್ರೇರಣೆಯಾಗಿದ್ದಾರೆ’ ಎಂದು ತೆಲಂಗಾಣದ ಉಪ ಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಹೇಳಿದರು.

‘50 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದು, ಪಕ್ಷದ ಸಲಹೆಗಾರರಾಗಿ, ಸಂಘಟನಾ ಶಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವಲ್ಲಿ ಅವರ ಪಾತ್ರವೂ ಇದೆ. ತೆಲಂಗಾಣ ಹಾಗೂ ಕರ್ನಾಟಕ ಒಗ್ಗೂಡಿ ಸಾಗಲಿವೆ. ಬೋಸರಾಜು ಜನ್ಮದಿನದ ಅಂಗವಾಗಿ ಗ್ರಂಥ ಹೊರ ತಂದಿರುವುದು ಜನರ ಅಭಿಮಾನಕ್ಕೆ ಸಾಕ್ಷಿಯಾಗಿದೆ’ ಎಂದು ಬಣ್ಣಿಸಿದರು.

‘ಬೋಸರಾಜು ರಾಷ್ಟ್ರದ ಆಸ್ತಿ’

‘ಜಟಿಲ ಹಾಗೂ ವಿಷಮ ಪರಿಸ್ಥಿತಿಯಲ್ಲೂ ತಾಳ್ಮೆ ವಹಿಸುವ ಅವರ ಗುಣವೇ ಅವರನ್ನು ಎತ್ತರಕ್ಕೆ ಬೆಳೆಯುವಂತೆ ಮಾಡಿದೆ’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

‘ಬೋಸರಾಜು ಅವರು ಎಲ್ಲರ ವಿಶ್ವಾಸ ಗಳಿಸಿದ್ದಾರೆ. ನನಗೂ ರಾಜಕೀಯ ಮಾರ್ಗದರ್ಶನ ಮಾಡಿದ್ದಾರೆ. ಅವರ ವ್ಯಕ್ತಿತ್ವವೇ ದಾರಿ ದೀಪವಾಗಿದೆ. ಅವರು ಪಕ್ಷಕ್ಕೆ ಅಷ್ಟೇ ಅಲ್ಲ; ರಾಜ್ಯ ಹಾಗೂ ರಾಷ್ಟ್ರದ ಆಸ್ತಿಯಾಗಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.