ADVERTISEMENT

ರಾಯಚೂರು | ಸಮಾನತೆಯಿಂದ ಬದುಕಿದರೆ ಭಾರತ ಪ್ರಬಲ: ಶಾಸಕ

ಡಾ.ಬಿ.ಆರ್.ಅಂಬೇಡ್ಕರ್ 131ನೇ ಜನ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 14:01 IST
Last Updated 14 ಏಪ್ರಿಲ್ 2022, 14:01 IST
ರಾಯಚೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಅವರು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪುತ್ಥಳಿಗೆ ಗುರುವಾರ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಶಾಸಕರಾದ ಬಸನಗೌಡ ದದ್ದಲ್‌, ಡಾ.ಶಿವರಾಜ ಪಾಟೀಲ, ರಮಾನಂದ ಯಾದವ್‌ ಮತ್ತಿತರರು ಇದ್ದರು.
ರಾಯಚೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಅವರು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪುತ್ಥಳಿಗೆ ಗುರುವಾರ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಶಾಸಕರಾದ ಬಸನಗೌಡ ದದ್ದಲ್‌, ಡಾ.ಶಿವರಾಜ ಪಾಟೀಲ, ರಮಾನಂದ ಯಾದವ್‌ ಮತ್ತಿತರರು ಇದ್ದರು.   

ರಾಯಚೂರು: ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಮಾರ್ಗದರ್ಶನದಂತೆ ಎಲ್ಲರೂ ಸಮಾನತೆಯಿಂದ ನಡೆದುಕೊಂಡಾಗ ಮಾತ್ರ ಭಾರತ ಪ್ರಬಲ ರಾಷ್ಟ್ರವಾಗುತ್ತದೆ ಎಂದು ಶಾಸಕ ಡಾ.ಶಿವರಾಜ ಪಾಟೀಲ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಡೀ ಜಗತ್ತಿನಲ್ಲಿ ಪ್ರಬಲ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ. ಇದಕ್ಕೆ ಡಾ. ಬಾಬಾಸಾಹೇಬ್ ಅವರ ಪ್ರೇರಣಾ ಶಕ್ತಿಯೇ ಕಾರಣ. ಅವರ ಜಯಂತಿಯು ಕೇವಲ ಒಂದು ಸಮಾಜಕ್ಕೆ ಸೀಮಿತವಲ್ಲ. ಇಡೀ ವಿಶ್ವ ಆಚರಿಸುವಂತದ್ದಾಗಿದೆ. ಭಾರತದ ಸಮಸ್ತ ಎಲ್ಲ ಸಮಾಜಗಳಿಗೆ ಅವರು ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದರು.

ADVERTISEMENT

ಜಗತ್ತಿನಲ್ಲಿ ಯಾರೂ ಬರೆಯಲು ಸಾಧ್ಯವಾದಂತಹ ಸಂವಿಧಾನವನ್ನು ಬರೆದಿದ್ದಾರೆ. ಅಂತಹ ಸಂವಿಧಾನದಡಿಯಲ್ಲಿ ಇವತ್ತು ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಗಳು ಕಾರ್ಯನಿರ್ವಹಿಸುತ್ತಿವೆ. ಇಂದು ಭಾರತದಲ್ಲಿ ಎಲ್ಲರೂ ಸೋದರ, ಸಾಮರಸ್ಯದಿಂದ ಬದುಕಲು ಡಾ.ಬಿ.ಆರ್ ಅಂಬೇಡ್ಕರ್ ಅವರೇ ಕಾರಣರಾಗಿದ್ದಾರೆ ಎಂದರು.

ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿಶ್ವನಾಥ ಮಾತನಾಡಿ, ಬಾಲ್ಯದಲ್ಲಿ ಅಂಬೇಡ್ಕರ್ ಅವರು ಬಹಳ ಕಷ್ಟದ ದಿನಗಳನ್ನು ಕಂಡಿದ್ದರು. ಆದರೆ, ತಮ್ಮ ಛಲ ಸಾಧನೆಯ ಮೂಲಕ ಭವ್ಯ ಭಾರತದ ಕನಸು ಕಾಣುತ್ತಾ ಕಷ್ಟದ ನಡುವೆಯೂ ಬೆಳೆದ ಅಂಬೇಡ್ಕರ್ ಅವರು ದೇಶದ ಅದ್ಭುತ ನಾಯಕರಲ್ಲಿ ಒಬ್ಬರಾಗಿ ರೂಪುಗೊಂಡರು ಎಂದರು.

ಬಾಂಡ್ ವಿತರಣೆ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 2021-22ನೇ ಸಾಲಿನ ದೇವದಾಸಿ ಮಕ್ಕಳ ವಿವಾಹ ಪ್ರೋತ್ಸಾಹ ಧನ ಯೋಜನೆಯಡಿ ಬಾಂಡ್‌ಗಳನ್ನು ಹಾಗೂ ವಿವಿಧ ಯೋಜನೆಯಡಿಯಲ್ಲಿ ನೇರ ಸಾಲ ಕಾರ್ಯಕ್ರಮದಡಿ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.

ಹಂಪಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್, ಎಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕಗಳನ್ನು ಪಡೆದ ಬುಶ್ರಾ ಮತೀನ್ ಮತ್ತು ದೇವದುರ್ಗ ತಾಲ್ಲೂಕಿನ ಆಕಳಕುಂಪಿ ಗ್ರಾಮದ ಸಿ.ವಿ.ಎಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಮುದಕಪ್ಪ ಹನುಮಂತ್ರಾಯ ಅವರನ್ನು ಸನ್ಮಾನಿಸಲಾಯಿತು.

ರಾಯಚೂರು ನಗರಸಭೆಯ ಅಧ್ಯಕ್ಷೆ ಲಲಿತಾ ಆಂಜನೇಯ್ಯ ಕಡಗೋಲ, ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೂರ್ ಜಹಾರ್ ಖಾನಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ನಗರಸಭೆಯ ಪೌರಾಯುಕ್ತ ಕೆ.ಮುನಿಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸತೀಶ್ ಕೆ.ಎಚ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.