ADVERTISEMENT

‘ಸಕಾಲಕ್ಕೆ ಕಾಲುವೆಗೆ ನೀರು; ಬೆಳೆ ರಕ್ಷಣೆ‘

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 12:26 IST
Last Updated 16 ಏಪ್ರಿಲ್ 2021, 12:26 IST

ಮಾನ್ವಿ: ‘ಸಕಾಲದಲ್ಲಿ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸುವ ಮೂಲಕ ಸರ್ಕಾರ ಕೊನೆಭಾಗದ ರೈತರ ಹಿತ ಕಾಪಾಡಿದೆ’ ಎಂದು ಬಿಜೆಪಿ ಮುಖಂಡ ಬಲ್ಲಟಗಿ ಹನುಮಂತ್ರಾಯ ನಾಯಕ ವಕೀಲ ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ತುಂಗಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ಮಾರ್ಚ್31ರವರೆಗೆ ಎಡದಂಡೆ ನಾಲೆಗೆ ನೀರು ಹರಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಇದರಿಂದ ಎಡದಂಡೆ ನಾಲೆಯ ಕೊನೆಭಾಗದ ವ್ಯಾಪ್ತಿಯಲ್ಲಿ ತಡವಾಗಿ ನಾಟಿ ಮಾಡಿದ್ದ ಭತ್ತ ಮತ್ತಿತರ ಬೆಳೆಗಳಿಗೆ ನೀರಿನ ಕೊರತೆ ಉಂಟಾಗಿತ್ತು. ರೈತರಿಗೆ ಬೆಳೆ ನಷ್ಟದ ಭೀತಿ ಎದುರಾಗಿತ್ತು. ಕುಡಿಯುವ ನೀರಿನ ಕೆರೆಗಳು ಭರ್ತಿಯಾಗದೆ ಜನರಲ್ಲಿ ಆತಂಕದ ಪರಿಸ್ಥಿತಿ ಉಂಟಾಗಿತ್ತು’ ಎಂದರು.

‘ಮಾಜಿ ಶಾಸಕರಾದ ಗಂಗಾಧರನಾಯಕ, ಬಸನಗೌಡ ಬ್ಯಾಗವಾಟ, ಹರವಿ ಶಂಕರಗೌಡ, ಜೆ.ಶರಣಪ್ಪಗೌಡ ಸಿರವಾರ ನೇತೃತ್ವದ ಬಿಜೆಪಿ ಮುಖಂಡರ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ನೀರಿನ ಸಮಸ್ಯೆ ಕುರಿತು ಮನವರಿಕೆ ಮಾಡಿದ್ದರು. ಕಾರಣ ಮುಖ್ಯಮಂತ್ರಿ ಏಪ್ರಿಲ್ 10ರವರೆಗೆ ಕಾಲುವೆಗೆ ನೀರು ಹರಿಸಿ ಭತ್ತ ಮತ್ತಿತರ ಬೆಳೆಗಳ ಸಂರಕ್ಷಣೆಗೆ ಕ್ರಮ ಕೈಗೊಂಡಿದ್ದಾರೆ’ ಎಂದು ಅವರು ತಿಳಿಸಿದರು.

ADVERTISEMENT

ಎಡದಂಡೆ ನಾಲೆ ನೀರಿನ ಮೂಲಕ ಭರತ್ತದ ಎರಡನೇ ಬೆಳೆಗೆ ನೀರು ಹಾಗೂ ಕುಡಿಯುವ ನೀರಿನ ಕೆರೆಗಳ ಭರ್ತಿಗೆ ಕ್ರಮ ಕೈಗೊಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವರಿಗೆ ತಾಲ್ಲೂಕಿನ ರೈತರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಅವರು ಹೇಳಿದರು.

ಮುಖಂಡರಾದ ಶ್ರೀಕಾಂತ ಪಾಟೀಲ್ ಗೂಳಿ, ಗಿರಿನಾಯಕ, ಕುಮಾರಸ್ವಾಮಿ ಮೇದಾ, ನಾಗರಾಜ ಕಬ್ಬೇರ್ ಮತ್ತು ಶ್ರವಣಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.