ಲಿಂಗಸುಗೂರು: ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಮಾಡಲಾಗಿದ್ದ, ‘ನೂರೊಂದು ಬಾಗಿಲಿನ ಬಂಗಲೆ’ ಎಂದೇ ಖ್ಯಾತಿಯಾಗಿದ್ದ ಪಟ್ಟಣದ ಈಗಿನ ಉಪವಿಭಾಗಾಧಿಕಾರಿ ಕಚೇರಿ ಕಟ್ಟಡ ನಿರ್ವಹಣೆ ಕೊರತೆಯಿಂದಾಗಿ ಕುಸಿದು ಬಿದ್ದಿದೆ.
101 ಬಾಗಿಲುಗಳ ಬಂಗಲೆ ಬೃಹತ್ ಕಟ್ಟಡಗಳ ಸಮುಚ್ಚಯವಾಗಿದೆ. ಅಂದು ಬ್ರಿಟಿಷರು ಕಚೇರಿಯನ್ನಾಗಿ ಬಳಕೆ ಮಾಡುತ್ತಿದ್ದರು. ತಹಶೀಲ್ದಾರ್, ಪಿಡಬ್ಲ್ಯೂಡಿ, ಕೃಷಿ ಇಲಾಖೆ ಉಪನಿರ್ದೇಶಕರ ಕಚೇರಿ, ಭೂದಾಖಲೆಗಳ ಕಚೇರಿಗಳನ್ನು ನಡೆಸಲಾಗಿತ್ತು. ಇಂದು ಉಪವಿಭಾಗಾಧಿಕಾರಿ ಕಚೇರಿ, ಭೂದಾಖಲೆಗಳ ಕೊಠಡಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಚೇರಿ, ವಿಡಿಯೋ ಸಂವಾದಕ್ಕೆ ಬಳಕೆ ಮಾಡಲಾಗುತ್ತಿದೆ. ಕಟ್ಟಡದ ಎಡ ಮತ್ತು ಬಲ ಭಾಗದ ಕೊಠಡಿಗಳು ಹಾಳಾಗುತ್ತಿವೆ.
ಮಳೆಗೆ ಕುಸಿದ ಮೇಲ್ಛಾವಣಿ: ನಿರ್ವಹಣೆ ಕೊರತೆಯಿಂದಾಗಿ ಕಟ್ಟಡದ ಬಲ ಭಾಗದ ಕೊಠಡಿ ಮತ್ತು ವರಾಂಡದ ಮೇಲ್ಛಾವಣಿ ಕುಸಿದಿದೆ.
ಕಟ್ಟಡದ ಮಾಳಿಗೆಯಲ್ಲಿ ಗಿಡದ ಎಲೆಗಳು ಬಿದ್ದು ಅವು ಮಳೆ ಬಂದಾಗ ಕೊಳೆಯುತ್ತವೆ. ತೆಗೆಯದೇ ಹಾಗೇ ಬಿಟ್ಟಿದ್ದರಿಂದ ನೀರು ನಿಂತು ತೇವಾಂಶ ಹೆಚ್ಚಾಗಿ ಕಟ್ಟಡ ಅವನತಿಗೆ ತಲುಪಿದೆ.
ಐತಿಹಾಸಿಕ ಹಿನ್ನಲೆ ಹೊಂದಿರುವ ಕಟ್ಟಡವನ್ನು ಸಂರಕ್ಷಣೆ ಮಾಡಬೇಕಾಗಿರುವುದು ಇಲ್ಲಿನ ಅಧಿಕಾರಿಗಳ ಕರ್ತವ್ಯವಾಗಿದೆ. ಆದರೆ ಅವರ ನಿರ್ಲಕ್ಷ್ಯತನದಿಂದ ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಮಾಡಲಾಗಿದ್ದ ಪ್ರವಾಸಿ ಮಂದಿರ, ಬಿಇಒ ಕಚೇರಿ, ಹಳೆ ಜೈಲಿನ ಕಟ್ಟಡಗಳು ಹಾಳಾಗಿವೆ ಎಂದು ಹೋರಾಟಗಾರ ಜಾಫರ್ ಹುಸೇನ್ ಪೂಲವಾಲೆ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.