ADVERTISEMENT

ಕ್ರಮಕ್ಕೆ ಒತ್ತಾಯಿಸಿ ಠಾಣೆ ಎದುರು ಪ್ರತಿಭಟನೆ

ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 3 ಮೇ 2021, 16:19 IST
Last Updated 3 ಮೇ 2021, 16:19 IST
ಮಸ್ಕಿ ಪಟ್ಟಣದ ಪೊಲೀಸ್‌ ಠಾಣೆ ಎದುರು ಕಾಂಗ್ರೆಸ್‌ ಕಾರ್ಯಕರ್ತರು ಸೋಮವಾರ ಬಿಜೆಪಿ ಕಾರ್ಯಕರ್ತರ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿ, ದೂರು ದಾಖಲಿಸಿಕೊಳ್ಳುವಂತೆ ಒತ್ತಾಯಿಸಿದರು
ಮಸ್ಕಿ ಪಟ್ಟಣದ ಪೊಲೀಸ್‌ ಠಾಣೆ ಎದುರು ಕಾಂಗ್ರೆಸ್‌ ಕಾರ್ಯಕರ್ತರು ಸೋಮವಾರ ಬಿಜೆಪಿ ಕಾರ್ಯಕರ್ತರ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿ, ದೂರು ದಾಖಲಿಸಿಕೊಳ್ಳುವಂತೆ ಒತ್ತಾಯಿಸಿದರು   

ಮಸ್ಕಿ: ಪಟ್ಟಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಪ್ರತಾಪಗೌಡ ಪಾಟೀಲ ಅವರು ಕಡೆಯವರು ಹಲ್ಲೆ ನಡೆಸಿದ್ದು, ಅವರ ವಿರುದ್ಧ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಠಾಣೆ ಎದುರು ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ದೈವದ ಕಟ್ಟೆ ಮುಂದೆ ನಿಂತಿದ್ದ ಕಾಂಗ್ರೆಸ್ ಕಾರ್ಯಕರ್ತರಾದ ಸುರೇಶ ಬ್ಯಾಳಿ, ಶರಣಪ್ಪ ಎಲಿಗಾರ, ಕೃಷ್ಣ ಚಿಗರಿ ಅವರ ಮೇಲೆ ಮಾಜಿ ಶಾಸಕರ ಪುತ್ರರು ಹಾಗೂ ಅಳಿಯಂದಿರು ಹಲ್ಲೆ ನಡೆಸಿದ್ದು ಅಲ್ಲದೇ ಕಾಂಗ್ರೆಸ್ ಕಾರ್ಯಕರ್ತರ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು‌.

ಕೆಲಕಾಲ ಪೊಲೀಸ್ ಠಾಣೆಯಲ್ಲಿ ಮಾತಿನ ಚಕಮಕಿ ನಡೆಯಿತು.

ADVERTISEMENT

ಸುದ್ದಿ ತಿಳಿದು ಠಾಣೆಗೆ ಆಗಮಿಸಿದ ಶಾಸಕ ಆರ್. ಬಸನಗೌಡ, ಯೂತ್ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ, ಕೆ. ಕರಿಯಪ್ಪ ಸಿಂಧನೂರು, ನಗರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಗ್ರಾಮೀಣ ಬ್ಲಾಕ್ ಅದ್ಯಕ್ಷ ಹನುಮಂತಪ್ಪ ಮುದ್ದಾಪೂರ ನೇತೃತ್ವದಲ್ಲಿ ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಲಿಂಗಸೂಗೂರು ಡಿಎಸ್ ಪಿ ಎಸ್. ಎಸ್. ಹುಲ್ಲೂರ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು. ದೂರು ಕೊಟ್ಟರೆ ಪ್ರಕರಣ ದಾಖಲು ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಪ್ರತ್ಯೇಕ ದೂರುಗಳು: ರವಿಗೌಡ, ಪ್ರಸನ್ನ ಪಾಟೀಲ್, ಚೇತನ ಪಾಟೀಲ್, ಶಾಮೀದ್, ಶ್ರೀಧರ ಪಾಟೀಲ್, ವಿಶ್ವ, ರಾಮರೆಡ್ಡಿಗೌಡ, ಶರಣೇಗೌಡ, ರಾಕೇಶ, ಮೌನೇಶ, ಮಂಜುನಾಥ, ಶರಣಪ್ಪ ತೋಳದಿನ್ನಿ, ಅಮರಯ್ಯ, ಕುಮಾರಸ್ವಾಮಿ, ವೀರೇಶ ಬಳಿಗಾರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಾನಭಂಗಕ್ಕೆ ಯತ್ನ ಹಾಗೂ ಕೊಲೆ ಬೆದರಿಕೆ ಪ್ರಕರಣವನ್ನು ರಾಜೇಶ್ವರಿ ಅವರು ದಾಖಲಿಸಿದ್ದಾರೆ. ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ 11 ಜನರ ವಿರುದ್ಧ ಕೃಷ್ಣಾ ಅವರು ದಾಖಲಿಸಿದ್ದಾರೆ.

ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಮೂರು ಮೀಸಲು ಪಡೆ ತುಕಡಿಗಳು, ಸುತ್ತಮುತ್ತ ಠಾಣೆಗಳಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.