ADVERTISEMENT

ರಾಷ್ಟ್ರೀಯ ಮೆಡಿಕಲ್ ಆಯೋಗ ಮಸೂದೆ ಜಾರಿಗೆ ವಿರೋಧ

ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ವೈದ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 13:29 IST
Last Updated 4 ಜನವರಿ 2019, 13:29 IST
ರಾಯಚೂರಿನಲ್ಲಿ ರಾಷ್ಟ್ರೀಯ ಮೆಡಿಕಲ್ ಆಯೋಗದ ಮಸೂದೆ ಹಾಗೂ ಗ್ರಾಹಕರ ರಕ್ಷಣೆ ಮಸೂದೆ ಜಾರಿ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ವೈದ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು
ರಾಯಚೂರಿನಲ್ಲಿ ರಾಷ್ಟ್ರೀಯ ಮೆಡಿಕಲ್ ಆಯೋಗದ ಮಸೂದೆ ಹಾಗೂ ಗ್ರಾಹಕರ ರಕ್ಷಣೆ ಮಸೂದೆ ಜಾರಿ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ವೈದ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು   

ರಾಯಚೂರು: ರಾಷ್ಟ್ರೀಯ ಮೆಡಿಕಲ್ ಆಯೋಗದ ಮಸೂದೆ 2017-18 ಹಾಗೂ ಗ್ರಾಹಕರ ರಕ್ಷಣೆ ಮಸೂದೆ- 2018 ಜಾರಿಗೊಳಿಸುವುದನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಭಾರತೀಯ ವೈದ್ಯಕೀಯ ಸಂಘದ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಸಲ್ಲಿಸಿದ ಮನವಿ ಸಲ್ಲಿಸಿದರು.

ಪ್ರಜಾಪ್ರಭುತ್ವದ ವ್ಯವಸ್ಥೆಗೆ ಹಾಗೂ ಬಡಜನರ ವಿರುದ್ಧವಾಗಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಸೂದೆಯಲ್ಲಿ ಅಧಿಕಾರವನ್ನು ಸಂಪೂರ್ಣವಾಗಿ ಕೇಂದ್ರೀಕರಿಸುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.

ADVERTISEMENT

ಸ್ವಾಯತ್ತತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ವೈದ್ಯಕೀಯ ಪರಿಷತ್ತನ್ನು ವಿಸರ್ಜಿಸಿದ ಕೇಂದ್ರ ಸರ್ಕಾರ ಮಸೂದೆಯ ಮೂಲಕ ಆಡಳಿತವನ್ನು ಅಧೀನಕ್ಕೆ ತೆಗೆದುಕೊಳ್ಳುವ ದುರುದ್ದೇಶ ಹೊಂದಿದೆ. ಈ ಕಾರ್ಯಕ್ಕೆ ಸಂಘ ಆಕ್ಷೇಪ ವ್ಯಕ್ತಪಡಿಸುತ್ತದೆ ಎಂದರು.

ಗ್ರಾಹಕರ ಸಂರಕ್ಷಣೆ ಮಸೂದೆ 2018ನ್ನು ಕೇಂದ್ರ ಸರ್ಕಾರ ಅಂಗೀಕಾರ ಮಾಡಿರುವುದರಿಂದ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ನಿರ್ಧರಿಸುವ ಗರಿಷ್ಠ ಮೊತ್ತವನ್ನು ₹10 ಲಕ್ಷದಿಂದ ₹1ಕೋಟಿಗೆ ಏರಿಸಲಾಗಿದೆ. ಆದರೆ, ಸಮಿತಿಯಲ್ಲಿ ನ್ಯಾಯಾಂಗದ ಪರಿಣಿತಿ ಹೊಂದಿದವರು ಇರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗರಿಷ್ಠ ಪರಿಹಾರದ ನಿಯಂತ್ರಣ ಕಾಯ್ದೆಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದ್ದರೂ, ಈ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ಮಸೂದೆ ವೈದ್ಯಕೀಯ ವೃತ್ತಿ ಹಾಗೂ ಶಿಕ್ಷಣಕ್ಕೆ ಮಾರಕವಾಗಿದೆ. ಶೀಘ್ರದಲ್ಲಿ ಮಸೂದೆ ವಾಪಸ್ ಪಡೆಯಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಡಾ.ಮಹಾಲಿಂಗಪ್ಪ, ಕಾರ್ಯದರ್ಶಿ ಡಾ.ಅನಿರುದ್ಧ ಕುಲಕರ್ಣಿ, ಡಾ.ರವಿ ಮುಜುಂದಾರ, ಡಾ.ವಿ.ಎ.ಮಾಲಿಪಾಟೀಲ, ಡಾ.ಬಿ.ಮಹಾಲಿಂಗಪ್ಪ, ಡಾ.ರವಿರಾಜೇಶ್ವರ, ಡಾ.ವಿಶ್ವನಾಥರೆಡ್ಡಿ, ಡಾ.ಸಿ.ಎನ್.ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.