ADVERTISEMENT

ದೇವದುರ್ಗ | ರಸ್ತೆಯಲ್ಲೇ ಚರಂಡಿ ನೀರು; ರೋಗ ಭೀತಿ

ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿ ವ್ಯವಸ್ಥೆ; ನೀರು ನಿಂತು ಹಸಿರು ಕೆರೆಯಂತಾದ ರಸ್ತೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 6:33 IST
Last Updated 4 ಜುಲೈ 2025, 6:33 IST
ದೇವದುರ್ಗ ತಾಲ್ಲೂಕಿನ ಕೊಪ್ಪರ ಪ್ರಾಥಮಿಕ ಆರೋಗ್ಯ ಕೇಂದ್ರ ಹತ್ತಿರ ರಸ್ತೆ ಮೇಲೆ ಚರಂಡಿ ನೀರು ನಿಂತಿರುವುದು.
ದೇವದುರ್ಗ ತಾಲ್ಲೂಕಿನ ಕೊಪ್ಪರ ಪ್ರಾಥಮಿಕ ಆರೋಗ್ಯ ಕೇಂದ್ರ ಹತ್ತಿರ ರಸ್ತೆ ಮೇಲೆ ಚರಂಡಿ ನೀರು ನಿಂತಿರುವುದು.   

ದೇವದುರ್ಗ: ತಾಲ್ಲೂಕಿನ ಕೊಪ್ಪರ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಪರಿಶಿಷ್ಟರ ಕಾಲೊನಿ ಸೇರಿದಂತೆ ಗ್ರಾಮದಲ್ಲಿ ಸಿ.ಸಿ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆಗಳೇ ಚರಂಡಿಯಂತಾಗಿವೆ. ಇದರಿಂದ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಗ್ರಾಮದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮನೆಗಳಿವೆ. ಆದರೆ ಸೂಕ್ತ ಚರಂಡಿ ಇಲ್ಲದಿರುವುದರಿಂದ ಹೊಲಸು ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಇದರಿಂದ ಎಲ್ಲೆಡೆ ದುರ್ವಾಸನೆ ಬೀರುತ್ತಿದೆ.

ಸದ್ಯ ಮಳೆಗಾಲ ಇರುವುದರಿಂದ ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿ ತುಂಬಿ ಹರಿಯುತ್ತಿದೆ. ಇದರಿಂದ ಪಾದಚಾರಿಗಳು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಪಂಚಾಯಿತಿ ಅಧ್ಯಕ್ಷೆ, ಸದಸ್ಯರು, ಅಭಿವೃದ್ಧಿ ಅಧಿಕಾರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮ ಪಂಚಾಯಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ADVERTISEMENT

ಗ್ರಾಮದ ಪರಿಶಿಷ್ಟ ಜಾತಿ ಓಣಿ ಸೇರಿ ಗ್ರಾಮದ ಬಹುತೇಕ ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡಿದೆ. ರಸ್ತೆ ಸರಿಯಾಗಿಲ್ಲ, ಬೀದಿ ದೀಪಗಳ ವ್ಯವಸ್ಥೆ ಸಮರ್ಪಕವಾಗಿಲ್ಲ. ಗ್ರಾಮಸ್ಥರು ಸಮಸ್ಯೆಯಲ್ಲೇ ದಿನದೂಡುತ್ತಿದ್ದಾರೆ.

ಚರಂಡಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸದ ಪರಿಣಾಮ ಮಳೆ ನೀರು, ಮನೆ ಬಳಕೆ ನೀರು ರಸ್ತೆ ಮೇಲೆ ಹರಿದು ಕೆಸರು ಗದ್ದೆಯಂತಾಗಿವೆ. ನಮಗೆ ಅಡ್ಡಾಡಲು ಸಾಧ್ಯವಾಗುತ್ತಿಲ್ಲ ಎಂದು ಪರಿಶಿಷ್ಟ ಜಾತಿ ಓಣಿ ನಿವಾಸಿಗಳ ಅಳಲು.

ಕೊಪ್ಪರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದರೂ, ಹಲವು ಕಡೆ ಚರಂಡಿಗಳಲ್ಲಿ ಹೂಳು ತುಂಬಿದ್ದರಿಂದ ಕೊಳಚೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುವ ಲಕ್ಷಣಗಳು ಹೆಚ್ಚಾಗಿವೆ. ದುರ್ವಾಸನೆಯೂ ಹೆಚ್ಚಾಗಿದೆ.

ಲೋಕೋಪಯೋಗಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಪಕ್ಕದ ಚರಂಡಿ ಕಾಮಗಾರಿ ಸ್ಥಗಿತವಾಗಿದೆ. ಹಾಗಾಗಿ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುತ್ತಿದೆ. ತಾತ್ಕಾಲಿಕವಾಗಿ ಮರಂ ಹಾಕಿ ನೀರು ನಿಲ್ಲದಂತೆ ಕ್ರಮ ವಹಿಸುವೆ

-ವೆಂಕಟೇಶ ಪೂಜಾರಿ ಪಿಡಿಒ

ಗ್ರಾಮದ ಚರಂಡಿ ತುಂಬಿ ಹರಿಯುತ್ತಿವೆ. 1 ವರ್ಷದ ಹಿಂದೆ ಗ್ರಾಮ ಪಂಚಾಯಿತಿಗೆ ಪತ್ರ ಬರೆದು ಸಮಸ್ಯೆ ಬಗೆಹರಿಸುತ್ತಿಲ್ಲ ಅಧ್ಯಕ್ಷೆ ಮತ್ತು ಪಿಡಿಒ ಸಂಪೂರ್ಣ ನಿರ್ಲಕ್ಷ್ಯ ವಹಿಸಿ ಪ್ರಾಥಮಿಕ ಜವಾಬ್ದಾರಿ ಮರೆತಿದ್ದಾರೆ

-ದೊಡ್ಡ ನಿಂಗಪ್ಪ ಕೊಪ್ಪರ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.