ADVERTISEMENT

ಪೋಕ್ಸೊ ಕಾಯ್ದೆಯಂತೆ ಮುರುಘಾಶ್ರೀ ತನಿಖೆ ನಡೆಯಲಿ: ಚಾಮರಸ ಮಾಲಿಪಾಟೀಲ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 12:32 IST
Last Updated 1 ಸೆಪ್ಟೆಂಬರ್ 2022, 12:32 IST
 ಚಾಮರಸ ಮಾಲಿಪಾಟೀಲ
 ಚಾಮರಸ ಮಾಲಿಪಾಟೀಲ   

ರಾಯಚೂರು: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಪ್ರಕರಣವನ್ನು ಪೋಕ್ಸೊ ಕಾಯ್ದೆ ಪ್ರಕಾರ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಬೇಕು. ಸರ್ಕಾರ ತಾರತಮ್ಯ ಮಾಡದೇ ಎಲ್ಲರಿಗೂ ಅನ್ವಯಿಸುವಂತೆ ಕಾನೂನು ರಕ್ಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುರುಘಾ ಮಠದ ಶರಣರು ಸಮಾಜದ ಅಂಕುಡೊಂಕು ತಿದ್ದುವ ಪ್ರಗತಿಪರ ಚಿಂತನೆ ಮೈಗೂಡಿಸಿಕೊಂಡು ನಡೆದಿದ್ದಾರೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆಪಾದನೆ ಕೇಳಿ ಬಂದಿದೆ. ಜನಸಾಮಾನ್ಯರಿಗೂ ಹಾಗೂ ಮಠಾಧೀಶರು ಸೇರಿ ಎಲ್ಲರಿಗೂ ಕಾನೂನು ಒಂದೇ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಯಾವುದೇ ಒತ್ತಡ ಹೇರದೇ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಸಾರ್ವಜನಿಕರಿಗೆ ಸಂಶಯಬಾರದೇ ಕಾಯ್ದೆಯ ಆಶಯ ಈಡೇರಿಸಬೇಕು ಎಂದರು.

ಕೇಂದ್ರ ಸರ್ಕಾರ ಈ ಭಾಗದ ಸಿರಿಧಾನ್ಯ ಬೆಳೆಗಳಿಗೆ ಉತ್ತೇಜನ ನೀಡಲು ಯೋಜನೆ ರೂಪಿಸಿದ್ದು ಶ್ಲಾಘನೀಯ. ಈಚೆಗೆ ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಸಿರಿಧಾನ್ಯ ಮೇಳದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್ ಅವರು ₹25 ಕೋಟಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಕಾರ್ಯಮಕ್ಕೆ ರೈತರು ಹಾಗೂ ರೈತ ಮುಖಂಡರನ್ನು ಹೊರಗಿಟ್ಟಿದ್ದು ಸರಿಯಲ್ಲ. ಯೋಜನೆಗಳ ಯಶಸ್ವಿಗೆ ರೈತರ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ಸಿರಿಧಾನ್ಯ ಬೆಳೆಯುವುದರಿಂದ ಪರಿಸರ ನಾಶ ತಪ್ಪುತ್ತದೆ. ಸಿರಿಧಾನ್ಯಗಳನ್ನು ಆಹಾರಕ್ಕೆ ಉಪಯೋಗಿಸುವುದರಿಂದ ಮನುಷ್ಯನ ಆರೋಗ್ಯವು ಸುಧಾರಿಸುತ್ತದೆ. ಯೋಜನೆಯ ಯಶಸ್ವಿಗೆ ರೈತರನ್ನು ಒಳಗೊಂಡಂತೆ ನೀತಿ ರೂಪಿಸಬೇಕು ಎಂದು ಹೇಳಿದರು.

ADVERTISEMENT

ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ನಡೆಯುತ್ತಿರುವ ಹೋರಾಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಿಯಾಗಿ ಸ್ಪಂದಿಸಿಲ್ಲ. ಖಾಸಗಿ ಆಸ್ಪತ್ರೆ ಉದ್ಘಾಟಿಸಲು ಸಮಯ ಮೀಸಲಿಡುತ್ತಾರೆ. ಆದರೆ ಜಿಲ್ಲೆಯ ಸಮಸ್ಯೆಯ ಬಗ್ಗೆ ಚರ್ಚಿಸಲು ನಿರ್ಲಕ್ಷ್ಯ ವಹಿಸಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ದಿಕ್ಕುತಪ್ಪಿಸಿದ್ದಾರೆ ಎಂದು ಆರೋಪಿಸಿದರು.

ಮುಖಂಡರಾದ ಮಲ್ಲಣ್ಣ ದಿನ್ನಿ, ಅಬ್ದುಲ್ ಮಜೀದ್, ದೇವರಾಜ ನಾಯಕ, ಶಂಕ್ರಪ್ಪ ದೇವತಗಲ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.