ADVERTISEMENT

ಎಸ್ಸೆಸ್ಸೆಲ್ಸಿ : ರೈತನ ಮಗ ನಾಗರಾಜ ಸಾಧನೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 15:36 IST
Last Updated 30 ಏಪ್ರಿಲ್ 2019, 15:36 IST
ತಾಯಿ ಮತ್ತು ಅಜ್ಜಿಯೊಂದಿಗೆ ನಾಗರಾಜ
ತಾಯಿ ಮತ್ತು ಅಜ್ಜಿಯೊಂದಿಗೆ ನಾಗರಾಜ   

ರಾಯಚೂರು: ‘ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ಪೂರ್ವ ನಾಲ್ಕು ತಿಂಗಳು ಸತತ ಓದಿದ್ದರಿಂದ ಇಷ್ಟು ಅಂಕಗಳನ್ನು ಪಡೆಯುವುದಕ್ಕೆ ಸಾಧ್ಯವಾಯಿತು. ಜೀವನದಲ್ಲಿ ಐಪಿಎಸ್‌ ಪರೀಕ್ಷೆ ಪಾಸು ಮಾಡಬೇಕು ಎನ್ನುವ ಆಸೆ ಇದೆ’ ಎಂದು ಸಿಂಧನೂರು ತಾಲ್ಲೂಕಿನ ಒಳಬಳ್ಳಾರಿ ಗ್ರಾಮದ ಶ್ರೀ ಶಿವಯೋಗಿ ಚನ್ನಬಸವೇಶ್ವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ನಾಗರಾಜ ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 618 (ಶೇ 98.88) ಅಂಕಗಳನ್ನು ಪಡೆದು ಜಿಲ್ಲೆಗೆ ತೃತೀಯ ಸ್ಥಾನದಲ್ಲಿರುವ ನಾಗರಾಜ ಕೆ. ಅವರು ರೈತ ಮಹಾದೇವಪ್ಪ ಮತ್ತು ಲಕ್ಷ್ಮೀ ಅವರ ಪುತ್ರ.

ಹಿಂದಿ ಮತ್ತು ಸಮಾಜ ವಿಜ್ಞಾನದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ. ಕನ್ನಡ ವಿಷಯದಲ್ಲಿ 124, ಇಂಗ್ಲಿಷ್‌ 97, ಗಣಿತ 99 ಹಾಗೂ ವಿಜ್ಞಾನದಲ್ಲಿ 98 ಅಂಕಗಳನ್ನು ಪಡೆದಿದ್ದಾರೆ. ಶೈಕ್ಷಣಿಕ ಚಟುವಟಿಕೆಗಳು ಮತ್ತು ಕ್ರೀಡೆಗಳಲ್ಲಿ ಮೊದಲಿನಿಂದಲೂ ತೊಡಗಿಸಿಕೊಂಡಿರುವುದು ವಿಶೇಷ.

ADVERTISEMENT

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯಮಟ್ಟದಲ್ಲಿ 6ನೇ ಸ್ಥಾನ ಹಾಗೂ ಅಥ್ಲೆಟಿಕ್‌ನಲ್ಲಿ ಜಿಲ್ಲಾಮಟ್ಟದ ಕ್ರೀಡಾಪಟು ಆಗಿರುವ ನಾಗರಾಜ ಓದಿನಲ್ಲೂ ಆಸಕ್ತಿ ಇಟ್ಟುಕೊಂಡಿದ್ದಾರೆ.

‘ಶಾಲೆಯಲ್ಲಿ ಶಿಕ್ಷಕರು ತುಂಬಾ ಚೆನ್ನಾಗಿ ಪಾಠ ಮಾಡುತ್ತಾರೆ. ಎಸ್ಸೆಸ್ಸೆಲ್ಸಿ ಹಳೇ ಪ್ರಶ್ನೆಪತ್ರಿಕೆಗಳಿಗೆ ಪರೀಕ್ಷೆ ಬರೆದು ಅಭ್ಯಾಸ ಮಾಡಿದ್ದು, ಬಹಳ ಅನುಕೂಲವಾಯಿತು. ಪಿಯುಸಿ ವಿಜ್ಞಾನ ಓದುತ್ತೇನೆ’ ಎಂದರು.

ತಂದೆ ಮಹಾದೇವಪ್ಪ ಅವರು ನಾಲ್ಕು ಎಕರೆ ಸ್ವಂತ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬರುವ ಆದಾಯದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.