ಮಾನ್ವಿ: ತುಂಗಭದ್ರಾ ಜಲಾಶಯದಿಂದ ಕಳೆದ ಎರಡು ದಿನಗಳಲ್ಲಿ ಅಪಾರ ಪ್ರಮಾಣದ ನೀರು ನದಿಗೆ ಹರಿಬಿಡಲಾಗಿದ್ದು, ತಾಲ್ಲೂಕಿನ ತುಂಗಭದ್ರಾ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಉದ್ಭವಿಸಿದೆ.
ನದಿಪಾತ್ರದ ಮದ್ಲಾಪೂರ, ಚೀಕಲಪರ್ವಿ, ಕಾತರಕಿ, ಯಡಿವಾಳ, ದದ್ದಲ, ಉಮಳಿ ಪನ್ನೂರು, ಹರನಹಳ್ಳಿ ಮತ್ತಿತರ ಗ್ರಾಮಸ್ಥರು ಪ್ರವಾಹ ಪರಿಸ್ಥಿತಿಯ ಆತಂಕ ವ್ಯಕ್ತಪಡಿಸಿದ್ದಾರೆ.
ದದ್ದಲ, ಉಮಳಿ ಪನ್ನೂರು, ಹರನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ನದಿದಡದ ಭತ್ತದ ಗದ್ದೆಗಳು ಜಲಾವೃತವಾಗಿವೆ. ಕೃಷಿ ಪಂಟ್‌ಸೆಟ್‌ಗಳು ನದಿ ನೀರಿನಲ್ಲಿ ಮುಳುಗಿವೆ. ಕೆಲವು ಕಡೆ ರೈತರು ನದಿಯಲ್ಲಿ ನೀರಿನ ಅಪಾಯವೂ ಲೆಕ್ಕಿಸದೆ ಕೃಷಿ ಪಂಪ್‌ಸೆಟ್‌ಗಳನ್ನು ತೆರವುಗೊಳಿಸುತ್ತಿರುವುದು ಸೋಮವಾರ ಕಂಡು ಬಂದಿತು.
ಮಂಗಳವಾರ ತುಂಗಭದ್ರಾ ಜಲಾಶಯದಿಂದ ಸುಮಾರು 1.25 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದ್ದು, ಜಲಾಶಯದಿಂದ ಹೊರ ಹರಿವು ಪ್ರಮಾಣ ಇನ್ನೂ ಹೆಚ್ಚಾಗುವ ಸಂಭವ ಇದೆ ಎಂದು ಮೂಲಗಳು ತಿಳಿಸಿವೆ.
ತಾಲ್ಲೂಕು ಆಡಳಿತದಿಂದ ಮುಂಜಾಗ್ರತೆ: ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತದ ನಿರ್ದೇಶನದಂತೆ ತಾಲ್ಲೂಕು ಆಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು
ಕೈಗೊಂಡಿದೆ.
ತಾಲ್ಲೂಕಿನ ಚಿಕ್ಕಕೋಟ್ನೆಕಲ್, ಸಾದಾಪೂರ, ಮದ್ಲಾಪೂರ, ಸುಂಕೇಶ್ವರ, ಅರೋಲಿ, ಗೋರ್ಕಲ್ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ 11 ಪ್ರವಾಹ ಪೀಡಿತ ಗ್ರಾಮಗಳನ್ನು ಗುರುತಿಸಲಾಗಿದೆ.
ಈ ಗ್ರಾಮಗಳಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡ ವಿಪತ್ತು ನಿರ್ವಹಣಾ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳಿಂದ ಗ್ರಾಮಗಳಲ್ಲಿ ಸಂಭವನೀಯ ಪ್ರವಾಹ ಪರಿಸ್ಥಿತಿ ಕುರಿತು ಜನಜಾಗೃತಿ, ಜನ ಹಾಗೂ ಜಾನುವಾರುಗಳ ಸುರಕ್ಷತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
ತುಂಗಭದ್ರಾ ನದಿಗೆ ಸುಮಾರು 1.25 ಲಕ್ಷ ಕ್ಯುಸೆಕ್ ನೀರು ಜಲಾವೃತಗೊಂಡ ಭತ್ತದ ಗದ್ದೆಗಳು ಕೃಷಿ ಪಂಟ್‌ಸೆಟ್‌ಗಳ ತೆರವಿಗೆ ರೈತರ ಹರಸಾಹಸ
ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿಗಳನ್ನು ರಚಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆಅಬ್ದುಲ್ ವಾಹಿದ್ ಗ್ರೇಡ್-2 ತಹಶೀಲ್ದಾರ್ ಮಾನ್ವಿ
ದಿಢೀರನೆ ಪ್ರವಾಹ ಪರಿಸ್ಥಿತಿ ಉದ್ಭವಿಸಿರುವುದರಿಂದ ನದಿದಡದಲ್ಲಿರುವ ಭತ್ತದ ಗದ್ದೆಗಳು ಜಲಾವೃತಗೊಂಡು ರೈತರು ಅಪಾರ ಪ್ರಮಾಣದ ಬೆಳೆಹಾನಿ ಅನುಭವಿಸುವಂತಾಗಿದೆರುದ್ರಪ್ಪಗೌಡ ಗ್ರಾಮಸ್ಥ ಚೀಕಲಪರ್ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.