ADVERTISEMENT

‘ಮಳೆ ಅಭಾವ ಪ್ರದೇಶದಲ್ಲಿ ಕಡಲೆ ಸೂಕ್ತ’

ಸಿರವಾರ ತಾಲ್ಲೂಕಿನ ಜಕ್ಕಲದಿನ್ನಿ ಗ್ರಾಮದಲ್ಲಿ ಕಡಲೆ ಬೆಳೆ ನಿರ್ವಹಣೆ ಕ್ಷೇತ್ರೋತ್ಸವ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 15:33 IST
Last Updated 10 ಫೆಬ್ರುವರಿ 2020, 15:33 IST
ರಾಯಚೂರು ಜಿಲ್ಲೆ ಸಿರವಾರ ತಾಲ್ಲೂಕಿನ ಜಕ್ಕಲದಿನ್ನಿ ಗ್ರಾಮದಲ್ಲಿ ಪ್ರಗತಿಪರ ರೈತ ಶರಣಗೌಡ ಅವರ ಕ್ಷೇತ್ರದಲ್ಲಿ ಸೋಮವಾರ  ‘ಕಡಲೆಯಲ್ಲಿ ಸಮಗ್ರ ಬೆಳೆ ನಿರ್ವಹಣೆಯ ಕ್ಷೇತ್ರೋತ್ಸವ’ ನಡೆಯಿತು
ರಾಯಚೂರು ಜಿಲ್ಲೆ ಸಿರವಾರ ತಾಲ್ಲೂಕಿನ ಜಕ್ಕಲದಿನ್ನಿ ಗ್ರಾಮದಲ್ಲಿ ಪ್ರಗತಿಪರ ರೈತ ಶರಣಗೌಡ ಅವರ ಕ್ಷೇತ್ರದಲ್ಲಿ ಸೋಮವಾರ  ‘ಕಡಲೆಯಲ್ಲಿ ಸಮಗ್ರ ಬೆಳೆ ನಿರ್ವಹಣೆಯ ಕ್ಷೇತ್ರೋತ್ಸವ’ ನಡೆಯಿತು   

ರಾಯಚೂರು: ಮಳೆ ಅಭಾವದಿಂದ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆ ನೀರಿನ ಅಭಾವ ಕಂಡು ಬರುತ್ತಿದ್ದು, ರೈತರು, ತೊಗರಿ, ಜೋಳ ಮತ್ತು ಕಡಲೆ ಬೆಳೆಗಳನ್ನು ಬೆಳೆಯಲು ಶಿಫಾರಸು ಮಾಡಲಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಜಿ.ಎಸ್. ಯಡಹಳ್ಳಿ ಹೇಳಿದರು.

ಜಿಲ್ಲೆಯ ಸಿರವಾರ ತಾಲ್ಲೂಕಿನ ಜಕ್ಕಲದಿನ್ನಿ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿಯಲ್ಲಿ ಐ.ಸಿ.ಎ.ಆರ್.- ಕೃಷಿ ವಿಜ್ಞಾನ ಕೇಂದ್ರರಿಂದ ರಾಯಚೂರಿನ ಪ್ರಗತಿಪರ ರೈತ ಶರಣಗೌಡ ಅವರ ಕ್ಷೇತ್ರದಲ್ಲಿ ಸೋಮವಾರ ಏರ್ಪಡಿಸಿದ್ದ ‘ಕಡಲೆಯಲ್ಲಿ ಸಮಗ್ರ ಬೆಳೆ ನಿರ್ವಹಣೆಯ ಕ್ಷೇತ್ರೋತ್ಸವ’ದಲ್ಲಿ ಮಾತನಾಡಿದರು.

ರಾಯಚೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏಕಬೆಳೆ ಹಾಗೂ ವರ್ಷದಿಂದ ವರ್ಷಕ್ಕೆ ಸರದಿ ಬೆಲೆಯಾಗಿ ಭತ್ತ/ಹತ್ತಿ /ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಜಕ್ಕಲದಿನ್ನಿ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಕಡಲೆಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಪ್ರಾತ್ಯಾಕ್ಷಿಕೆಯನ್ನು ಕಡಲೆ ಬೆಳೆಯ ಬಿಜಿಡಿ-203 ತಳಿಯನ್ನು ಆಯ್ಕೆ ಮಾಡಿ ಆಯ್ದ ರೈತರ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗಿದೆ. ಇದರ ವಿಶೇಷತೆ ಕುರಿತು ಅರಿವು ಮೂಡಿಸಲು ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.

ADVERTISEMENT

ರಾಯಚೂರಿನ ತಳಿ ಅಭಿವೃದ್ಧಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಜೆ.ಎಂ. ನೀಡಗುಂದಿ ಮಾತನಾಡಿ, ಈ ಪ್ರದೇಶಕ್ಕೆ ಸೂಕ್ತವಾದ ಕಡಲೆ ತಳಿಗಳು, ಅವುಗಳ ಗುಣ ಧರ್ಮಗಳು ಹಾಗೂ ಬೀಜೋತ್ಪಾದನೆಯ ಮಹತ್ವ ಕುರಿತು ಮಾಹಿತಿ ನೀಡಿದರು.

ಕಡಲೆ ಬೆಳೆಯಲ್ಲಿ ’ಸಮಗ್ರ ಕೀಟ ನಿರ್ವಹಣೆ ಅಂಗವಾಗಿ ಬಿತ್ತನೆ ಪೂರ್ವದಲ್ಲಿ ಪ್ರತಿ ಕಿಗ್ರಾಂ ಬೀಜಕ್ಕೆ 4 ಗ್ರಾಂ ಟ್ರೈಕೋಡರ್ಮಾ ಬೀಜೋಪಚಾರ ಮಾಡಿಸಿ ಬಿತ್ತನೆ ಕೈಗೊಂಡಲ್ಲಿ ನೆಟೆರೋಗದ ನಿರ್ವಹಣೆ ಮಾಡಬಹುದಾಗಿದೆ. ಹಸಿರು ಕಾಯಿಕೊರಕದ ನಿರ್ವಹಣೆಗಾಗಿ ಬಿತ್ತನೆ ಸಮಯದಲ್ಲಿ ಪ್ರತಿ ಎಕರೆಗೆ 200 ಗ್ರಾಂ ಸೂರ್ಯಕಾಂತಿ/ಜೋಳದ ಕಾಳು ಮಿಶ್ರಣ ಮಾಡಿ ಬಿತ್ತಿದಲ್ಲಿ ಪಕ್ಷಿಗಳು ಕೂರಲು ಆಶ್ರಯ ಸಸ್ಯಗಳಾದಿ ಸಹಕಾರಿಯಗುತ್ತವೆ. ಕೀಟಗಳ ಸಮೀಕ್ಷೆಗಾಗಿ ಪ್ರತಿ ಎಕರೆಗೆ 4 ರಂತೆ ಮೊಹಕ ಬಲೆಗಳನ್ನು ಅಳವಡಿಸಿ. ಆರ್ಥಿಕ ನಷ್ಠ ರೇಖೆಗೆ ಅನುಗುಣವಾಗಿ ಕೀಟ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಮೊದಲನೆಯ ಸಿಂಪರಣೆಯಾಗಿ ತತ್ತಿನಾಶಕ ಕೀಟನಾಶಕವಾದ ಪ್ರೋಫೆನೊಪಾಸ್ ಕೀಟನಾಶಕವನ್ನು ಪ್ರತಿ ಲೀಟರ್‌ ನೀರಿಗೆ 2 ಮಿ.ಲೀ.ನಂತೆ ಬೆರೆಸಿ ಸಿಂಪಡಿಸಬೇಕು. ಆನಂತರ ಎರಡನೆ ಸಿಂಪರಣೆಯಾಗಿ ನೂತನ ಸ್ಪರ್ಷನಾಶಕ ಕೀಟನಾಶಕವನ್ನು ಸಿಂಪಡಿಸಿ ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು ಎಂದು ತಿಳಿಸಿದರು.

ಪ್ರಗತಿಪರ ರೈತ ಶರಣೆಗೌಡ ಅವರು ಕಡಲೆ ಬೇಸಾಯದಲ್ಲಿ ತಮ್ಮ ಅನುಭವ ಹಂಚಿಕೊಂಡರು. ರೈತರು ಕಡಲೆ, ಜೋಳ ಹಾಗೂ ಹತ್ತಿ ಬೆಳೆಯ ತಳಿಗಳು, ಕಳೆನಾಶಕ ಹಾಗೂ ಕೀಟನಾಶಕಗಳ ಬಗ್ಗೆ ತಜ್ಞರೊಂದಿಗೆ ಸಂವಾದ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.