ADVERTISEMENT

ಉನ್ನತ ಶಿಕ್ಷಣವಂತರು ಸಮಾಜದಿಂದ ವಿಮುಖ

ಸಂವಾದದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 14:19 IST
Last Updated 17 ಆಗಸ್ಟ್ 2019, 14:19 IST
ರಾಯಚೂರಿನಲ್ಲಿ ಮತ್ತೆ ಕಲ್ಯಾಣ ಅಭಿಯಾನದ ನಿಮಿತ್ತ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದದಲ್ಲಿ ಸಾಣೇಹಳ್ಳಿಯ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು
ರಾಯಚೂರಿನಲ್ಲಿ ಮತ್ತೆ ಕಲ್ಯಾಣ ಅಭಿಯಾನದ ನಿಮಿತ್ತ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದದಲ್ಲಿ ಸಾಣೇಹಳ್ಳಿಯ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು   

ರಾಯಚೂರು: ಶಿಕ್ಷಣ ಪಡೆಯುವುದರಿಂದ ವ್ಯಕ್ತಿ ಸುಸಂಸ್ಕೃತನಾಗುತ್ತಾನೆ ಎಂಬು ಭಾವನೆ ಸಮಾಜದಲ್ಲಿದೆ. ಆದರೆ, ವಿದ್ಯಾವಂತರು ಸ್ವಾಸ್ಥ್ಯ ಸಮಾಜ ನಿರ್ಮಾಣದ ವಿಷಯದಲ್ಲಿ ವಿಮುಖರಾಗುತ್ತಿದ್ದು, ಇದಕ್ಕೆ ಶಿಕ್ಷಣ ವ್ಯವಸ್ಥೆಯಲ್ಲಿರುವ ನ್ಯೂನ್ಯತೆಗಳೇ ಕಾರಣ ಎಂದು ಸಾಣೇಹಳ್ಳಿಯ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಮತ್ತೆ ಕಲ್ಯಾಣ ಅಭಿಯಾನ’ ನಿಮಿತ್ತ ಚಿತ್ರದುರ್ಗದ ಸಾಣೇಹಳ್ಳಿಯ ತರಳಬಾಳು ಶಾಖಾಮಠದ ಸಹಮತ ವೇದಿಕೆಯಿಂದ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದದ ಸಾನಿಧ್ಯ ವಹಿಸಿ ಮಾತನಾಡಿದರು.

ಹಿಂದಿನ ಸಮಾಜಕ್ಕೂ ಈಗಿನ ಸಮಾಜಕ್ಕೂ ಬಹಳಷ್ಟು ವ್ಯತ್ಯಾಸಗಳಿದ್ದು, ಸಮಾಜದಲ್ಲಿ ಮೌಢ್ಯತೆ, ಅಸಮಾನತೆ, ಭ್ರಷ್ಟಾಚಾರ ಹೆಚ್ಚುತ್ತಿದೆ. ಉನ್ನತ ಶಿಕ್ಷಣ ಪಡೆದವರು ಕೂಡ ಮೌಢ್ಯತೆಗೆ ಪ್ರೋತ್ಸಾಹ ನೀಡುತ್ತಿರುವುದು ನೈತಿಕತೆಯ ದುಸ್ಥಿತಿಗೆ ಕನ್ನಡಿಯಾಗಿದೆ. ಸಮಾಜದ ಬೆಳವಣಿಗೆಗೆ ಮುಂದಾಗಬೇಕಾದ ವಿದ್ಯಾವಂತರು ವಿಮುಖರಾಗುತ್ತಿರುವುದು ಕಳವಳದ ಸಂಗತಿಯಾಗಿದ್ದು, ಶಿಕ್ಷಣದಲ್ಲಿನ ನ್ಯೂನ್ಯತೆ ಅರಿತು ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.

ADVERTISEMENT

ಸಾಮಾಜಿಕ ಹೊಣೆಗಾರಿಕೆ ವಹಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕಾದವರು ಸ್ವಾರ್ಥವನ್ನು ಮೈಗೂಡಿಸಿಕೊಂಡಿದ್ದಾರೆ. ಶ್ರಮವಿಲ್ಲದೇ ಆದಾಯ ನಿರೀಕ್ಷೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಕಾಯಕ ಶ್ರದ್ಧೆ ಹಾಗೂ ದಾಸೋಹ ಪ್ರಜ್ಞೆಯ ಶಿಕ್ಷಣ ಬೋಧಿಸಬೇಕಾಗಿದೆ ಎಂದು ತಿಳಿಸಿದರು.

ಶೈಕ್ಷಣಿಕ ಪದ್ಧತಿಯಲ್ಲಿ ಲೋಪ ಇರುವುದರಿಂದ ಶಿಕ್ಷಣ ಪಡೆಯುವುದು ಉದ್ಯೋಗ ಪಡೆಯುವುದಕ್ಕೆ ಮಾತ್ರ ಎನ್ನುವಂತಾಗಿದೆ. ಉದ್ಯೋಗ ಪಡೆದವರು ಸಮಾಜದ ಹೊಣೆಗಾರಿಕೆಯಿಂದ ದೂರ ಸರಿಯುತ್ತಿರುವುದು ಸಮಾಜಕ್ಕೆ ಅಪಾಯಕಾರಿ ಬೆಳವಣಿಗೆಯಾಗಿದೆ. 12ನೇ ಶತಮಾನದ ಶರಣರ ಆದರ್ಶಗಳನ್ನು ಸಮಾಜವು ಅಳವಡಿಸಿಕೊಂಡು ಪ್ರಗತಿಯೆಡೆಗೆ ಸಾಗಬೇಕಾಗಿದೆ ಎಂದರು.

ಉಪನ್ಯಾಸಕಿ ಈರಮ್ಮ ಶರಣರ ಚಳವಳಿಯ ಆಶಯ ಕುರಿತು ಮಾತನಾಡಿದರು. ಆ ನಂತರ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸ್ವಾಮೀಜಿ ಹಾಗೂ ಬಸವ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಅರವಿಂದ ಜತ್ತಿ ಅವರು ಉತ್ತರಿಸಿದರು.

ಬಸವದೇವರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ದಸ್ತಗೀರ್‌ ಸಾಬ್ ದಿನ್ನಿ, ಸಾಹಿತಿ ಬಾಬು ಭಂಡಾರಿಗಲ್, ಎಂ.ಆರ್.ಭೇರಿ, ಅಂಬಣ್ಣ ಅರೋಲಿ, ಶಿವಯ್ಯ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.