ADVERTISEMENT

ಆಂತರಿಕ ಸದೃಢತೆಯಿಂದ ಉತ್ತಮ ಸಮಾಜ ನಿರ್ಮಾಣ: ರಾಜಯೋಗಿನಿ ಸ್ಮಿತಾ

ಸಿಜೆಕೆ ಬೀದಿ ರಂಗದಿನ ಕಾರ್ಯಕ್ರಮದಲ್ಲಿ ರಾಜಯೋಗಿನಿ ಸ್ಮಿತಾ ಅಕ್ಕನವರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 12:40 IST
Last Updated 27 ಜೂನ್ 2020, 12:40 IST
ರಾಯಚೂರಿನ ಕನ್ನಡ ಭವನದಲ್ಲಿ ಶನಿವಾರ ನಡೆದ ಸಿಜೆಕೆ ಬೀದಿ ರಂಗದಿನ ಕಾರ್ಯಕ್ರಮದಲ್ಲಿ ರಂಗಕಲಾವಿದ ಪ್ರವೀಣ ರೆಡ್ಡಿ ಅವರಿಗೆ ಸಿಜಿಕೆ ಪ್ರಶಸ್ತಿ ನೀಡಿ ಸನ್ಮಾನ ಮಾಡಲಾಯಿತು
ರಾಯಚೂರಿನ ಕನ್ನಡ ಭವನದಲ್ಲಿ ಶನಿವಾರ ನಡೆದ ಸಿಜೆಕೆ ಬೀದಿ ರಂಗದಿನ ಕಾರ್ಯಕ್ರಮದಲ್ಲಿ ರಂಗಕಲಾವಿದ ಪ್ರವೀಣ ರೆಡ್ಡಿ ಅವರಿಗೆ ಸಿಜಿಕೆ ಪ್ರಶಸ್ತಿ ನೀಡಿ ಸನ್ಮಾನ ಮಾಡಲಾಯಿತು   

ರಾಯಚೂರು: ಸಮಾಜದ ಹಿತ ಕಾಪಾಡಬೇಕಾದರೆ ಮೊದಲು ನಮ್ಮನ್ನು ಸಶಕ್ತರನ್ನಾಗಿಸಿಕೊಂಡು ಉತ್ತಮ ವ್ಯಕ್ತಿತ್ವದಿಂದ ಒಳ್ಳೆಯವರಾಗಿರಬೇಕು. ಆಂತರಿಕವಾಗಿ ಸದೃಢಗೊಂಡವರಿಂದ ಸಮಾಜ ಕಟ್ಟಲು ಸಾಧ್ಯ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಸ್ಮಿತಾ ಅಕ್ಕನವರು ಹೇಳಿದರು.

ನಗರದ ಕನ್ನಡ ಭವನದಲ್ಲಿ ಕರ್ನಾಟಕ ಬೀದಿ ನಾಟಕ ಅಕಾಡೆಮಿ ಹಾಗೂ ಬಸವ ಬ್ರಿಗೇಡ್‌ನಿಂದ ಶನಿವಾರ ಏರ್ಪಡಿಸಿದ್ದ ಸಿಜೆಕೆ ಬೀದಿ ರಂಗದಿನ ಕಾರ್ಯಕ್ರಮ ಹಾಗೂ ಸಿಜೆಕೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಶರಣರು ಎಂದರೆ ಸಂಪ್ರಾದಾಯದಿಂದ ಹೊರಗುಳಿದವರು, ಶಿವನಿಗೆ ಶರಣಾದವರು. ಸಮಾಜವನ್ನು ಒಂದು ಪರಿವಾರ ಎಂದು ನಂಬಿ ಸಮಾಜ‌ ಕಟ್ಟುವ ಕೆಲಸ ಮಾಡಿದವರು.ಅವರನ್ನು ಪೂಜಿಸಿದರೆ ಸಾಲದು‌ ಅವರ ವ್ಯಕ್ತಿತ್ವವನ್ನು ನಾವು ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ. ಬಸವ ಬ್ರಿಗೆಡ್ ಹೆಸರಿನಲ್ಲಿ ಸಮಾಜಮುಖಿ ಕೆಲಸ ಮಾಡುತ್ತಿರುವ ಸಂಘದ ಕಾರ್ಯ ಮೆಚ್ಚುವಂತಹದ್ದು ಎಂದರು.

ADVERTISEMENT

ಸಾಧನೆಗೆ ಪ್ರೋತ್ಸಾಹ ನೀಡುವ ಕೈಗಳು ಹೆಚ್ಚಾಗಬೇಕು. ಸಾಧಕರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ಬ್ರಿಗೆಡ್ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕಲೆ ಸಾಹಿತ್ಯಕ್ಕೆ ವಿಶೇಷ ಒತ್ತು ನೀಡಲಾಗಿದ್ದು, ಅನೇಕರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು ಹೀಗೆ ಜಿಲ್ಲೆಯ ಸಾಹಿತಿಗಳು, ಸಾಹಿತ್ಯ ಬೆಳೆಯುವ ಕಾರ್ಯ ನಡೆಯಲಿ ಎಂದರು.

ಕೋವಿಡ್‌ ಕುರಿತು ಜಿಲ್ಲೆಯಾದ್ಯಂತ ಪೊಲೀಸ್‌ ಇಲಾಖೆಯಿಂದ ಜಾಗೃತಿ ಮೂಡಿಸಿದರೂ ಜನರು ಅನವಶ್ಯಕವಾಗಿ ತಿರುಗಾಡುವುದು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಎಲ್ಲರ ಒಳತಿಗಾಗಿ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಬಸವ ಬ್ರಿಗೆಡ್ ಹಸಿರೀಕರಣಕ್ಕೆ ಕಾರ್ಯಯೋಜನೆ ರೂಪಿಸಿದ್ದು ಜಿಲ್ಲಾ ಪೊಲಿಸ್ ಇಲಾಖೆಯಿಂದ ಅಗತ್ಯ ಸಹಕಾರ ನೀಡಿ ನಗರವನ್ನು ಹಸಿರುವನ್ನಾಗಿ ಮಾಡಲಾಗುವುದು. ಸಾರ್ವಜನಿಕರು ಕೂಡ ಇದಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

ಸಿಜೆಕೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಂಗಕಲಾವಿದ ಪ್ರವೀಣ ರೆಡ್ಡಿ ಗುಂಜಳ್ಳಿ ಮಾತನಾಡಿ, ಜಾತ್ಯತೀತ ನೆಲೆಗಟ್ಟಿನಲ್ಲಿ ಮೂರ್ಖವಾದಿಗಳಿಗೆ ಪಾಠ ಕಲಿಸಬೇಕಿದೆ. ಸಿಜೆಕೆ ರಂಗ ಭೂಮಿ ಕಲಾಕ್ಷೇತ್ರದಲ್ಲಿ ಉತ್ತುಂಗ ಸ್ಥಾನದಲ್ಲಿದ್ದವರು. ಅವರು ರಂಗ ದಿಗ್ಗಜರಾಗಿ ಹಲವಾರು ಪ್ರತಿಭೆಗಳಿಗೆ ಗುರುತಿಸಿ ಬೆಳೆಸಿದವರು. ಇಂತಹ ರಂಗ ಮಾತ್ರಿಕರ ಹೆಸರಿನ ಪ್ರಶಸ್ತಿಗೆ ನನಗೆ ನೀಡುತ್ತಿರುವುದು ಖುಷಿ ನೀಡಿದೆ ಎಂದರು.

ಹಿರಿಯ ಸಾಹಿತಿ ಅಯ್ಯಪ್ಪಯ್ಯ‌ ಹುಡಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಂಬಣ್ಣ ಅರೋಲಿಕರ್ ಕ್ರಾಂತಿಗೀತೆ ಹಾಡಿದರು. ಹಿರಿಯ ಸಾಹಿತಿ ವಿ.ಎನ್. ಅಕ್ಕಿ, ತಾಯಣ್ಣ ಯರಗೇರಾ, ಈರಣ್ಣ ಬೆಂಗಾಲಿ, ಬಸವ ಬ್ರಿಗೆಡ್‌ನ ಸಂಚಾಲಕ ಡಿಂಗ್ರಿ ನರೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.