ರಾಯಚೂರು: ‘ರಾಯಚೂರು ಗ್ರಾಮೀಣ ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡುವುದು ನನ್ನ ಮುಖ್ಯ ಗುರಿಯಾಗಿದೆ’ ಎಂದು ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಹೇಳಿದರು.
ಗುರುವಾರ ರಾಯಚೂರು ಗ್ರಾಮೀಣ ಭಾಗದಲ್ಲಿ ಸಂಚರಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಅವರು ಮಾತನಾಡಿದರು.
‘ಬೇರೆ ಬೇರೆ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕಾಗಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.
ಗುಂಜಳ್ಳಿ ಗ್ರಾಮದಲ್ಲಿ ₹146 ಕೋಟಿ ನಿರ್ಮಿಸಿದ ಗುಂಜಳ್ಳಿ ಬಸಪ್ಪ ಕೆರೆ ಹಾಗೂ ಸುತ್ತಲಿನ ಗ್ರಾಮಗಳ 9 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಏತ ನೀರಾವರಿಯ ಕಾಮಗಾರಿ ವೀಕ್ಷಿಸಿದರು.
ರಾಯಚೂರು ತಾಲ್ಲೂಕಿನ ಚಿಕ್ಕಮಂಚಾಲಿ, ಬುಳ್ಳಪೂರ ಗ್ರಾಮದ ಹತ್ತಿರ ತುಂಗಭದ್ರಾ ನದಿ ತಟಕ್ಕೆ ಭೇಟಿ ನೀಡಿದ ಶಾಸಕರು, ಏತ ನೀರಾವರಿ ಕಾಮಗಾರಿಯ ಸಮಗ್ರ ವೀಕ್ಷಣೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
‘ಕೃಷ್ಣ ನದಿಯಿಂದ ಬಂಗಾರಪ್ಪ ಕೆರೆ ತುಂಬಿಸುವ ಯೋಜನೆಯಿಂದಾಗಿ ರೈತರ ಹೊಲಗಳಿಗೆ, ಕೆರೆಗಳಿಗೆ ಹಾಗೂ ಕುಡಿಯುವ ನೀರಿಗೆ ಅನುಕೂಲ ಮಾಡಲಾಗಿದೆ. ತುಂಗಭದ್ರಾ ನದಿಯಿಂದ ಗುಂಜಳ್ಳಿ ಬಸಪ್ಪ ಕೆರೆ ಹಾಗೂ ಸುತ್ತಲಿನ 9 ಗ್ರಾಮಗಳ ಗುಂಜಳ್ಳಿ ಕೆರೆ, ಗೋಡಿಹಾಳ ಕೆರೆ, ಯರಗೇರಾ1 ಕೆರೆ, ಯರಗೇರಾ2 ಕೆರೆ, ಕೆರೆಬೂದುರ ಕೆರೆ, ಕಮಲಾಪೂರ ಕೆರೆ, ಮಂಜರ್ಲಾ, ಗಧಾರ ಕೆರೆ, ಮಿಡಗಲದಿನ್ನಿ ಕೆರೆಗಳನ್ನು ತುಂಬಿಸುವ ಈ ಯೋಜನೆ ಯಶ ಕಂಡಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿ ಕುಡಿಯುವ ನೀರು ಹಾಗೂ ರೈತರ ಹೊಲಗಳಿಗೆ ಅನುಕೂಲವಾಗಲಿದೆ’ ಎಂದು ಬಸನಗೌಡ ದದ್ದಲ್ ತಿಳಿಸಿದರು.
ಗಿಲ್ಲೇಸೂಗುರ ಬ್ಲಾಕ್ ಅಧ್ಯಕ್ಷರು, ಚಿಕ್ಕಮಂಚಾಲಿ, ಬುಳ್ಳಪೂರ, ಗುಂಜಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳ ಹಿರಿಯ ಮುಖಂಡರು, ಗ್ರಾಮಸ್ಥರು, ನಾಮನಿರ್ದೆಶಿತ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.