ADVERTISEMENT

ಸಿಂಧನೂರು: ಅಧಿಕಾರಿಗಳ ವಿರುದ್ಧ ಹರಿಹಾಯ್ದ ಶಾಸಕ

ಸಿಂಧನೂರು ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 6:18 IST
Last Updated 9 ಫೆಬ್ರುವರಿ 2023, 6:18 IST
ಸಿಂಧನೂರಿನ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಶಾಸಕ ವೆಂಕಟರಾವ್ ನಾಡಗೌಡ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು
ಸಿಂಧನೂರಿನ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಶಾಸಕ ವೆಂಕಟರಾವ್ ನಾಡಗೌಡ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು   

ಸಿಂಧನೂರು: ಮೂರು ತಿಂಗಳಿಂದ ಅಂಗನವಾಡಿ ಕೇಂದ್ರಗಳಿಗೆ ಸರಿಯಾಗಿ ಹಾಲಿನ ಪೌಡರ್ ಸರಬರಾಜು ಮಾಡದ ಕೆಎಂಎಫ್ ಅಧಿಕಾರಿಗಳ ವಿರುದ್ಧ ಶಾಸಕ ವೆಂಕಟರಾವ ನಾಡಗೌಡ ಹರಿಹಾಯ್ದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಯಿ– ಮಕ್ಕಳಲ್ಲಿ ಅಪೌಷ್ಟಿಕ ನಿವಾರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಹಾಲಿನ ಪೌಡರ್ ಸರಬರಾಜು ಮಾಡುತ್ತಿದೆ ಎಂದು ಪ್ರಭಾರ ಸಿಡಿಪಿಒ ಲಿಂಗನಗೌಡ ಶಾಸಕರ ಗಮನಕ್ಕೆ ತಂದರು. ಆದರೆ ಸರಿಯಾಗಿ ಹಾಲಿ ಪೌಡರ್ ಪೂರೈಕೆ ಮಾಡದಿರುವ ಬಗ್ಗೆ ಶಾಸಕ ನಾಡಗೌಡ ಕೆಎಂಎಫ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಅಧಿಕಾರಿಗಳಿಂದ ಸರಿಯಾದ ಉತ್ತರ ಸಿಗದ ಹಿನ್ನಲೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ ಹಾಲಿನ ಪೌಡರ್ ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಆಗದಿದ್ದರೆ ಖಾಸಗಿ ಕೇಂದ್ರಗಳಿಂದ ಹಾಲಿನ ಪೌಡರ್ ತರಿಸಿಕೊಳ್ಳಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ದಿ ನಿಗಮಕ್ಕೆ ವಹಿಸಲಾದ ಕಾಮಗಾರಿಗಳು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳ್ಳುತ್ತಿಲ್ಲ. ಸಾಕಷ್ಟು ಕಾಮಗಾರಿಗಳ ಬಾಕಿ ಉಳಿದಿವೆ ಎಂದು ಜೆಇ ಕಾಶಿನಾಥ ಅವರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಪೂರ್ಣಗೊಂಡ ಕಾಮಗಾರಿ ಗಳನ್ನು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿ ಸುವಂತೆ ಸೂಚನೆ ನೀಡಿದರು.

ADVERTISEMENT

ತಾಲ್ಲೂಕಿನಲ್ಲಿ ಬಹುನಿರೀಕ್ಷಿತ ಜಲಜೀವನ ಮಿಷನ್ ಅಡಿಯಲ್ಲಿ ಕೈಗೊಂಡಿರುವ ಶುದ್ದ ಕುಡಿಯುವ ನೀರಿನ ಯೋಜನೆಗಳು ನಿರೀಕ್ಷಿತ ಪ್ರಗತಿಯಾಗಿಲ್ಲ ಎಂದು ಶಾಸಕ ನಾಡಗೌಡ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಜೆಜೆಎಂ ಯೋಜನೆಯಡಿಯಲ್ಲಿ ಮೊದಲ ಹಂತದಲ್ಲಿ 31 ಕಾಮಗಾರಿಗಳಲ್ಲಿ ಕೇವಲ 14 ಮಾತ್ರ ಪೂರ್ಣಗೊಂಡಿದ್ದು, 17 ಕಾಮಗಾರಿಗಳು ಬಾಕಿ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಎರಡನೇ ಹಂತದಲ್ಲಿ 51 ಕಾಮಗಾರಿಗಳು ಅರೆ-ಬರೆ ನಡೆಯುತ್ತಿವೆ. ಮೂರನೇ ಹಂತದಲ್ಲಿ 137 ಕಾಮಗಾರಿಗಳು ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದಿರುವುದಕ್ಕೆ ಜಿಲ್ಲಾ ಪಂಚಾಯಿತಿ ಎಇಇ ಶಿವಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.

ಸಾಮಾಜಿಕ ಅರಣ್ಯ ಇಲಾಖೆಯ ಪ್ರಗತಿ ಬಗ್ಗೆ ಬಗ್ಗೆ ಮಾಹಿತಿ ಪಡೆದ ನಾಡಗೌಡರು ನಾಲ್ಕು ವರ್ಷ 146 ಕಿ.ಮೀ ಗಿಡಗಳನ್ನು ನಾಟಿ ಮಾಡಿದ್ದಾಗಿ ದಾಖಲೆ ತೋರಿಸುತ್ತೀರಿ. ವಾಸ್ತವವಾಗಿ ಒಂದು ಗಿಡವೂ ಕಾಣುವುದಿಲ್ಲ. ಅಂಬಾ ಮಠ ರಸ್ತೆಯ ಇಕ್ಕೆಲಗಳಲ್ಲಿ ಅಲ್ಪಸ್ವಲ್ಪ ಗಿಡಗಳು ಕಾಣುತ್ತವೆ. ಉಳಿದೆಡೆ ಮಾಯವಾಗುತ್ತವೆಯೇ ಎಂದು ಪ್ರಶ್ನಿಸಿದರು. ನರೇಗಾ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ ನಿಗದಿತ ಕಾಲಾವಧಿಯಲ್ಲಿ ವೇತನ ಪಾವತಿಸುವಂತೆ ತಾಕೀತು ಮಾಡಿದರು.

ವಿವಿಧ ರೋಗಗಳಲ್ಲಿ 147 ಹಸುಗಳು ಸಾವನ್ನಪ್ಪಿವೆ. 70 ಜನರಿಗೆ ಪರಿಹಾರ ನೀಡಲಾಗಿದೆ. ಉಳಿದವು ಚಾಲ್ತಿಯಲ್ಲಿವೆ ಎಂದು ಮಾಹಿತಿ ನೀಡಿ, ಜಾನುವಾರುಗಳ ಕಾಲುಬೇನೆ ರೋಗಕ್ಕೆ ಶೇ 90 ರಷ್ಟು ಲಸಿಕೆ ಹಾಕಲಾಗಿದೆ ಎಂದು ಪಶು ಸಂಗೋಪನಾ ಇಲಾಖೆ ಬಗ್ಗೆ ಡಾ.ಶರಣೇಗೌಡ ಮಾಹಿತಿ ನೀಡಿದರು. ಬೇಸಿಗೆ ಪ್ರಾರಂಭವಾಗು ತ್ತಿರುವು ದರಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗಬಾರದು. ಎಲ್ಲಾ ಕೆರೆ-ಕಟ್ಟೆಗಳು ಸರಿಯಾದ ಪ್ರಮಾಣದಲ್ಲಿ ತುಂಬಿರುವ ಬಗ್ಗೆ ಆಯಾ ಪಿಡಿಓಗಳು ತಾಲ್ಲೂಕು ಪಂಚಾಯತಿ ಅಧಿಕಾರಿಗೆ ಕಾಲಕಾಲಕ್ಕೆ ಮಾಹಿತಿ ನೀಡಬೇಕು. ತಾಂತ್ರಿಕ ನ್ಯೂನ್ಯತೆಗಳು ಇದ್ದಲ್ಲಿ ಕೂಡಲೇ ತಿಳಿಸಬೇಕು ಎಂದು ನಾಡಗೌಡರು ಸಲಹೆ ನೀಡಿದರು.

ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೇವಿ ಗುರಿಕಾರ, ಸಹಾಯಕ ನಿರ್ದೇಶಕರಾದ ಅಮರಗುಂಡಪ್ಪ, ಮನೋಹರ, ಯೋಜನಾ ಅಧಿಕಾರಿ ರಜಪುಲಿ ಸೇರಿ ನಾಮನಿರ್ದೇಶಿತ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.