ADVERTISEMENT

ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ

ಕೆಕೆಆರ್‌ಡಿಬಿ ಕಾರ್ಯದರ್ಶಿ ಸುಬೋಧ್‌ ಯಾದವ್‌ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 14:45 IST
Last Updated 2 ನವೆಂಬರ್ 2019, 14:45 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೆಕೆಆರ್‌ಡಿಬಿ ಕಾರ್ಯದರ್ಶಿ ಸುಬೋಧ್‌ ಯಾದವ್‌ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಯಿತು
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೆಕೆಆರ್‌ಡಿಬಿ ಕಾರ್ಯದರ್ಶಿ ಸುಬೋಧ್‌ ಯಾದವ್‌ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಯಿತು   

ರಾಯಚೂರು: ಜಿಲ್ಲಾದ್ಯಂತ ಕಾಮಗಾರಿಗಳ ಸ್ಥಿತಿ–ಗತಿ ವಿವರವನ್ನು ತಪ್ಪದೆ ಗಣಕಯಂತ್ರದ ಮೂಲಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವಂತೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಬೋಧ್ ಯಾದವ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಮಾತನಾಡಿದರು.

‘ಸಭೆಯಲ್ಲಿ ಚಹಾ ಕುಡಿಯಲು ಬರಬೇಡಿ, ನಿಮ್ಮ ಇಲಾಖೆಯ ಕಾಮಗಾರಿ ಹಂತ, ಅನುದಾನ ಬಳಕೆಯ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿ ಸಭೆಗೆ ಹಾಜರಾಗಿ, ನಾವು ಕೇಳುವ ವಿವರಗಳಿಗೆ ಸಮರ್ಪಕ ಮಾಹಿತಿ ನೀಡಿ’ ಎಂದು ತರಾಟೆಗೆ ತೆಗೆದುಕೊಂಡರು.

ADVERTISEMENT

ರಾಯಚೂರು ಜಿಲ್ಲೆಯ ತಾಲೂಕುಗಳಲ್ಲಿ ಎರಡು ವರ್ಷಗಳ ಹಿಂದಿನ ಪ್ರತಿಯೊಂದು ಕಾಮಗಾರಿಗೆ ಖರ್ಚಾದ ಅನುದಾನದ ಬಿಲ್‌ಗಳನ್ನು ಇನ್ನೂ ಸಲ್ಲಿಸಿಲ್ಲ. ಹಲವು ತಿಂಗಳು ಕಳೆದರೂ ಅನೇಕ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ ಎಂದ ಅಧಿಕಾರಿಗಳ ಕಿವಿ ಹಿಂಡಿದರು.

ಸಿಂಧನೂರಿನಲ್ಲಿ ಶಿಕ್ಷಣ ಇಲಾಖೆಯ ಅನೇಕ ಕಟ್ಟಗಳ ಕಾಮಗಾರಿ ವಿಳಂಬಗೊಂಡಿದೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಕ್ರೀಡಾಂಗಣ ಕಾಮಗಾರಿ ವಿಳಂಬಗೊಂಡಿದ್ದು, ಕ್ರೀಡಾಪಟುಗಳಿಗೆ ತೊಂದರೆಯಾಗುತ್ತಿದೆ. ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ನಿಮ್ಮ ಆತ್ಮ ಸಾಕ್ಷಿಯಿಂದ ಕಾರ್ಯನಿರ್ವಹಿಸಿ ಎಂದರು.

ಸಿಂಧನೂರು ತಾಲ್ಲೂಕು ಸಂಬಂಧಿಸಿದ ಕಾರ್ಯನಿರ್ವಾಹಕ ಎಂಜಿನಿಯರ್‌ ಶೋಕಾಸ್ ನೋಟಿಸ್ ಜಾರಿಗೊಳಿಸಿದರು.

ಮಾನ್ವಿ ತಾಲ್ಲೂಕಿನಲ್ಲಿ 12 ಕಾಮಗಾರಿಗಳು ವಿಳಂಬಗೊಂಡಿವೆ. ಮತ್ತೆ ದಾಖಲೆಗಳಲ್ಲಿ ಕಾಮಗಾರಿ ಪ್ರಗತಿ ಹಂತದಲ್ಲಿವೆ ಎಂದು ತಿಳಿಸಿದ್ದೀರಿ. ಮಾನ್ವಿ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರು.

2014–16 ರಲ್ಲಿ ದೇವದುರ್ಗ ತಾಲ್ಲೂಕಿನಲ್ಲಿ ಪ್ರತಿ ಒಂದು ಹಾಸ್ಟೆಲ್ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ. ಮೂರು ಬಿಸಿಎಂ ಹಾಸ್ಟೆಲ್ ಹಾಗೂ ಒಂದು ಅಲ್ಪಸಂಖ್ಯಾತ ಹಾಸ್ಟೆಲ್ ನಿರ್ಮಾಣ ಕಾಮಗಾರಿ ಮುಗಿದಿವೆ. ಕೂಡಲೇ ಈ ಬಗ್ಗೆ ಮಾಹಿತಿ ಅಪ್‌ಲೋಡ್‌ ಮಾಡಿ ಎಂದರು.

ರಾಯಚೂರು ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಕೈಗಾರಿಕೆ ಲ್ಯಾಬ್ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣ ಕಾಮಗಾರಿ ಹಾಗೂ ವಾರ್ಡ್ ಸಂಖ್ಯೆ 14ರಲ್ಲಿ ಸರ್ಕಾರಿ ಶಾಲೆಯ ಮೂರು ಕೋಣೆ ನರ್ಮಾಣ ಕಾಮಗಾರಿಗಳು ಪೂರ್ಣಗೊಳಿಸಿ. ರಾಯಚೂರು ತಾಲ್ಲೂಕು, ಲಿಂಗಸೂಗೂರು, ಮಸ್ಕಿ, ಸಿರವಾರ ತಾಲೂಕುಗಳಲ್ಲಿ ಕಟ್ಟಡ, ರಸ್ತೆ, ಚರಂಡಿ ಇನ್ನಿತರ ಕಾಮಗಾರಿಗಳು ತ್ವರಿತಗತಿಯಲ್ಲಿ ದಕ್ಷತೆಯಿಂದ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಾಮಗಾರಿಗೆ ಅಡೆತಡೆ ಉಂಟಾದರೆ ಸಂಬಂಧಿಸಿದ ಇಲಾಖೆಗಳ ನೆರವು ಪಡೆದುಕೊಳ್ಳಿ, ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತನ್ನಿ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಆರ್ ವೆಂಕಟೇಶಕುಮಾರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಲಕ್ಷ್ಮೀಕಾಂತರೆಡ್ಡಿ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.