ಮಾನ್ವಿ: ಅಟಲ್‌ಜೀ ಜನಸ್ನೇಹಿ ಕೇಂದ್ರ ಯೋಜನೆ ಅಡಿಯಲ್ಲಿ ಸರ್ಕಾರ ಕಂದಾಯ ಇಲಾಖೆಯ ನಾಡ ಕಚೇರಿಗಳ ಮೂಲಕ ಸಾರ್ವಜನಿಕರಿಗೆ ವಿವಿಧ ಪ್ರಮಾಣ ಪತ್ರಗಳ ಸೇವೆಯನ್ನು ನೀಡುತ್ತಿದೆ.
ತಾಲ್ಲೂಕಿನ ಮೂರು ನಾಡ ಕಚೇರಿಗಳು ಜೂನ್, ಜುಲೈ ಸೇರಿದಂತೆ ಆಗಸ್ಟ್ ತಿಂಗಳಲ್ಲಿ ಇದುವರೆಗೂ ಸ್ವೀಕರಿಸಿದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುವ ಮೂಲಕ ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿವೆ.
ಇದುವರೆಗೂ ಈ ಕಚೇರಿಗಳಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಿಂಚಣಿ ಸೇರಿದಂತೆ ಸಕಾಲ ಯೋಜನೆ ಅಡಿ 43 ಸೇವೆಗಳ ಒಟ್ಟು 2,614 ಅರ್ಜಿ ವಿಲೇವಾರಿ ಮಾಡಲಾಗಿದೆ.
ಅರ್ಜಿಗಳ ವಿಲೇವಾರಿ ಸೂಚ್ಯಂಕದ ಪ್ರಕಾರ ಈ ನಾಡ ಕಚೇರಿಗಳ ಸಾಧನೆ ಗುರುತಿಸಲಾಗಿದೆ.
ಕುರ್ಡಿ ನಾಡ ಕಚೇರಿ (ವಿಲೇವಾರಿ ಸೂಚ್ಯಂಕ-15.2) ರಾಜ್ಯಮಟ್ಟದಲ್ಲಿ ಪ್ರಥಮ, ಹಿರೇಕೊಟ್ನೆಕಲ್ ನಾಡ ಕಚೇರಿ (ವಿಲೇವಾರಿ ಸೂಚ್ಯಂಕ-13.2) 6ನೇ ಸ್ಥಾನ ಹಾಗೂ ಮಾನ್ವಿ ಪಟ್ಟಣದ ನಾಡ ಕಚೇರಿ (ವಿಲೇವಾರಿ ಸೂಚ್ಯಂಕ-11.44) 13ನೇ ಸ್ಥಾನ ಪಡೆದಿದೆ.
ಅರ್ಜಿಗಳ ವಿಲೇವಾರಿ ಕುರಿತು ಪ್ರತಿ ದಿನ ತಹಶೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮನ್ವಯದಿಂದ ಕೆಲಸ ಮಾಡುತ್ತಿರುವ ಕಾರಣ ಈ ಸಾಧನೆ ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಮಟ್ಟದಲ್ಲಿ ಗುರುತಿಸುವಂಥ ಸಾಧನೆ ಮಾಡಿದ್ದಕ್ಕಾಗಿ ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ತಹಶೀಲ್ದಾರ್ ಭೀಮರಾಯ ರಾಮಸಮುದ್ರ ಅವರಿಗೆ ಅಭಿನಂದನಾ ಪತ್ರ ನೀಡಿದ್ದಾರೆ.
8 ಲಕ್ಷ ಪುಟಗಳ ಡಿಜಿಟಲೀಕರಣ: ಭೂ ಸುರಕ್ಷಾ ಯೋಜನೆ ಜಾರಿಯಾದ ಆರು ತಿಂಗಳಲ್ಲಿ ಸ್ಥಳೀಯ ತಹಶೀಲ್ದಾರ್ ಕಚೇರಿಯಲ್ಲಿನ ರೈತರ ಜಮೀನಿನ ದಾಖಲೆಗಳಿಗೆ ಸಂಬಂಧಿಸಿದ 30, 130 ಫೈಲ್‌ಗಳು ಹಾಗೂ 2 ಸಾವಿರ ರಿಜಿಸ್ಟರ್ ಪುಸ್ತಕಗಳ 8,09,662 ಪುಟಗಳನ್ನು ಡಿಜಿಟಲೀಕರಣ ಮಾಡಲಾಗಿದೆ.
ನಾಡ ಕಚೇರಿಗಳಲ್ಲಿನ ತ್ವರಿತಗತಿಯ ಸೇವೆ ಹಾಗೂ ಸಾಧನೆ ಬಗ್ಗೆ ಸ್ಥಳೀಯ ಸಂಘ–ಸಂಸ್ಥೆಗಳ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾಡ ಕಚೇರಿಗಳಲ್ಲಿನ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆ ಸಹಕಾರದಿಂದ ಉತ್ತಮ ಸಾಧನೆ ಸಾಧ್ಯವಾಗಿದೆಭೀಮರಾಯ ರಾಮಸಮುದ್ರ ತಹಶೀಲ್ದಾರ್ ಮಾನ್ವಿ
ಕಂದಾಯ ಇಲಾಖೆಯ ಅಧಿಕಾರಿಗಳ ತ್ವರಿತಗತಿಯ ಸ್ಪಂದನೆ ಶ್ಲಾಘನೀಯ. ಇತರ ಇಲಾಖೆಗಳಿಗೂ ಮಾದರಿಎಚ್.ಶರ್ಪುದ್ದೀನ್ ಪೋತ್ನಾಳ ಅಧ್ಯಕ್ಷ ಸಿಐಟಿಯು ಸಂಘಟನೆ
ಇ- ಪೌತಿ ಆಂದೋಲನ
ತಾಲ್ಲೂಕಿನಲ್ಲಿ ಇದುವರೆಗೆ ತೀರಿಕೊಂಡಿರುವ 10573 ಭೂ ಮಾಲೀಕರ ಖಾತೆಗಳು ಅವರ ವಾರಸುದಾರರ ಹೆಸರಿನಲ್ಲಿ ಇನ್ನೂ ಬದಲಾವಣೆಯಾಗಿಲ್ಲ. ಆಗಸ್ಟ್ ತಿಂಗಳ ಅಂತ್ಯದ ವೇಳೆಗೆ ಅರ್ಧದಷ್ಟು ಅಥವಾ ಸುಮಾರು 3 ಸಾವಿರ ವಾರಸುದಾರರ ಹೆಸರಿಗೆ ಖಾತೆ ಬದಲಾವಣೆ ಮಾಡಿ ಪಿಎಂ- ಕಿಸಾನ್ ಯೋಜನೆ ಸೇರಿ ಮತ್ತಿತರ ಸರ್ಕಾರದ ಸವಲತ್ತುಗಳನ್ನು ಪಡೆಯುವಂತೆ ಮಾಡುವ ಗುರಿ ಹೊಂದಲಾಗಿದೆ ಎಂದು ತಹಶೀಲ್ದಾರ್ ಭೀಮರಾಯ ರಾಮಸಮುದ್ರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.