ADVERTISEMENT

ಚಿರತೆ ಸೆರೆ ವಿಫಲ: ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 13:11 IST
Last Updated 7 ನವೆಂಬರ್ 2019, 13:11 IST
 ಆದಾಪುರ ಗ್ರಾಮದ ಗುಡ್ಡದಲ್ಲಿ ಚಿರತೆ ಸೆರೆಗೆ ಆರಣ್ಯ ಇಲಾಖೆ ಬಳಸಿದ ಬೋನ್
 ಆದಾಪುರ ಗ್ರಾಮದ ಗುಡ್ಡದಲ್ಲಿ ಚಿರತೆ ಸೆರೆಗೆ ಆರಣ್ಯ ಇಲಾಖೆ ಬಳಸಿದ ಬೋನ್   

ಮುದಗಲ್: ಈಚೆಗೆ ಆದಾಪುರ, ಆಮದಿಹಾಳ, ಹೂನೂರು, ಗೀಗ್ಯನಾಯ್ಕ ತಾಂಡಾ, ಕೆಂಪು ತಿಪ್ಪಣ್ಣನ ತಾಂಡಾದಲ್ಲಿ ಪ್ರತ್ಯೇಕ್ಷವಾಗಿರುವ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹೆಜ್ಜೆ ಗುರತು ಪತ್ತೆ ಹಚ್ಚುವಲ್ಲಿ ಕಾಲ ಹರಣ ಮಾಡುತ್ತಿದ್ದಾರೆ. ಸರಿಯಾದ ಸ್ಥಳ ನೋಡಿ ಬೋನ್ ಇಡುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ಈ ಭಾಗದಲ್ಲಿ ಒಂದೆರಡು ಚಿರತೆ ಇಲ್ಲ. ಹಲವು ಚಿರತೆಗಳಿವೆ. ಇವು ಅಲ್ಲಲ್ಲಿ ಎತ್ತು, ಮೇಕೆಗಳು ಸೇರಿ ಇನ್ನಿತರ ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿವೆ. ರೈತರು ಕೃಷಿ ಚಟುವಟಿಕೆ ಮಾಡಲು ಗುಂಪಾಗಿ ದೊಣ್ಣೆ, ಕೊಡಲಿ ಸೇರಿದಂತೆ ಇನ್ನಿತರ ಆಯುಧಗಳೊಂದಿಗೆ ಹೋಗುತ್ತಿದ್ದಾರೆ.

ADVERTISEMENT

’ಚಿರತೆ ಸೆರೆ ಹಿಡಿಯಲು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಅಲ್ಲದೇ ಚಿರತೆ ಹಿಡಿಯಲು ಆಧುನಿಕ ಸಲಕರಣೆಗಳು ಇಲ್ಲ. ಕಮಲಾಪುರ ಕರಡಿಧಾಮದಿಂದ ಬೋನ್ ತರಿಸಿದ್ದೇವೆ; ಎಂದು ಅರಣ್ಯ ಇಲಾಖೆ ಅಧಿಕಾರಿ ಕಾಂಬಳೆ ತಿಳಿಸಿದರು.

ಜನರಲ್ಲಿ ಆತಂಕ ಹುಟ್ಟಿಸಿರುವ ಚಿರತೆಯಿಂದ ಮುಕ್ತಿ ನೀಡಿ ಎಂದು ಹೂನೂರು ಗ್ರಾಮಸ್ಥರು ಲಿಂಗಸುಗೂರು ಶಾಸಕ ಡಿ.ಎಸ್.ಹೂಲಗೇರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಕಾಟಾಚಾರಕ್ಕೆ ಚಿರತೆ ಸೆರೆ ಹಿಡಿಯಲು ಮುಂದಾಗಿದ್ದಾರೆ. ಸಾರ್ವಜನಿಕರು ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಜನರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.