ADVERTISEMENT

ಲಿಂಗಸುಗೂರು: ಹೆಚ್ಚುತ್ತಿದೆ ನಕಲಿ ವೈದ್ಯರ ಹಾವಳಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 7:00 IST
Last Updated 16 ಜೂನ್ 2025, 7:00 IST
ಲಿಂಗಸುಗೂರು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ
ಲಿಂಗಸುಗೂರು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ   

ಲಿಂಗಸುಗೂರು: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ನಕಲಿ ವೈದ್ಯರು, ನಕಲಿ ಕ್ಲಿನಿಕ್‌ಗಳ ಹಾವಳಿ ಮಿತಿಮೀರಿದೆ. ಮುಗ್ಧ ರೋಗಿಗಳ ಪ್ರಾಣದ ಜತೆ ನಕಲಿ ವೈದ್ಯರು ಚೆಲ್ಲಾಟ ಆಡುತ್ತಿದ್ದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಜನ ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣ ಸೇರಿ ಮುದಗಲ್, ಹಟ್ಟಿ, ಗುರುಗುಂಟಾ, ನಾಗರಾಳ, ಭೂಪುರ, ಮಾವಿನಭಾವಿ ಸೇರಿದಂತೆ ಹಳ್ಳಿ ಹಳ್ಳಿಯಲ್ಲೂ ನೂರಾರು ಸಂಖ್ಯೆಯಲ್ಲಿ ನಕಲಿ ವೈದ್ಯರು ಇದ್ದಾರೆ. ಇನ್ನೂ ಕೆಲವರು ನಕಲಿ ಪ್ರಮಾಣ ಪತ್ರ ಇಟ್ಟುಕೊಂಡು ಜನರ ಜತೆ ಚೆಲ್ಲಾಟವಾಡುತ್ತಿದ್ದಾರೆ.

ಕೆಲ ವರ್ಷದ ಹಿಂದೆ ಕಸಬಾಲಿಂಗಸುಗೂರು ಗ್ರಾಮದಲ್ಲಿ ನಕಲಿ ವೈದ್ಯ ಮಹಿಳೆಗೆ ಇಂಜೆಕ್ಷನ್ ಮಾಡಿದ್ದರಿಂದ ಆ ಮಹಿಳೆಯ ಸಾವುನ್ನಪ್ಪಿದ್ದರು. ಇಂಥ ಘಟನೆಗಳು ತಾಲ್ಲೂಕಿನ ಸಾಕಷ್ಟು ಇವೆ. ನಕಲಿ ವೈದ್ಯರು ಕೇವಲ ರೋಗಿಗಳನ್ನು ಪರೀಕ್ಷೆ ಮಾಡದೇ ಆಪರೇಷನ್, ಭ್ರೂಣ ಹತ್ಯೆ ಮಾಡುತ್ತಿದ್ದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಮೌನಕ್ಕೆ ಶರಣಾರಾಗಿದ್ದಾರೆ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಸಮಿತಿಯೂ ಮೌನ: ನಕಲಿ ವೈದ್ಯರನ್ನು ಪತ್ತೆ ಮಾಡಿ ಅವರ ವಿರುದ್ಧ ಕ್ರಮ ಜರಗಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಕ್ಷಮ ಪ್ರಾಧಿಕಾರ ರಚನೆ ಮಾಡಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ, ಸದಸ್ಯ ಕಾರ್ಯದರ್ಶಿ, ಜಿಲ್ಲಾ ಆಯುಷ್‌ ಅಧಿಕಾರಿ, ಜಿಲ್ಲಾ ಐಎಂಎ ಅಧ್ಯಕ್ಷರು, ಸ್ವಯಂ ಸೇವಾ ಸಂಸ್ಥೆಯವರು ಸದಸ್ಯರಾಗಿರುತ್ತಾರೆ. ಈ ಪ್ರಾಧಿಕಾರವು ಆಗಾಗ ಸಭೆ ಸೇರಿ ಕ್ರಮಕ್ಕೆ ಶಿಫಾರಸು ಮಾಡುತ್ತದೆ ಆದರೆ ನಕಲಿ ವೈದ್ಯರ ಬಗ್ಗೆ ಸಮಿತಿಯೂ ಮೌನಕ್ಕೆ ಶರಣಾಗಿದೆ ಎನ್ನಲಾಗಿದೆ.

ಬಾಡಿಗೆ ನೀಡುವ ಮಾಲಿಕರಿಗೆ ಸಂಕಷ್ಟ: ನಕಲಿ ವೈದ್ಯರಿಗೆ ಕೊಠಡಿ ಬಾಡಿಗೆ ನೀಡುವ ಮುನ್ನ, ಅವರ ವಿದ್ಯಾರ್ಹತೆ ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಬೇಕು. ಆರೋಗ್ಯ ಇಲಾಖೆ ನಿಯಮಗಳ ಅನ್ವಯ ನೋಂದಣಿ ಆಗಿದೆಯಾ, ನೋಂದಣಿ ಸಂಖ್ಯೆ ಏನು, ಎಂಬುದನ್ನು ತಿಳಿದುಕೊಂಡು ಬಾಡಿಗೆ ನೀಡಬೇಕು. ಇಲ್ಲದಿದ್ದರೆ ಮಾಲೀಕರೂ ಕಷ್ಟದಲ್ಲಿ ಸಿಲುಕಬೇಕಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕರ್ನಾಟಕ ಖಾಸಗಿ ವೈದ್ಯಕೀಯ ಅಧಿನಿಯಮ 2007 ಹಾಗೂ ತಿದ್ದುಪಡಿ ನಿಯಮ 2017ರ ಅನ್ವಯ ಖಾಸಗಿ ಆರೋಗ್ಯ ಸಂಸ್ಥೆಗಳು ಕಡ್ಡಾಯವಾಗಿ ಕೆಪಿಎಂಇ ನಿಯಮಾನುಸಾರ ನೋಂದಣಿ ಆಗಿರಬೇಕಾಗುತ್ತದೆ. ವೈದ್ಯರಿಗೂ ನಿಯಮ ಅನ್ವಯವಾಗುತ್ತದೆ. ಅಲೋಪತಿ ಆಸ್ಪತ್ರೆಗಳ ಫಲಕ ನೀಲಿ ಬಣ್ಣ ಹಾಗೂ ಆಯುರ್ವೇದಿಕ್‌ ಆಸ್ಪತ್ರೆಗಳ ಫಲಕ ಹಸಿರು ಬಣ್ಣದಲ್ಲಿರಬೇಕು’ ಎಂದು ತಿಳಿಸಿದರು. ಆದರೆ ನಿಯಮಕ್ಕೂ ವಾಸ್ತವಕ್ಕೂ ಸಂಬಂಧವೇ ಇಲ್ಲದಂತಾಗಿದೆ ಎಂದು ಗುರುಗುಂಟಾ ಗ್ರಾಮದ ನಾಗರಾಜ ಆರೋಪಿಸುತ್ತಾರೆ.

‘ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್ ಹಾಗೂ ಸೂಕ್ತ ವಿದ್ಯಾರ್ಹತೆಯುಳ್ಳ ವೈದ್ಯರ ಕೊರತೆ ಇರುವುದು ನಕಲಿ ವೈದ್ಯರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ಹೀಗಾಗಿ ಜನರು ಲಭ್ಯವಿರುವ ನಕಲಿ ವೈದ್ಯರ ಬಳಿ ಹೋಗುತ್ತಿದ್ದಾರೆ. ಎಲ್ಲ ಕಡೆಯೂ ನೋಂದಾಯಿತ ವೈದ್ಯರು ಇರುವಂತೆ ಆರೋಗ್ಯ ಇಲಾಖೆ ನೋಡಿಕೊಳ್ಳಬೇಕು’ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಟಿಹೆಚ್ಓಗೆ ವಾಹನವೇ ಇಲ್ಲ: ನಕಲಿ ವೈದ್ಯರ ಹಾಗೂ ನಕಲಿ ಕ್ಲಿನಿಕ್‌ಗಳ ಮೇಲೆ ದಾಳಿ ಮಾಡಬೇಕಾದ ತಾಲ್ಲೂಕು ಆರೋಗ್ಯಾಧಿಕಾರಿಗೆ ಸರ್ಕಾರಿ ವಾಹನವೇ ಇಲ್ಲ. ಗ್ರಾಮೀಣ ಭಾಗಕ್ಕೆ ಹೋಗಬೇಕಾದರೆ ಬಾಡಿಗೆ ಕಾರು ತೆಗೆದುಕೊಂಡು ಹೋಗಬೇಕು ಇಲ್ಲವೇ ಬೈಕ್ ತೆಗೆದುಕೊಂಡ ಹೋಗಬೇಕಾದ ಅನಿವಾರ್ಯತೆ ಇಲ್ಲಿನ ಆರೋಗ್ಯಾಧಿಕಾರಿಗೆ ಇದೆ.

ನಕಲಿ ವೈದ್ಯರ ಬಗ್ಗೆ ಮಾಹಿತಿ ಕಲೆ ಹಾಕಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ವರದಿ ನೀಡಲಾಗುತ್ತಿದೆ. ಈ ಹಿಂದೆಯೂ ದಾಳಿ ಮಾಡಿ ನಕಲಿ ವೈದ್ಯರ ಬಗ್ಗೆ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿತ್ತು

-ಡಾ.ಅಮರೇಶ ಪಾಟೀಲ ತಾಲ್ಲೂಕು ಆರೋಗ್ಯಾಧಿಕಾರಿ ಲಿಂಗಸುಗೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.