ಮಾನ್ವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲ್ಲೂಕಿನ ಪೋತ್ನಾಳ ಗ್ರಾಮ ಪಂಚಾಯಿತಿ ಆವರಣದಲ್ಲಿ ಖರಾಬದಿನ್ನಿ ಗ್ರಾಮದ ನೂರಾರು ನರೇಗಾ ಕೂಲಿ ಕಾರ್ಮಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
‘ಉದ್ಯೋಗ ಖಾತರಿ ನಿಯಮದಂತೆ ಶೇ50ರಷ್ಟು ಕೆಲಸ ಮಾಡಿದರೂ ಪೂರ್ಣಗೊಂಡ ಕೆಲಸದ ಶೇ100ರಷ್ಟು ಕೂಲಿ ನೀಡಬೇಕು. ಆದರೆ, ಅಧಿಕಾರಿಗಳು ಕಡಿಮೆ ಮೊತ್ತದ ಕೂಲಿ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಕಾಮಗಾರಿ ಸ್ಥಳದಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಬೇಕು’ ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಬಸವರಾಜ ಕೂಲಿಕಾರ್ಮಿಕರಿಂದ ಮನವಿ ಸ್ವೀಕರಿಸಿ, ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಬಳಿಕ ಕೂಲಿ ಕಾರ್ಮಿಕರು ಪ್ರತಿಭಟನೆಯನ್ನು ಹಿಂಪಡೆದರು.
ಖರಾಬದಿನ್ನಿ ಗ್ರಾಮದ ಕೂಲಿಕಾರ್ಮಿಕರಾದ ಮಂಜಮ್ಮ, ಮಲ್ಲಮ್ಮ, ಬಸಮ್ಮ, ಶಾಂತಮ್ಮ, ಯಲ್ಲಮ್ಮ, ಸಿದ್ದಮ್ಮ, ಜಲಾಲ್‌ಬಿ, ಶಿವಮ್ಮ, ಮೂಕಮ್ಮ, ನಾಗರಾಜ, ಅಮರೇಶ ಜೇಡಿ, ಅಯ್ಯಪ್ಪ, ಮಹಾಂತೇಶ, ಸತೀಶ, ಗಾದಿಲಿಂಗಪ್ಪ, ಹಂಪಯ್ಯ ಬಾದರ್ಲಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.