ADVERTISEMENT

ಒಳಚರಂಡಿ, ನೀರಿನ ಕಾಮಗಾರಿ ಮುಗಿಸಿ

ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 12:45 IST
Last Updated 11 ಸೆಪ್ಟೆಂಬರ್ 2020, 12:45 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ಶುಕ್ರವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದರು
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ಶುಕ್ರವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದರು   

ರಾಯಚೂರು: ಒಳಚರಂಡಿ ಹಾಗೂ ಕುಡಿಯುವ ನೀರು ಪೂರೈಸುವ ಕಾಮಗಾರಿಗಳು ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಕೂಡಲೇ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಇದಕ್ಕಾಗಿ ಬೆಂಗಳೂರಿನ ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರನ್ನು ಪಾಲೋಪ್‌ ಮಾಡಲು ನೇಮಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಯಚೂರು ನಗರಕ್ಕೆ ನೀರು ಸರಬರಾಜು ಮಾಡಲು ಕೃಷ್ಣಾನದಿ ಪಕ್ಕದಲ್ಲಿ ನಿರ್ಮಿಸಿದ ಜಾಕ್ವೆಲ್‌ನಲ್ಲಿ ₹2 ಕೋಟಿ ವೆಚ್ಚದ ಎರಡು ಯಂತ್ರಗಳನ್ನು ಅಳವಡಿಸಿದ್ದು, ಚಿಕ್ಕಸುಗೂರಿನಲ್ಲಿ ನೀರು ಶುದ್ಧೀಕರಣ ಘಟಕ ಸೇರಿ ಉದ್ಘಾಟಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಯಚೂರಿಗೆ ಮತ್ತೆ ಭೇಟಿ ನೀಡಿದಾಗ ಬದಲಾವಣೆ ಕಾಣಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

2009 ರಲ್ಲಿ ಆರಂಭಿಸಿರುವ ಸಿದ್ರಾಂಪುರ ಬಡಾವಣೆ ಅಭಿವೃದ್ಧಿಯನ್ನು ಕೂಡಲೇ ಪೂರ್ಣಗೊಳಿಸಬೇಕು. ಗುಡ್ಡದ ಮೇಲಿರುವ ಜಮೀನಿಗೆ ಸಂಬಂಧಿಸಿದಂತೆ ತಾಂತ್ರಿಕ ಸಮಸ್ಯೆ ಏನೇ ಇದ್ದರೂ ಜನರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದರು.

ಸಚಿವನಾಗಿ ನಾಲ್ಕು ತಿಂಗಳಾಯಿತು. 60 ದಿನಗಳು ಲಾಕ್‌ಡೌನ್‌ ಇತ್ತು. ಇನ್ನೆರೆಡು ತಿಂಗಳುಗಳಿಂದ ರಾಜ್ಯದ ಎಲ್ಲ ಜಿಲ್ಲೆಗಳನ್ನು ಸುತ್ತಿದ್ದೇನೆ. ರಾಯಚೂರಿನ ಸಮಸ್ಯೆಗಳು ಈಗ ಅರಿವಿಗೆ ಬಂದಿದ್ದು, ಸದ್ಯಕ್ಕೆ ಕೆರೆ ಅಭಿವೃದ್ಧಿಗಾಗಿ ₹10 ಕೋಟಿ ವೆಚ್ಚ ಮಾಡಲಾಗುತ್ತಿದೆ. ಸೌಲಭ್ಯಗಳ ಅಭಿವೃಧ್ಧಿಗೆ ಮತ್ತಷ್ಟು ಅನುದಾನ ನೀಡಲಾಗುವುದು ಎಂದು ತಿಳಿಸಿದರು.

ನಿಜಲಿಂಗಪ್ಪ ಕಾಲೋನಿಯಲ್ಲಿ ಒಂದೇ ಉದ್ಯಾನವನ್ನು ಅಭಿವೃದ್ಧಿ ಮಾಡಲು ಎರಡು ಕಡೆಗಳಿಂದ ಅನುದಾನ ಬಳಸಲಾಗಿತ್ತು. ಕಾಮಗಾರಿ ವಿಳಂಬವಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ ಎಲ್ಲ ಪಟ್ಟಣಗಳಲ್ಲಿ ಒಳಚರಂಡಿ ಹಾಗೂ ಕುಡಿಯುವ ನೀರು ಒದಗಿಸಲು ಸಮಗ್ರ ಯೋಜನೆ ರೂಪಿಸುವಂತೆ ತಿಳಿಸಲಾಗಿದೆ ಎಂದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ನಗರದ ವಿವಿಧ ವಾರ್ಡ್‌ಗಳಲ್ಲಿ ಮೂಲ ಸೌಕರ್ಯಕ್ಕಾಗಿ ₹120 ಕೋಟಿ ಅನುದಾನ ಬಂದಿದೆ. ಎಸ್‌ಎಫ್‌ಸಿ ಅನುದಾನವನ್ನು ಜಿಲ್ಲಾಧಿಕಾರಿ ಒದಗಿಸಿದ್ದಾರೆ. ಹಾಳಾಗಿರುವ ರಸ್ತೆಗಳ ಪಟ್ಟಿ ಮಾಡಿಕೊಂಡು ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯಯೋಜನೆ ರೂಪಿಸಬೇಕು. ನಿರಂತರ ನೀರು ಯೋಜನೆ ಗುತ್ತಿಗೆ ಪಡೆದಿರುವ ಕೋಲ್ಕತ್ತಾ ಕಂಪೆನಿಯಿಂದಲೇ ಸಮಸ್ಯೆ ಅಗುತ್ತಿದೆ. ಯುದ್ಧೋಪಾದಿಯಲ್ಲಿ ನಿರಂತರ ನೀರು ಪೂರೈಸುವ ಯೋಜನೆ ಪೂರ್ಣಗೊಳಿಸಬೇಕು ಎಂದರು.

‘ರಾಯಚೂರಿನಲ್ಲಿ ಡಿಸೆಂಬರ್‌ ಅಂತ್ಯದೊಳಗೆ 10 ವಲಯಗಳಿಗೆ ನಿರಂತರ ನೀರು ಆರಂಭಿಸಲಾಗುವುದು. ಮುಂದಿನ ವರ್ಷ ಮಾರ್ಚ್‌ ಒಳಗಾಗಿ ಒಟ್ಟು 28 ವಲಯಗಳಿಗೆ ನೀರು ಆರಂಭಿಸಲಾಗುವುದು. ಗಣೇಶ ಹಬ್ಬಕ್ಕಾಗಿ ಹೋಗಿರುವ ಕಾರ್ಮಿಕರು ವಾಪಸಾಗುತ್ತಿದ್ದು, ಎಡೆಬಿಡದೆ ಕೆಲಸ ನಡೆಯಲಿದೆ’ ಎಂದು ಕೆಯುಐಡಿಎಫ್‌ಸಿ ಎಂಜಿನಿಯರ್‌ ಸಭೆಗೆ ತಿಳಿಸಿದರು.

ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.