ADVERTISEMENT

ಎಸಿ, ಕೂಲರ್‌ಗಳಿಗೆ ಹೆಚ್ಚಿದ ಬೇಡಿಕೆ

ಬಿಸಿಲು ಹೆಚ್ಚಾಗುತ್ತಿದ್ದಂತೆ ತಂಪು ಸುಸೂವ ಯಂತ್ರಗಳ ಮೊರೆ ಹೋದ ಜನರು

ನಾಗರಾಜ ಚಿನಗುಂಡಿ
Published 17 ಮಾರ್ಚ್ 2019, 14:31 IST
Last Updated 17 ಮಾರ್ಚ್ 2019, 14:31 IST
ರಾಯಚೂರಿನ ಎಲೆಕ್ಟ್ರಾನಿಕ್ಸ್‌ ಮಳಿಗೆಯೊಂದರಲ್ಲಿ ರಾಶಿ ಹಾಕಿರುವ ಕೂಲರ್‌ಗಳ ದರವನ್ನು ಜನರು ವಿಚಾರಿಸುತ್ತಿರುವುದು
ರಾಯಚೂರಿನ ಎಲೆಕ್ಟ್ರಾನಿಕ್ಸ್‌ ಮಳಿಗೆಯೊಂದರಲ್ಲಿ ರಾಶಿ ಹಾಕಿರುವ ಕೂಲರ್‌ಗಳ ದರವನ್ನು ಜನರು ವಿಚಾರಿಸುತ್ತಿರುವುದು   

ರಾಯಚೂರು: ದಿನದಿನಕ್ಕೆ ಹೆಚ್ಚುತ್ತಿರುವ ಬೇಸಿಗೆ ಸಹಿಸಿಕೊಳ್ಳಲುಜನರು ಹವಾನಿಯಂತ್ರಕ (ಎಸಿ), ಕೂಲರ್‌, ಫ್ಯಾನ್‌ ಸೇರಿದಂತೆ ತಂಪು ಸೂಸುವ ಯಂತ್ರಗಳ ಖರೀದಿಗೆ ಧಾವಿಸುತ್ತಿದ್ದಾರೆ.

ಬೇಸಿಗೆಯಲ್ಲಿ ಬೇಡಿಕೆ ಹೆಚ್ಚುತ್ತದೆ ಎಂಬುದನ್ನು ಮನಗಂಡು ಮಳಿಗೆದಾರರು ಲಾರಿಗಟ್ಟಲೇ ಹೊಸ ಉಪಕರಣಗಳ ರಾಶಿ ಸಂಗ್ರಹಿಸಿದ್ದಾರೆ. ನಗರದ ಎಲೆಕ್ಟ್ರಾನಿಕ್ಸ್‌ ಮತ್ತು ಎಲೆಕ್ಟ್ರಿಕಲ್ಸ್‌ ಮಳಿಗೆಗಳ ಎದುರು ಹೊಸ ಉಪಕರಣಗಳ ರಾಶಿ ಗಮನ ಸೆಳೆಯುತ್ತಿದೆ. ಸ್ಟೇಷನ್‌ ರಸ್ತೆ, ಚಂದ್ರಮೌಳೇಶ್ವರ ವೃತ್ತ, ಗಂಜ್‌ ವೃತ್ತ, ಬಸವನಬಾವಿ ಚೌಕ್‌ ಮತ್ತು ಸೂಪರ್‌ ಮಾರ್ಕೆಟ್‌ನಲ್ಲಿ ವಿಶೇಷ ಮಳಿಗೆಗಳಿವೆ.ಖರೀದಿಗಾಗಿ ಜನರೂ ಮುಗಿಬೀಳುತ್ತಿರುವುದು ಸಾಮಾನ್ಯ ದೃಶ್ಯ.

ದೊಡ್ಡ ಮಳಿಗೆದಾರರು ಮಾಸಿಕ ಕಂತುಗಳಲ್ಲಿ ರೆಫ್ರಿಜಿರೇಟರ್‌ ಹಾಗೂ ಎಸಿ ಮಾರಾಟ ಘೋಷಿಸಿದ್ದಾರೆ. ವಿಶೇಷ ರಿಯಾಯಿತಿ ಕೂಡಾ ಇದೆ. ದೀರ್ಘಾವಧಿ ಬಾಳಿಕೆ ಬಗ್ಗೆ ಯೋಚಿಸುವವರು ಬ್ರ್ಯಾಂಡೆಡ್‌ ಕೂಲರ್‌ಗಳ ಮೊರೆ ಹೋಗುತ್ತಿದ್ದಾರೆ. ಮನೆಯೆಲ್ಲ ತಂಪು ಗಾಳಿ ಹೊಮ್ಮಿಸುವ ಕೂಲರ್‌ ಬೇಕು ಎಂದು ಸ್ಥಳೀಯ ಕೂಲರ್‌ಗಳನ್ನು ಖರೀದಿಸುವವರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ADVERTISEMENT

ಚಂದ್ರಮೌಳೇಶ್ವರ್‌ ವೃತ್ತದಿಂದ ಗಂಜ್‌ ಮಾರ್ಗದಲ್ಲಿ ಎಲೆಕ್ಟ್ರಾನಿಕ್‌ ಮಳಿಗೆಗಳುಹೆಚ್ಚಿನ ಸಂಖ್ಯೆಯಲ್ಲಿವೆ. ಇಲ್ಲಿಗೆ ಗ್ರಾಮೀಣ ಭಾಗದ ಜನರು ಕೂಲರ್‌ ಖರೀದಿಸಲು ಬರುತ್ತಾರೆ. ಹೀಗಾಗಿ ರಸ್ತೆಯುದ್ದಕ್ಕೂ ಮಳಿಗೆಗಳ ಎದುರು ಕೂಲರ್‌ ಪೆಟ್ಟಿಗೆಗಳ ಸಾಲು ಗಮನ ಸೆಳೆಯುತ್ತದೆ. ಕನಿಷ್ಠ ದರ ₹ ಸಾವಿರದಿಂದ ₹15 ಸಾವಿರವರೆಗೂ ಕೂಲರ್‌ಗಳು ಮಾರಾಟ ದರವಿದೆ.

‘ರಾಯಚೂರಿನಲ್ಲಿ ಪ್ರತಿವರ್ಷ ಬಿಸಿಲು ಹೆಚ್ಚಾಗಿಯೇ ಇರುತ್ತದೆ. ಅದರಲ್ಲೇನು ವಿಶೇಷ ಇರುವುದಿಲ್ಲ. ಕೂಲರ್‌, ಫ್ಯಾನ್‌ ಮತ್ತು ಎಸಿಗಳನ್ನು ಖರೀದಿಸುವುದು, ದುರಸ್ತಿ ಮಾಡಿಸುವುದು ಯಾವಾಗಲೂ ಇರುತ್ತದೆ. ಇದಕ್ಕಾಗಿಯೇ ಹೆಚ್ಚು ಹಣ ವೆಚ್ಚವಾಗುತ್ತದೆ. ಸ್ಥಳೀಯ ಜನರಿಗೆ ಇದೆಲ್ಲವೂ ರೂಢಿಯಾಗಿದೆ. ಈ ವರ್ಷ ಬೇಸಿಗೆ ಫೆಬ್ರುವರಿಯಲ್ಲೇ ಶುರವಾಗಿರುವುದರಿಂದ ಎಲೆಕ್ಟ್ರಾನಿಕ್‌ ವಸ್ತುಗಳು ಹೆಚ್ಚು ಮಾರಾಟ ಆಗುತ್ತಿವೆ’ ಎಂದು ಎಲೆಕ್ಟ್ರಾನಿಕ್‌ ಉಪಕರಣಗಳನ್ನು ದುರಸ್ತಿ ಮಾಡುವ ಮೆಹಬೂಬ್‌ ಹೇಳಿದರು.

‘ರಾಯಚೂರಿಗೆ ಹೊರಗಿನಿಂದ ಬಂದವರು ಬಿಸಿಲಿಗೆ ಹೊಂದಿಕೊಳ್ಳಲು ಪ್ರಾಯಾಸ ಪಡಬೇಕು. ಮನೆಯನ್ನು ತಂಪು ಇಟ್ಟುಕೊಳ್ಳುವುದಕ್ಕೆ ಒಂದಿಷ್ಟು ಉಪಕರಣಗಳನ್ನು ಖರೀದಿಸಬೇಕು. ಹೊರಗಡೆ ಹೋದಾಗ ಬಿಸಿಲಿನ ಸಂಕಷ್ಟ ಸಹಿಸಿಕೊಳ್ಳುವುದಕ್ಕೂ ಕೂಲಿಂಗ್‌ ಗ್ಲಾಸ್‌, ಸನ್‌ಕ್ರಿಮ್‌ ಎಂದು ಖರ್ಚು ಮಾಡಬೇಕು. ಪ್ರತಿ ತಿಂಗಳು ಬೇಸಿಗೆಗಾಗಿ ಒಂದಿಷ್ಟು ವೆಚ್ಚ ಮಾಡಲೇಬೇಕು. ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕಾಗುತ್ತದೆ. ಮಕ್ಕಳಿಗೆ ಐಸ್‌ಕ್ರಿಮ್‌ ಕೊಡಿಸಬೇಕು. ಬೇಸಿಗೆ ಪ್ರದೇಶದಲ್ಲಿ ಇದೆಲ್ಲವೂ ಸಾಮಾನ್ಯ ಎಂದು ತಿಳಿದುಕೊಂಡಿದ್ದೇವೆ’ ಎಂದು ಆರ್‌ಪಿಟಿಎಸ್‌ ಎಂಜಿನಿಯರಿಂಗ್‌ ವಿಭಾಗದಲ್ಲಿರುವ ಬಸವರಾಜ ಅವರು ಹೇಳುವ ಮಾತುಗಳಿವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.