ಮುದಗಲ್: ಪಟ್ಟಣದ ನಿವಾಸಿಗಳಿಗೆ ಕುಡಿಯಲು ಹಾಗೂ ಬಳಕೆಗೆ 16 ದಿನಕ್ಕೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತಿದ್ದು ಜನ ಪರದಾಡುತ್ತಿದ್ದಾರೆ.
ಪಟ್ಟಣದ 6 ಚದುರ ಕಿ.ಮೀ ವಿಸ್ತೀರ್ಣದಲ್ಲಿ 23 ವಾರ್ಡ್‌ಗಳಿವೆ. 35,731ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಪಟ್ಟಣಕ್ಕೆ ನಾರಾಯಣಪುರ ಜಲಾಶಯದ ಹಿನ್ನಿರಿನಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಪಟ್ಟಣದಲ್ಲಿ 2 ನೀರಿನ ಟ್ಯಾಂಕ್‌ಗಳಿವೆ. 1 ದುರಸ್ತಿ ಹಂತದಲ್ಲಿವೆ. 16 ದಿನಕ್ಕೆ ಒಮ್ಮೆ ನೀರು ಪೂರೈಕೆಯಾಗುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ನೀರು ದೊರೆಯುತ್ತಿಲ್ಲ.
‘16 ದಿನಕ್ಕೆ ಒಮ್ಮೆ ನೀರು ಬಿಡುವುದರಿಂದ ಬ್ಯಾರಲ್, ಕೊಡ, ಹಂಡೆ ಸೇರಿ ಇನ್ನಿತರ ವಸ್ತುಗಳಲ್ಲಿ ನೀರು ಸಂಗ್ರಹಿಸಿ ಇಟ್ಟಕೊಂಡು ಕುಡಿಯುತ್ತಿದ್ದಾರೆ. 2 ವಾರದ ನೀರು ಕುಡಿಯುವುದರಿಂದ ಬೇದಿ, ಹೊಟ್ಟೆ ನೋವು ಸೇರಿದಂತೆ ಇನ್ನಿತರ ರೋಗಗಳು ಕಾಣಿಸಿಕೊಳ್ಳುತ್ತಿವೆ’ ಎಂದು ಪುರಸಭೆ ಮಾಜಿ ಸದಸ್ಯ ಪೌಲರಾಜ್ ಎಮ್ಮಿ ದೂರಿದರು.
ಪಟ್ಟಣದ ಸುತ್ತಲಿನ ಕೆ.ಮರಿಯಮ್ಮನ ಹಳ್ಳಿ, ಕನಸಾವಿ, ಆಶಿಹಾಳ, ಆಶಿಹಾಳ ತಾಂಡಾ, ಹಾಲವರ್ತಿತಾಂಡಾ, ಅಡವಿಭಾವಿ, ಆರ್ಯಭೋಗಾಪುರ, ವ್ಯಾಕರನಾಳ, ಹೆಗ್ಗಾಪುರ ತಾಂಡಾ, ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದರಿಂದ ಗ್ರಾಮಗಳಲ್ಲಿರುವ ಖಾಸಗಿ ವ್ಯಕ್ತಿಗಳ ಜಮೀನಿನಲ್ಲಿರುವ ಕೊಳವೆಬಾವಿಗಳನ್ನು ಬಾಡಿಗೆ ತೆಗೆದುಕೊಂಡು ನೀರು ಪೂರೈಕೆ ಮಾಡಲಾಗುತ್ತಿದೆ.
ಕನ್ನಾಪುರ ಹಟ್ಟಿ, ಆಶಿಹಾಳ ತಾಂಡಾ, ಪಿಕ್ಕಳಿಹಾಳ ಸೇರಿದಂತೆ ಇನ್ನಿತರ ಕಡೆಯ ಆರ್‌ಒ ಪ್ಲಾಂಟ್‌ಗಳು ಬಂದ್ ಆಗಿವೆ. ಕೆಲ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳು ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ಮಿಸಿ, ವಾಹನಕ್ಕೆ ನೀರಿನ ಟ್ಯಾಂಕ್ ಅಳವಡಿಸಿ, ಮನೆಮನೆಗೆ ತೆರಳಿ ದುಬಾರಿ ಹಣಕ್ಕೆ ನೀರು ಪೂರೈಕೆ ಮಾಡುತ್ತಿದ್ದಾರೆ. ಇನ್ನೂ ಕೆಲ ಗ್ರಾಮದ ಜನರಿಗೆ ಅಶುದ್ಧ ನೀರೇ ಗತಿಯಾಗಿದೆ.
ಪಟ್ಟಣಕ್ಕೆ ನಿರಂತರ ನೀರು ಸರಬರಾಜು ಯೋಜನೆ ರೂಪಿಸಿ, ₹31.29 ಕೋಟಿಗಳಲ್ಲಿ ಕಾಮಗಾರಿ ಆರಂಭಿಸಲಾಗುತ್ತು. ಕಾಮಗಾರಿಯ ಗುತ್ತಿಗೆಯನ್ನು ಹೈದರಾಬಾದ್ ಮೂಲದ ಎ.ಎಸ್.ಆರ್. ಕಂಪನಿ ಪಡೆಯಿತು. ಕಳಪೆಯಾಗಿ ಮತ್ತು ಆಮೆಗತಿಯಲ್ಲಿ ಕಾಮಗಾರಿ ಮಾಡುತ್ತಿದ್ದರಿಂದ ರದ್ದು ಪಡಿಸಲಾಗಿದೆ. ಮರು ಟೆಂಡರ್‌ಗಾಗಿ ₹44 ಕೋಟಿ ಅನುದಾನ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕಾಮಗಾರಿ ಪೂರ್ಣಗೊಳಿಸುವ ಕಡೆ ಶಾಸಕ ಮಾನಪ್ಪ ವಜ್ಜಲ ಗಮನ ಹರಿಸುತ್ತಿಲ್ಲ. ಇದ್ದ ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದೆ, ಮುದಗಲ್ ಪುರಸಭೆ ಅಮೃತ ಯೋಜನೆ ಒಳಪಡಿಸಿ ನೀರಿನ ಸೌಲಭ್ಯ ಕಲ್ಪಿಸುತ್ತೇನೆ ಎಂದು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಕಾಮಗಾರಿ ಪೂರ್ಣಗೊಳಿಸಲು ಶಾಸಕರಿಗೆ ಇಚ್ಛಾಶಕ್ತಿ ಕೊರತೆ ಇದೆ ಎಂದು ಸಾರ್ವಜನಿಕರ ದೂರು.
ಪಟ್ಟಣದ ಕುಡಿವ ನೀರಿಗಾಗಿ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಸಂದರ್ಭದಲ್ಲಿ ಆಗನ ಶಾಸಕ ಡಿ.ಎಸ್.ಹೂಲಗೇರಿ ಹಾಗೂ ಈಗಿನ ಶಾಸಕ ಮಾನಪ್ಪ ವಜ್ಜಲ ಅವರು ಬಹಿರಂಗ ವೇದಿಕೆಯಲ್ಲೇ ಗಲಾಟೆ ಮಾಡಿಕೊಂಡಿದ್ದರು. ಕುಡಿಯುವ ನೀರು ನೀಡುವಲ್ಲಿ ಶಾಸಕ ಡಿ.ಎಸ್. ಹೂಲಗೇರಿ ವಿಫಲರಾಗಿದ್ದಾರೆ ಎಂದು ಆರೋಪ ಮಾಡಿದ್ದರು. ಇದರಿಂದ ಇಬ್ಬರ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಈಗ ಮಾನಪ್ಪ ವಜ್ಜಲ ಶಾಸಕರಾಗಿ ಎರಡು ವರ್ಷ ಕಳೆದರು, ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ತರಕಾರಿ ಮಾರುಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ನೀರಿನ ಟ್ಯಾಂಕ್ ಅರ್ಧಕ್ಕೆ ನಿಂತಿದೆ. ನಿರಂತರ ಕುಡಿಯುವ ನೀರಿನ ಯೋಜನೆಗೆ ತಂದ ಪೈಪ್‌ಗಳು ಮಾನ್ವಿ–ರಾಮದುರ್ಗ ರಸ್ತೆ ಬದಿಯಲ್ಲಿ ಬಿದ್ದಿವೆ. ಪಟ್ಟಣದಲ್ಲಿ ಪೈಪ್ ಲೈನಿಂಗ್ ತಗೆದ ತೆಗ್ಗು ಕೆಲ ಕಡೆ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.