ADVERTISEMENT

‘ನೋಟು ಹಂಚಿದ್ದು ಭಕ್ತರ ಹರಕೆ’

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 20:00 IST
Last Updated 23 ಆಗಸ್ಟ್ 2019, 20:00 IST

ರಾಯಚೂರು: ‘ಮಂತ್ರಾಲಯದಲ್ಲಿ ಈಚೆಗೆ ನಡೆದ ರಾಯರ ಆರಾಧನೆಯ ಮಹಾರಥೋತ್ಸವ ದಿನದಂದು ₹ 100ರ ಮುಖಬೆಲೆ ನೋಟುಗಳನ್ನುಪೀಠಾಧಿಪತಿ ಸುಬುಧೇಂದ್ರ ತೀರ್ಥರು ತೂರಿದ್ದು, ಇದರಿಂದ ನೂಕುನುಗ್ಗಲು ಉಂಟಾಗಿ ಜನರು ತೊಂದರೆ ಅನುಭವಿಸಿದ್ದಾರೆ.

ಮಂತ್ರಾಲಯ ಶಾಸಕ ಬಾಲನಾಗಿರೆಡ್ಡಿ ಕುಟುಂಬವೂ ನೂಕುನುಗ್ಗಲಿಗೆ ಒಳಗಾಗಬೇಕಾಯಿತು' ಎಂದುಮಂತ್ರಾಲಯದ ನಾರಾಯಣ ಎನ್ನುವವರು ಮಂತ್ರಾಲಯ ಪೊಲೀಸ್‌ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ.

ಆದರೆ, ಪೊಲೀಸರು ದೂರು ದಾಖಲಿಸಿಕೊಂಡಿಲ್ಲ.

ADVERTISEMENT

‘ಇದು ಸುಳ್ಳು ಆರೋಪದಿಂದ ಕೂಡಿರುವ ದೂರಾಗಿದೆ. ರಥೋತ್ಸವ ದಿನದಂದು ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಮೂರು ರಾಜ್ಯಗಳ ಮಾಧ್ಯಮ ಪ್ರತಿನಿಧಿಗಳು ಕೂಡಾ ಅಲ್ಲಿದ್ದರು. ದೂರಿನಲ್ಲಿ ತಿಳಿಸಿರುವಂತೆ ಯಾವುದೇ ನೂಕುನುಗ್ಗಲು ಆಗಿಲ್ಲ. ಶ್ರೀಗಳು ನೂರು ಮುಖಬೆಲೆಯ ಕೆಲವು ನೋಟುಗಳನ್ನು ಭಕ್ತರಿಗೆ ಕೊಟ್ಟಿದ್ದನ್ನು ಎಲ್ಲರೂ ನೋಡಿದ್ದಾರೆ’ ಎಂದು ಮಂತ್ರಾಲಯ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಕೃಷ್ಣಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಮಠದ ಹೇಳಿಕೆ: ‘ಭಕ್ತರೊಬ್ಬರು ಹರಕೆಗಾಗಿ ಹಂಚುವಂತೆ ಕೊಟ್ಟಿದ್ದ ₹ 100 ಮುಖಬೆಲೆಯ ನೋಟುಗಳನ್ನು ಶ್ರೀಗಳು ಹಂಚುವುದಕ್ಕೆ ಯತ್ನಿಸಿದ್ದಾರೆ. ಆದರೆ, ಜನಸಂದಣಿಯಾಗಬಹುದು ಎಂಬುದನ್ನು ಅರಿತು ಕೂಡಲೇ ಇದನ್ನು ಕೈಬಿಟ್ಟಿರುವುದನ್ನು ಭಕ್ತ ಸಮೂಹ ನೋಡಿದೆ. ನೂಕುನುಗ್ಗಲು ಆಗಿದೆ ಎಂಬುದು ಸತ್ಯವಲ್ಲ, ಇದರಲ್ಲಿ ದುರುದ್ದೇಶವಿದೆ’ಎಂದು ಮಠದ ಆಡಳಿತ ವ್ಯವಸ್ಥಾಪಕ ಎಸ್‌.ಕೆ. ಶ್ರೀನಿವಾಸ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.