ADVERTISEMENT

ಸರ್ಕಾರದ ನೆರವಿಗೆ ಕಾದಿರುವ ರೈತರು

ಬ್ಯಾಕ್ಟೇರಿಯಲ್‍, ವೈರಸ್‍ ರೋಗಗಳಿಂದ ತತ್ತರಿಸಿದ ದಾಳಿಂಬೆ ಬೆಳೆಗಾರ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 18 ನವೆಂಬರ್ 2020, 15:47 IST
Last Updated 18 ನವೆಂಬರ್ 2020, 15:47 IST
ಲಿಂಗಸುಗೂರು ತಾಲ್ಲೂಕಿನ ಕಸಬಾಲಿಂಗಸುಗೂರಿನ ರೈತ ಮಹಾದೇವಯ್ಯ ಗೌಡೂರು ಜಮೀನದಲ್ಲಿ ಫಸಲಿಗೆ ಬಿಟ್ಟ ದಾಳಿಂಬೆ ಗಿಡಗಳು ಒಣಗುತ್ತಿರುವುದನ್ನು ತೋರಿಸಿದರು
ಲಿಂಗಸುಗೂರು ತಾಲ್ಲೂಕಿನ ಕಸಬಾಲಿಂಗಸುಗೂರಿನ ರೈತ ಮಹಾದೇವಯ್ಯ ಗೌಡೂರು ಜಮೀನದಲ್ಲಿ ಫಸಲಿಗೆ ಬಿಟ್ಟ ದಾಳಿಂಬೆ ಗಿಡಗಳು ಒಣಗುತ್ತಿರುವುದನ್ನು ತೋರಿಸಿದರು   

ಲಿಂಗಸುಗೂರು:ತಾಲ್ಲೂಕಿನಲ್ಲಿ ದಾಳಿಂಬೆ, ಪಪ್ಪಾಯಿ, ಕಬ್ಬು, ದ್ರಾಕ್ಷಿಯಂತಹ ತೋಟಗಾರಿಕೆ ಬೆಳೆಗಳನ್ನು ರೈತರು ಪೈಪೋಟಿಯಿಂದ ಬೆಳೆದಿದ್ದಾರೆ. ಇದೀಗ ಅತಿಯಾದತೇವಾಂಶದಿಂದಾಗಿ ದಾಳಿಂಬೆ ಗಿಡಗಳು ಒಣಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಸರ್ಕಾರದಿಂದ ಏನಾದರೂ ಪರಿಹಾರ ದೊರಕಬಹುದು ಎಂದು ರೈತರು ಕಾಯುತ್ತಿದ್ದಾರೆ.

ದಾಳಿಂಬೆಗೆ ಬ್ಯಾಕ್ಟೇರಿಯಾ, ವೈರಸ್‍ ಹಾವಳಿ, ದುಂಡಾಣು ಮತ್ತು ಕಾಯಿಕೊರಕ ರೋಗ ಕಾಣಿಸಿಕೊಂಡಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿರುವ ರೈತರು ನಷ್ಟದ ಭೀತಿಯಲ್ಲಿ ಮುಳುಗಿದ್ದಾರೆ. ತೋಟಗಾರಿಕೆ, ರೇಷ್ಮೆ, ಕೃಷಿ ಇಲಾಖೆಗಳು ರೈತರ ಆರ್ಥಿಕ ಸ್ವಾವಲಂಬನೆಗೆ ಪೂರಕವಾಗಿ ಮಾರ್ಗದರ್ಶನ ನೀಡುತ್ತ ಬಂದಿವೆ. ಇದೀಗ ಸಂಕಷ್ಟದಲ್ಲಿರುವ ರೈತರ ನೆರವಿಗೆ ಇಲಾಖೆಗಳು ಮುಂದಾಗದಿರುವುದು ರೈತರನ್ನು ಸಾಲದ ಬಾಧೆಗೆ ತಳ್ಳುವಂತಾಗಿದೆ.

ತಾಲ್ಲೂಕಿನ ಕಸಬಾಲಿಂಗಸುಗೂರು, ನೀರಲಕೇರಿ, ಯಲಗಲದಿನ್ನಿ, ಯರಗೋಡಿ, ಕಡದರಗಡ್ಡಿ, ಈಚನಾಳ, ಮಾವಿನಭಾವಿ, ಗುರುಗುಂಟಾ ಸೇರಿದಂತೆ ತಾಲ್ಲೂಕಿನಾದ್ಯಂತ 2,500 ಹೆಕ್ಟೇರ್‍ ಪ್ರದೇಶಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ 765ಕ್ಕೂ ಹೆಚ್ಚು ರೈತರು ದಾಳಿಂಬೆ ಬೆಳೆ ನಾಟಿ ಮಾಡಿಕೊಂಡಿದ್ದಾರೆ. ರೋಗಬಾಧೆ ಕಾರಣದಿಂದ ಎರಡು ವರ್ಷಗಳಿಂದ ನಿರೀಕ್ಷಿತ ಲಾಭ ಸಿಗದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ.

ADVERTISEMENT

ಈ ವರ್ಷ ಅತಿವೃಷ್ಟಿಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಿದೆ. ಇದರಿಂದ ಬ್ಯಾಕ್ಟೇರಿಯಲ್‍ ಮತ್ತು ವೈರಸ್‍ ಸೋಂಕು ಹರಡಿದ್ದು ಬೆಳೆದು ನಿಂತ ಗಿಡಗಳು ಹಂತ ಹಂತವಾಗಿ ಒಣಗುತ್ತಿವೆ. ಹಣ್ಣಿಗೆ ಬಿಟ್ಟಿದ್ದ ಗಿಡಗಳಲ್ಲಿನ ಕಾಪು ಉಳಿಯದಂತೆ ನೆಲಕಪ್ಪಳಿಸಿದೆ. ಕೃಷಿ ತಜ್ಞರು, ಕೀಟ ತಜ್ಞರನ್ನು ರೈತರು ಸಂಪರ್ಕಿಸಿದ್ದಾರೆ. ಆದರೆ ಈ ಹಂತದಲ್ಲಿ ಏನು ಮಾಡಲು ಸಾಧ್ಯವಿಲ್ಲ ಎನ್ನುವ ಪ್ರತಿಕ್ರಿಯೆ ಸಿಕ್ಕಿದೆ. ಒಣಗುತ್ತಿರುವ ಗಿಡ ಕಿತ್ತು ಹಾಕಿ ರೋಗ ಹರಡದಂತೆ ಮುಂಜಾಗ್ರತೆ ವಹಿಸುವಂತೆ ಸೂಚಿಸಿದ್ದಾರೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

‘ಕಳೆದ ವರ್ಷ ದುಂಡಾಣು ಮತ್ತು ಕಾಯಿ ಕೊರಕರೋಗದಿಂದ ಬೆಳೆ ವಂಚಿತರಾಗಿದ್ದೇವು. ಈ ವರ್ಷ ಅತಿಯಾದ ಮಳೆಯೇ ಶಾಪವಾಗಿದೆ. ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದು ಬ್ಯಾಕ್ಟೇರಿಯಲ್‍ ಮತ್ತು ಸಿಜೇರಿಯಮ್‍ ವೆಲ್ಟ ಆವರಿಸಿಕೊಂಡಿದ್ದು ಕಾಪು ಸಂಪೂರ್ಣ ಹಾಳಾಗಿದೆ. 3000 ಗಿಡಗಳಲ್ಲಿ ಈಗಾಗಲೆ 300ಕ್ಕೂ ಹೆಚ್ಚು ಗಿಡಗಳು ಒಣಗಿವೆ. ರೋಗದಿಂದ ತಜ್ಞರು ಕೂಡ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು’ ಎಂದು ರೈತ ಮಹಾದೇವಯ್ಯ ಗೌಡೂರು ಕೋರಿದರು.

ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಯೋಗೇಶ್ವರ ಈ ಕುರಿತು ಪ್ರತಿಕ್ರಿಯೆ ನೀಡಿ, ‘ಈಗಾಗಲೆ ಕಾಣಿಸಿಕೊಂಡ ರೋಗಗಳ ನಿಯಂತ್ರಣದ ಬಗ್ಗೆ ಮಾಹಿತಿ ನೀಡುತ್ತ ಬಂದಿದ್ದೇವೆ. ಹವಾಮಾನ ವೈಪರೀತ್ಯದಿಂದ ರೋಗಾಣು ಪಸರಿಸಿದ್ದು ಈ ಹಂತದಲ್ಲಿ ಸಲಹೆ ನೀಡುವುದು ಕಷ್ಟ. ಅಲ್ಲದೆ, ಇಂತಹ ಸಂದರ್ಭದಲ್ಲಿ ಯಾವುದೇ ಪರಿಹಾರ ನೀಡಲು ಅವಕಾಶಗಳಿಲ್ಲ’ ಎಂದು ಸ್ಪಷ್ಠಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.