ADVERTISEMENT

ಕೋವಿಡ್‌ ಸಾವು ತಡೆಯುವ ಸವಾಲು

ಸರ್ಕಾರಿ ಆಸ್ಪತ್ರೆಗಳಲ್ಲಿ 289 ರೋಗಿಗಳು ದಾಖಲು

ನಾಗರಾಜ ಚಿನಗುಂಡಿ
Published 5 ಮೇ 2021, 19:30 IST
Last Updated 5 ಮೇ 2021, 19:30 IST
ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ಒದಗಿಸುತ್ತಿರುವ ರಾಯಚೂರಿನ ರಿಮ್ಸ್‌ ಆಸ್ಪತ್ರೆ
ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ಒದಗಿಸುತ್ತಿರುವ ರಾಯಚೂರಿನ ರಿಮ್ಸ್‌ ಆಸ್ಪತ್ರೆ   

ರಾಯಚೂರು: ಜಿಲ್ಲೆಯಲ್ಲಿ ಕಳೆದ ವರ್ಷ ಕೊರೊನಾ ಸೋಂಕು ಹರಡುತ್ತಿದ್ದ ಪ್ರಮಾಣಕ್ಕೆ ಹೋಲಿಸಿದರೆ ಈ ವರ್ಷ ಎರಡನೇ ಅಲೆ ಭಾರಿ ಪ್ರಮಾಣದಲ್ಲಿ ವ್ಯಾಪಿಸಿಕೊಳ್ಳುತ್ತಿದೆ. ಏಪ್ರಿಲ್‌ ಒಂದೇ ತಿಂಗಳಲ್ಲಿ 6,850 ಜನರಿಗೆ ಕೋವಿಡ್‌ ದೃಢಪಟ್ಟಿದೆ.

ಕಳೆದ ವರ್ಷ ಕೋವಿಡ್‌ ಆರಂಭದಲ್ಲಿ ಪ್ರತಿದಿನ ಎರಡು ಅಂಕಿಯಲ್ಲಿ ಸೋಂಕಿತರ ಸಂಖ್ಯೆ ಪತ್ತೆಯಾಗುತ್ತಿತ್ತು. ಎರಡನೇ ಅಲೆ ಆರಂಭದಲ್ಲಿಯೇ 600 ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ನಾಲ್ಕು ಅಂಕಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಪ್ರಥಮ ಸೋಂಕಿತರು ಹಾಗೂ ದ್ವಿತೀಯ ಸೋಂಕಿತರನ್ನು ಈ ವರ್ಷ ಆರೋಗ್ಯ ಇಲಾಖೆಯಿಂದ ಗುರುತಿಸುತ್ತಿಲ್ಲ. ಸೋಂಕಿತರನ್ನು ಆಸ್ಪತ್ರೆಗೆ ಕೋವಿಡ್‌ ಕೇರ್‌ ಸೆಂಟರ್‌ಗೂ ಕರೆದೊಯ್ಯುತ್ತಿಲ್ಲ.

ಕಳೆದ ವರ್ಷ ಹೊರರಾಜ್ಯಗಳಿಂದ ಬರುವವರನ್ನು ಕ್ವಾರಂಟೈನ್‌ ಮಾಡಲಾಗುತ್ತಿತ್ತು. ಈ ವರ್ಷ ಸೋಂಕಿತರಿಗೆ ಹೋಂ ಕ್ವಾರಂಟೈನ್‌ ಉಳಿಯುವುದಕ್ಕೆ ಸೂಚಿಸಲಾಗುತ್ತಿದೆ. ಈ ಮೊದಲು ಕೋವಿಡ್‌ ಸೋಂಕಿತರನ್ನು ಗುರುತಿಸುವುದಕ್ಕೆ ಸಾಧ್ಯವಾಗುತ್ತಿತ್ತು. ಈಗ ಕೋವಿಡ್‌ ದೃಢಪಟ್ಟಿರುವುದನ್ನು ಸೋಂಕಿತರಿಗೆ ಮಾತ್ರ ತಿಳಿಸಲಾಗುತ್ತದೆ. ರೋಗದ ಲಕ್ಷಣಗಳಿದ್ದವರನ್ನು ಹಾಗೂ ತೀವ್ರ ಆರೋಗ್ಯ ಸಮಸ್ಯೆಯಾದವರನ್ನು ಮಾತ್ರ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

ADVERTISEMENT

ಜಿಲ್ಲೆಯಲ್ಲಿ ಸದ್ಯ 5,182 ಸೋಂಕಿತರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. 164 ಸೋಂಕಿತರು ಲಾಡ್ಜ್‌ಗಳಲ್ಲಿ ಕ್ವಾರಂಟೈನ್‌ ಉಳಿದಿದ್ದಾರೆ. ತೀವ್ರ ಆರೋಗ್ಯದ ಸಮಸ್ಯೆ ಇರುವ 289 ಸೋಂಕಿತರಿಗೆ ರಿಮ್ಸ್‌ ಮತ್ತು ಓಪೆಕ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಗೆ ಪ್ರತ್ಯೇಕ ಹಾಸಿಗೆಗಳನ್ನು ಮೀಸಲಿಡಲಾಗಿದೆ. ಜಿಲ್ಲಾಡಳಿತವು ಒದಗಿಸಿರುವ ಮಾಹಿತಿ ಪ್ರಕಾರ, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಗಾಗಿ 750 ಕ್ಕೂ ಹೆಚ್ಚು ಹಾಸಿಗೆಗಳಿವೆ. 400 ಕ್ಕೂ ಹೆಚ್ಚು ಸೋಂಕಿತರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

2020 ನೇ ಒಂದು ವರ್ಷದಲ್ಲಿ ಕೋವಿಡ್‌ ಮಹಾಮಾರಿ ಸಂಕಷ್ಟವು ಈಗ ಒಂದೇ ತಿಂಗಳಲ್ಲಿಯೇ ಕಾಣಿಸಿಕೊಳ್ಳುತ್ತಿದೆ. ಕಳೆದ ವರ್ಷ 158 ಜನರು ಮಹಾಮಾರಿಗೆ ಮೃತಪಟ್ಟಿದ್ದರು. ಕೋವಿಡ್‌ ಎರಡನೇ ಅಲೆಯಿಂದಾಗಿ ಏಪ್ರಿಲ್‌ ಅಂತ್ಯದವರೆಗೂ ಎಂಟು ಕೋವಿಡ್‌ ಸಾವುಗಳಾಗಿವೆ. ಈಗ ಪ್ರತಿದಿನ ಸಾವುಗಳಾಗುತ್ತಿವೆ. ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆ ಹೆಚ್ಚಳವಾದಂತೆ ಸಾವುಗಳನ್ನು ತಡೆಗಟ್ಟುವುದು ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಲಿದೆ.

ಸಂಕಷ್ಟಕ್ಕೆ ಪರಿಹಾರ: ಕೋವಿಡ್‌ ಸಾವು ತಡೆಗಟ್ಟುವುದಕ್ಕೆ ಇರುವ ಒಂದೇ ಪರಿಹಾರ; ಸೋಂಕು ವ್ಯಾಪಿಸದಂತೆ ಜಾಗೃತಿ ವಹಿಸುವುದು. ಕೋವಿಡ್‌ ದೃಢಪಟ್ಟವರು ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ ಉಳಿಯಬೇಕು. ಮಾಸ್ಕ್‌ ಧರಿಸುವುದು ಮತ್ತು ಸ್ಯಾನಿಟೈಜ್‌ ಬಳಸುವ ಬಗ್ಗೆ ವೈಯಕ್ತಿಕ ಜಾಗೃತಿ ವಹಿಸುವುದು. ಅನಗತ್ಯವಾಗಿ ಜನರು ಮನೆಯಿಂದ ಹೊರಬಾರದಂತೆ ಅಗತ್ಯ ಸರಕುಗಳನ್ನು ತಲುಪಿಸುವ ವ್ಯವಸ್ಥೆ ಜಿಲ್ಲಾಡಳಿತದಿಂದ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.