ಮಸ್ಕಿ: ತಾಲ್ಲೂಕಿನಾದ್ಯಂತ ಭಾನುವಾರ ಬೆಳಗಿನ ಜಾವ ಗುಡುಗು, ಗಾಳಿಯಿಂದ ಕೂಡಿದ ಭಾರಿ ಮಳೆಯಾಗಿದೆ.
ಅಕಾಲಿಕವಾಗಿ ಸುರಿದ ಮಳೆಗೆ ಸುಂಕನೂರು, ಉದ್ಬಾಳ, ಹುಲ್ಲೂರು, ಹಾಲಾಪೂರ, ಜಂಗಮರಹಳ್ಳಿ ಸೇರಿದಂತೆ ಅನೇಕ ಕಡೆ ಭತ್ತದ ಬೆಳೆ ನೆಲಕಚ್ಚಿದ್ದು ಭತ್ತದ ಬೆಳೆಗಾರರಿಗೆ ಅಪಾರ ಪ್ರಮಾಣದ ಹಾನಿಯಾಗಿ ಅರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ರೈತರ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಯರ್ರಿತಾತ ಜಂಗಮರಹಳ್ಳಿ, ಬಸವರಾಜ ವಡಗೇರಿ ಹೇಳಿದ್ದಾರೆ.
ರಸ್ತೆಗೆ ಚರಂಡಿ ನೀರು: ಮಸ್ಕಿ ಪಟ್ಟಣದಲ್ಲಿ ಚರಂಡಿ ನೀರು ರಸ್ತೆಗೆ ಹರಿದು ರಸ್ತೆಯ ಮೇಲೆ ಎಲ್ಲೆಂದರಲ್ಲಿ ತ್ಯಾಜ್ಯ ಬಿದ್ದಿದ್ದು ಕಂಡು ಬಂತು. ಪುರಸಭೆಯ ಪೌರ ಕಾರ್ಮಿಕರು ಬೆಳಿಗ್ಗೆ ರಸ್ತೆ ಮೇಲೆ ಬಿದ್ದಿದ್ದ ತ್ಯಾಜ್ಯ ತೆಗೆದು ರಸ್ತೆ ಸ್ವಚ್ಚಗೊಳಿಸಿದರು. ಸೋಮನಾಥ ನಗರ ಸೇರಿ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗಿ ಜನರು ಪರದಾಡಿದರು.
ವಿದ್ಯುತ್ ಸಂಪರ್ಕ ಕಡಿತ: ಗಾಳಿ ಮಳೆಯಿಂದಾಗಿ ಎಲ್ಲೆಂದರಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿದ್ದರಿಂದ ರಾತ್ರಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ ಜೆಸ್ಕಾಂ ಸಿಬ್ಬಂದಿ ಮಳೆ ನಿಂತ ನಂತರ ವಿದ್ಯುತ್ ವೈರ್‌ಗಳನ್ನು ಮರು ಜೋಡಿಸಲು ಇಡೀ ರಾತ್ರಿ ಹರಸಾಹಸ ಪಟ್ಟರು.
‘ಕ್ಷೇತ್ರದ ವ್ಯಾಪಿಯಲ್ಲಿ ಭಾನುವಾರ ಬೆಳಗಿನ ಜಾವ ಗುಡುಗು ಸಿಡಿಲು ಸಹಿತ ಗಾಳಿ ಮಳೆಯಿಂದಾಗಿ ಭತ್ತ ಬೆಳೆಗಳು ನೆಲಕಚ್ಚಿದ್ದು ಕೂಡಲೇ ಸರ್ಕಾರ ಪರಿಶೀಲನೆ ಮಾಡಿ ರೈತರಿಗೆ ಪರಿಹಾರ ವಿತರಿಸಬೇಕು’ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಆಗ್ರಹಿಸಿದ್ದಾರೆ.
‘ಮಳೆಯಿಂದ ಹಾನಿಯಾದ ಭತ್ತದ ಬೆಳೆ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸೋಮವಾರದಿಂದ ನಾನೂ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ’ ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಪ್ರಜಾವಾಣಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.