ಸಿಂಧನೂರು: ಸಿಂಧನೂರಿನ ಸತ್ಯಗಾರ್ಡನ್‍ನಲ್ಲಿ ಶನಿವಾರ ನಡೆದ 11ನೇ ಮೇ ಸಾಹಿತ್ಯ ಮೇಳದ ‘ಅಸಮಾನ ಭಾರತ ಸಮಾನತೆಗಾಗಿ ಸಂಘರ್ಷ ಅಂದು-ಇಂದು’ ಬೃಹತ್ ವೇದಿಕೆ ನಿರ್ಮಾಣವಾಗಿದ್ದು, ವೇದಿಕೆಯ ಮೇಲೆ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ವಿಚಾರವಾದಿಗಳು, ಹೋರಾಟಗಾರರು ಆಸೀನರಾಗಿದ್ದರು. ಆದರೆ ಮೇ ಸಾಹಿತ್ಯ ಮೇಳದ ಪ್ರವರ್ತಕ ಬಸವರಾಜ ಸೂಳಿಬಾವಿ ಅವರು ಮಾತ್ರ ವೇದಿಕೆಯಲ್ಲಿ ಕಾಣಿಸಿಕೊಳ್ಳದೆ ಅಡುಗೆಯ ಕೋಣೆ, ಹೊರಾಂಗಣದಲ್ಲಿ ಜನರೊಂದಿಗೆ ಕುಶಲೋಪರಿ ವಿಚಾರಿಸುತ್ತಾ ತಿರುಗಾಡುತ್ತಿರುವುದು ವಿಶೇಷವಾಗಿ ಕಂಡುಬಂದಿತು.
‘ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹತ್ತು ಮೇ ಸಾಹಿತ್ಯ ಮೇಳಗಳು ಬಸವರಾಜ ಸೂಳಿಬಾವಿ ಅವರ ನೇತೃತ್ವದಲ್ಲಿಯೇ ನಡೆದಿವೆ. ಆಗಲೂ ಅವರು ಎಂದೂ ವೇದಿಕೆ ಹತ್ತಿಲ್ಲ. ಭಾಷಣ ಮಾಡಿಲ್ಲ. ಉಪಸ್ಥಿತರಾಗಿಯೂ ಕುಳಿತಿಲ್ಲ’ ಎನ್ನುತ್ತಾರೆ ಅವರ ನಿಕಟವರ್ತಿ ಎಂ.ಕೆ.ಸಾಹೇಬ್.
‘ಮೇ ಸಾಹಿತ್ಯ ಮೇಳದಿಂದ ಯುವ ಬರಹಗಾರರಲ್ಲಿ ಜನಪರ ಕಾಳಜಿ ಹುಟ್ಟಿಸುವುದು, ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆಯ ಪರಿಸರ ಸೃಷ್ಟಿಸುವುದೇ ಅವರ ಮೂಲ ಧ್ಯೇಯವಾಗಿದೆ. ಅವರು ಹಮ್ಮಿಕೊಳ್ಳುವ ಮೇ ಸಾಹಿತ್ಯ ಮೇಳದಿಂದ ವಿವಿಧ ಜಿಲ್ಲೆಗಳಲ್ಲಿ ನೂರಾರು ಪ್ರಗತಿಪರ ಬರಹಗಾರರು, ಕಲಾವಿದರು, ಹೋರಾಟಗಾರರು, ಸೃಷ್ಟಿಯಾಗಿದ್ದಾರೆ’ ಎಂದು ಅವರ ಶಿಷ್ಯೆ ಪೂಜಾ ಸಿಂಗೆ ಅಭಿಮಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.