ಸಿಂಧನೂರು: ‘ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರ ಸತತ ಪ್ರಯತ್ನದಿಂದ ನಗರದ 100 ಹಾಸಿಗೆಯ ತಾಲ್ಲೂಕು ಆಸ್ಪತ್ರೆ 200 ಹಾಸಿಗೆ ಸಾಮರ್ಥ್ಯದ ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿದೆ’ ಎಂದು ಕಾಂಗ್ರೆಸ್‌ನ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ರಾಗಲಪರ್ವಿ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಜನಸ್ಪಂದನಾ ವೇದಿಕೆ ಮೂಲಕ ‘ನಮ್ಮ ಆರೋಗ್ಯಕ್ಕಾಗಿ ನಮ್ಮ ಕರ್ತವ್ಯ’ ಧ್ಯೇಯ ವಾಕ್ಯದೊಂದಿಗೆ ತಾಲ್ಲೂಕಿನ ಜನರ ಆರೋಗ್ಯ ರಕ್ಷಣೆಗಾಗಿ ಬಸನಗೌಡ ಬಾದರ್ಲಿ ಹಲವಾರು ಜನೋಪಯೋಗಿ ಕೆಲಸ ಕೈಗೊಂಡಿದ್ದಾರೆ’ ಎಂದರು.
‘ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಸಿಂಧನೂರಿನಿಂದ ಹಾದು ಹೋಗುತ್ತಿರುವುದರಿಂದ ಅಪಘಾತಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿವೆ. ಅದಕ್ಕಾಗಿ ಸುಸಜ್ಜಿತ ತುರ್ತು ಚಿಕಿತ್ಸಾ ನಿಗಾ ಘಟಕ ಹಾಗೂ ಮತ್ತಿತರ ಸೌಕರ್ಯ ಒದಗಿಸುವ ಕಟ್ಟಡಕ್ಕೆ ₹3 ಕೋಟಿ ಹಣವನ್ನು ತಮ್ಮ ಅನುದಾನದಲ್ಲಿ ನೀಡಿದ್ದಾರೆ’ ಎಂದು ಹೇಳಿದರು.
‘ವಿಧಾನಸಭಾ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಯ ಮೂಲಕ ಸಿಂಧನೂರಿಗೆ ಕಾರ್ಪೋರೇಟ್ ಮಾದರಿಯ ಆಸ್ಪತ್ರೆ ನಿರ್ಮಿಸಬೇಕು. 100 ಹಾಸಿಗೆ ಆಸ್ಪತ್ರೆಯನ್ನು 200 ಹಾಸಿಗೆಯ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ಮನವಿ ಮಾಡಿಕೊಂಡ ಕಾರಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇ 25ರಂದು ಜಿಲ್ಲಾ ಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿದೆ’ ಎಂದು ತಿಳಿಸಿದರು.
ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಮಾತನಾಡಿದರು.
ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಿವಕುಮಾರ ಜವಳಿ, ಮುಖಂಡರಾದ ಹೊನ್ನನಗೌಡ ಬೆಳಗುರ್ಕಿ, ವೆಂಕಗೌಡ ಗಿಣಿವಾರ, ಸೈಯದ್ ಯುನೂಸ್ ಪಾಷಾ, ಅಮರೇಶ ಗಿರಿಜಾಲಿ, ಮಲ್ಲನಗೌಡ ಹುಡಾ, ಖಾಜಾ ಹುಸೇನ ಹಾಗೂ ವೆಂಕನಗೌಡ ಕುನ್ನಟಗಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.